ನವ ನಿರ್ದೇಶಕ ಸಂದೇಶ್ ಕೃಷ್ಣಮೂರ್ತಿನಿರ್ದೇಶನದ ಚಿತ್ರ `ಅವನಲ್ಲಿ ಇವಳಿಲ್ಲಿ’ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಸಂದೇಶ್ ಕೃಷ್ಣಮೂರ್ತಿಯವರು ತಮ್ಮ ಹೆಸರಿಗೆ ತಕ್ಕಂತೆ ಚಿತ್ರದಲ್ಲೊಂದು ಸಂದೇಶ ನೀಡುವ ಪ್ರಯತ್ನ ಮಾಡಿದ್ದಾರೆ. ಅದರ ಜೊತೆಗೆ ಇದೊಂದು ಲವ್-ಆಕ್ಷನ್ ಡ್ರಾಮ ಆಗಿದ್ದು ಪ್ರೇಕ್ಷಕರನ್ನು ಸೆಳೆಯುವುದೆಂಬ ನಿರೀಕ್ಷೆ ಅವರಲ್ಲಿದೆ.
ಸಂದೇಶ್ ಕೃಷ್ಣಮೂರ್ತಿಯವರು ಸುಮಾರು 15 ವರ್ಷಗಳ ಹಿಂದೆ ನಿರ್ದೇಶಕರಾಗಲೆಂದೇ ತೀರ್ಥಹಳ್ಳಿಯಿಂದ ಗಾಂಧಿನಗರಕ್ಕೆ ಬಂದವರು. ಆದರೆ ಅವರು ಆರಿಸಿಕೊಂಡಿದ್ದು ಸಂಕಲನದ ಕ್ಷೇತ್ರವನ್ನು! ಅದಕ್ಕೆ ಕಾರಣ ಎಡಿಟಿಂಗ್ ಮಾಡುತ್ತಲೇ ನಿರ್ದೇಶನದ ರೀತಿಯನ್ನು ಕಲಿಯಬಹುದೆನ್ನುವ ಚಾಣಾಕ್ಷತೆ. ಆ ಬುದ್ಧಿವಂತಿಕೆ ಅವರ ಸಿನಿಮಾದ ಕತೆ ಚಿತ್ರಕತೆಯಲ್ಲಿಯೂ ಕಾಣಬಹುದು. ಚಿತ್ರದ ನಾಯಕಿ ವಿದೇಶದಿಂದ ಬರುವವಳು. ನಾಯಕ ವೈಲ್ಡ್ ಲೈಫ್ ಫೊಟೋಗ್ರಾಫರ್. ಒಟ್ಟಿನಲ್ಲಿ ಎರಡು ದಿಕ್ಕುಗಳ ಸಂಗಮ. ಬಹುಶಃ ಅದೇ ಕಾರಣಕ್ಕೆ ಶೀರ್ಷಿಕೆ ತಕ್ಷಣ ಹೋಲಿಕೆಯಾಗುತ್ತದೆ. ಅದರಾಚೆಗೆ ಅವರಿಬ್ಬರ ಮನಸುಗಳ ಬಂಧನ, ಸ್ಪಂದನಗಳ ಚಂದಾನ ತಿಳಿಯಬೇಕಾದರೆ ನೀವೆಲ್ಲ ಚಿತ್ರಮಂದಿರಕ್ಕೆ ಹೋಗಲೇಬೇಕು.
ಚಿತ್ರದ ನಾಯಕರಾಗಿ ಯುವ ನಟ ಪ್ರಭು ಮುಂಡ್ಕೂರು ನಟಿಸಿದ್ದಾರೆ. ಮೊದಲ ನೋಟಕ್ಕೆ ರಾಮ್ ಚರಣ್ ತೇಜರನ್ನು ನೆನಪಿಸುವ ಈ ಕರಾವಳಿಯ ಚೆಲುವನಿಗೆ ಒಂದೊಳ್ಳೆಯ ಪಾತ್ರವೇ ಚಿತ್ರದಲ್ಲಿ ದೊರಕಿದೆ. ನಾಯಕಿ ಜಾಹ್ನವಿ ಜ್ಯೋತಿಗೂ ನಟನೆಗೆ ಪ್ರಾಧಾನ್ಯತೆ ಇರುವ ಪಾತ್ರ. ಮತ್ತೋರ್ವ ನಾಯಕಿಯಾಗಿ ದುನಿಯಾ ರಶ್ಮಿ ನಟಿಸಿದ್ದಾರೆ. ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚಿನ್ನೋಜಿರಾವ್ ಸಂಗೀತದಲ್ಲಿ ಎರಡು ಮೆಲೋಡಿ ಸೇರಿದಂತೆ ಒಟ್ಟು ನಾಲ್ಕು ಹಾಡುಗಳು ಚಿತ್ರದಲ್ಲಿವೆ. ಗೌಸ್ಪೀರ್ ಮತ್ತು ಕೆ ಕಲ್ಯಾಣ್ ರಚಿಸಿರುವ ಗೀತೆಗಳಿಗೆ ವಾಸುಕಿ ವೈಭವ್, ಜಿಮ್ಮಿ ಫ್ರಾನ್ಸಿಸ್, ಚೇತನ್ ನಾಯಕ್, ಮಾಧುರಿ ಶೇಷಾದ್ರಿ ಮೊದಲಾದವರು ಹಾಡಿದ್ದಾರೆ. ಚಿತ್ರದ ಪ್ರಮುಖ ದೃಶ್ಯಗಳನ್ನು ಬೆಂಗಳೂರು, ಮೈಸೂರು, ಶ್ರೀರಂಗಪಟ್ಟಣ ಮತ್ತು ಸಕಲೇಶಪುರಗಳಲ್ಲಿ ಚಿತ್ರೀಕರಿಸಲಾಗಿದೆ. ರವಿ ಕಿಶೋರ್ ಛಾಯಾಗ್ರಾಹಕರಾಗಿದ್ದು, ಜೈ ಜಗದೀಶ್, ಹನುಮಂತೇಗೌಡ, ಸುಚಿತ್ರಾ, ಸಂಗೀತಾ, ವೀಣಾ ಪೊನ್ನಪ್ಪ ಮೊದಲಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ.
“ಪ್ರತಿಯೊಬ್ಬರ ಬದುಕಿನಲ್ಲಿಯೂ ನೋವಿರುತ್ತದೆ. ಆಘಾತಗಳು ನಡೆದಿರುತ್ತವೆ. ಆದರೆ ಅದನ್ನೇ ಮನಸ್ಸಲ್ಲಿ ಇರಿಸಿಕೊಂಡು ಜೀವನ ಸಾಗಿಸಿದರೆ ಜೊತೆಯಲ್ಲಿರುವವರಿಗೂ ನೋವು ಕೊಟ್ಟಂತೆ ಆಗುತ್ತದೆ. ