‘ಸ್ಟಾರ್’ ಸಿನಿಮಾಗಳು ಕಲಿಸೋದೇನು..?!

ನಮ್ಮ ಇಂದಿನ ಸಿನಿಮಾಗಳು ಮಕ್ಕಳ‌ ಮೇಲೆ ಬೀರುತ್ತಿರುವ ಪರಿಣಾಮಗಳೇನು? ಈ ಬಗ್ಗೆ ಯೋಚಿಸಿದಾಗ ನಿಜಕ್ಕೂ ಆತಂಕ ಮೂಡುವುದು ಸಹಜ. ಯಾಕೆಂದರೆ ಮನರಂಜನೆ ಮಾತ್ರ ಗುರಿಯಾಗಿಸಿಕೊಂಡು ನೋಡಿದರೂ ಬಹಳಷ್ಟು ಬಾರಿ ಚಿತ್ರಗಳಲ್ಲಿ ಸ್ಟಾರ್ ನಾಯಕರ ಅದ್ಧೂರಿತನವೇ ಹಾಸ್ಯ, ಮನರಂಜನೆ ಎಲ್ಲವೂ ಆಗಿರುತ್ತದೆ. ಕೇವಲ ಕೆಲವು ದಶಕಗಳ ಹಿಂದಿನ‌ ಚಿತ್ರಗಳಲ್ಲಿನ ಪರಿಸ್ಥಿತಿಯನ್ನು ಅರ್ಥವಾಗದಂತೆ ಮಾಡುವ ಮಟ್ಟಕ್ಕೆ ಇಂದಿನ‌ ಸಿನಿಮಾಗಳಿವೆ! ಅದನ್ನು ಕಾಣುವ ಮಕ್ಕಳಿಗೆ ಸಮಾಜ ಸ್ಥಿತಿಗತಿಯನ್ನು ತಾಯಿಯೊಬ್ಬಳು ಯಾವರೀತಿ ಸೂಕ್ಷ್ಮವಾಗಿ ವಿವರಿಸಬೇಕಾಗುತ್ತದೆ ಮತ್ತು ಇಂದಿನ‌ ಸಿನಿಮಾಗಳು ಅಂಥ ಪೋಷಕರನ್ನು ಯಾವರೀತಿ ಇಬ್ಬಂದಿಗೆ‌ ಸಿಲುಕಿಸುತ್ತದೆ ಎನ್ನುವುದನ್ನು ತಮ್ಮ ಆಕರ್ಷಕ ಶೈಲಿಯಿಂದ ವಿವರಿಸಿದ್ದಾರೆ ಜನಪ್ರಿಯ ಬರಹಗಾರ್ತಿ ಕುಸುಮಬಾಲೆ ಆಯರಹಳ್ಳಿ.

ನಿನ್ನೆ‌ ಟಿವಿಯಲ್ಲಿ ‘ಗಣೇಶನ ಮದುವೆ’ ಸಿನೆಮಾ‌ ಬಂದಿತ್ತು. ಹೀರೋಯಿನ್ ನ ಭೇಟಿಯಾಗಲು ಅನಂತನಾಗ್ ಸೈಕಲ್ಲಿನಲ್ಲಿ ಬರೋ ದೃಶ್ಯ. ಪಕ್ಕದಲ್ಲಿದ್ದ‌ ಸಮರ್ಥ, : “ಇದೇನಮ್ಮ ಹೀರೋ ಸೈಕಲಲ್ ಬರ್ತಾ‌ ಇದಾನೆ” ಅಂದ.
ನಾನು: ಯಾಕೋ ಬರಬಾರ್ದ?
ಸಮರ್ಥ: ಏನಮ್ಮ, ಹೀರೋಗಳು‌ ಅಂದ್ರೆ ಎಂತೆಂತಾ ಕಾರಲ್ ಬರ್ತಾರೆ. ಹೋಗ್ಲಿ ಒಂದ್ ಬೈಕಾದ್ರೂ ಬೇಡ್ವ?
ಉಫ್..ನಾನು ಫುಲ್ ಆ ಕಾಲದ ಸೋಷಿಯೋಎಕನಾಮಿಕ್ ಕಂಡಿಷನ್ನುಗಳನ್ನು ವಿವರಿಸಬೇಕಾಯ್ತು. ಎಷ್ಟೇ ಹೇಳಿದರೂ. ಒಂದ್ ಕಾರೂ ಇರದೇ ಸಿನಿಮಾ ಹೀರೋ ಅನಿಸ್ಕೊಳೋದ್ ಹೇಗೆ ಅನ್ನೋದು ಅವನ ತಲೆಲಿ ಓಡ್ತಾನೇ ಇತ್ತು. ನಮ್ ಹಿಂದಿನವರ ಎತ್ತಿನ ಗಾಡಿಗಳಿಗೆ ಹೋಲಿಸಿದರೆ ನಮ್ಮದು ಉತ್ತಮ ಸ್ಥಿತಿ. ನಮ್ ಜನರೇಷನ್ನಿಗೆ ಹೋಲಿಸಿದರೆ ಈಗಿನವರ ಸೌಲಭ್ಯ ಹೆಚ್ಚಿನದು. ಇದರ ಪರಿಣಾಮಗಳು, ಇವತ್ತಿನ ಸಿನೆಮಾಗಳ ಹೀರೋಗಳ ವೈಭವೀಕರಣದ ಎಫೆಕ್ಟಿರಬಹುದು ಅವನ ಯೋಚನೆ.

ಒಮ್ಮೆ ನನ್ನ ಗೆಳೆಯರು,ಯಾವುದೋ ಸಂಸ್ಥೆಯ ಸಿಇಓ ತೋಟಕ್ಕೆ ಬರುವುದಿತ್ತು. ಇವನು ಯಾಕೋ ಕಾದು ಕೂತಿದ್ದ. ಅವರು ಬಂದ ಮೇಲೆ ಹೇಳಿದ ‘ ಇದೇನಮ್ಮ ಸಿಇಓ ಅಂದೆ. ಇಂತಾ‌ ಕಾರಲ್ ಬಂದಿದಾರೆ’ ಅವನು ಆಗಷ್ಟೇ ನೋಡಿದ್ದ ತೆಲುಗಿನ ಮಹರ್ಷಿ ಸಿನೆಮಾದ ಎಫೆಕ್ಟಾಗಿತ್ತು ಅದು. ಸಿಇಓ ಅಂದರೆ ಆ ಸಿನೆಮಾದ ಮಹೇಶ್ ಬಾಬುವಿನ ಬಲುದುಬಾರಿ ಕಾರುಗಳೇ ಅವನ‌ ಕಲ್ಪನೆಯಲ್ಲಿ ಓಡುತ್ತಿದ್ದವು.
ಜಗತ್ತು ಬದಲಾಗುತ್ತಿರುತ್ತದೆ. ಹೊಸ ಸೌಲಭ್ಯಗಳು, ಹೊಸ ತಂತ್ರಜ್ಞಾನ. ‌’ನಾನ್ ದೊಡ್ಡೋನಾಗೋ ಹೊತ್ಗೆ ಈ ಆಡಿ, ಡಸ್ಟರ್, ಕಿಯಾ ಎಲ್ಲ ಅಂಬಾಸಿಡರ್ ಥರ ಆಗಿರತ್ತೆ ಕಣಮ್ಮ’ ಅನ್ನೋ ಮಗನ‌ ಮಾತೂ ನಿಜವೇ ಆಗಬಹುದು. ಆದರೆ ಸಂತೃಪ್ತಿ? ನಮಗೆ ಒಂದು ಸೈಕಲ್ ಕೊಡುತ್ತಿದ್ದ ಖುಷಿಯನ್ನು ಈಗಿನ ಮಕ್ಳಿಗೆ ಕಾರು ಕೊಡಲ್ಲ. ಅವರಿಗೆ ಜಗತ್ತಿನ ದುಬಾರೀ ಕಾರುಗಳ ಪರಿಚಯ ಮಾಡಿಕೊಟ್ಟಿರುತ್ತದೆ ಹೊಸ ತಂತ್ರಜ್ಞಾನ. ಯಾವುದಿದ್ದರೂ, ನಮ್ಮ‌ ಬಳಿ ಇಲ್ಲದ ಅದಕ್ಕಿಂತ ಹೆಚ್ಚಿನದೂ ಒಂದಿರುತ್ತದೆ ಅವರ ಮನಸ್ಸಲ್ಲಿ. ನಾವು ನಮ್ ಮೇಷ್ಟ್ರುಗಳ ಕ್ಲಾಸುಗಳ ಕಿಟಕಿಯಿಂದ ಜಗತ್ತನ್ನು ನೋಡುತ್ತಿದ್ದೆವು. ಈಗ ಮೇಷ್ಟ್ರಿಗೂ ಮಕ್ಕಳಿಗೂ ಒಟ್ಟಿಗೇ ನವಮಾಧ್ಯಮ ಗುರುವಿನ ಪಾಠ. ಅನಗತ್ಯ ಮತ್ತು ಹೆಚ್ಚೆಚ್ಚು ತಿಳಿಯುವಿಕೆ ಚಿಕ್ಕ ಚಿಕ್ಕ ಸಂತೋಷಗಳನ್ನು ಕಿತ್ತುಕೊಳ್ತವೆ ಅನಿಸುತ್ತದೆ.

ಹಳೆಯ ಸಿನೆಮಾ ನೋಡುತ್ತಾ ಅಳುವ ಸೀನುಗಳಿಗೆ ಮಗ ನಗುವಾಗ, ‘ರಕ್ತ ಅಂತೆ . ಅದು‌ ಟೊಮೊಟೋ ಸಾಸ್ ಅಂತ ಎಷ್ಟ್ ಚೆನಾಗ್ ಗೊತ್ತಾಗ್ತಿದೆ ನೋಡು’ ಅಂತ ಅನ್ನುವಾಗ, ಈಗಿನ ಮಕ್ಕಳ ವಾಸ್ತವ ಜ್ಞಾನಕ್ಕೆ ಖುಷಿಪಡಬೇಕೋ. ಅವನ‌ ವಯಸ್ಸಲ್ಲಿ ಅದನ್ನು ರಕ್ತವೇ ಅಂತ ಆ ಕ್ಷಣಕ್ಕಾದರೂ ನಂಬಿ‌ ಬಾವುಕವಾಗುತ್ತಿದ್ದ ನನ್ನ ಮುಗ್ದತೆಗೇ ಒಂದು ಮಾರ್ಕು ಹೆಚ್ವಿಗೆ ಕೊಡಬೇಕೋ ಗೊತ್ತಾಗಲ್ಲ. ನಮಗೆ ಬ್ಲಾಕ್ ಬೋರ್ಡು, ಬಳಪ, ಭೂಪಟಗಳ ಮೇಲೆ ದೇಶ, ಜಗತ್ತು ಕಾಣುತ್ತಿತ್ತು. ಈಗ ಗೂಗಲ್ ಮ್ಯಾಪು. ಇಂತಾ ಕಾಲದ ಮಕ್ಕಳಿಗೆ ಹೀರೋ ಸೈಕಲ್ಲಿನಲ್ಲಿ ಬರಬಹುದು ಎಂಬುದನ್ನೂ, ಕಾರಲ್ಲಿ ಬಂದು ಕಾಲಲ್ಲಾಡಿಸೋದೇ ಹೀರೋಗಿರಿ ಅಲ್ಲವೆಂದೂ ಒಪ್ಪಿಸುವತನಕದ ತಾಯಂದರ ತ್ರಾಸವಿದೆಯಲ್ಲಾ…..

Recommended For You

Leave a Reply

error: Content is protected !!
%d bloggers like this: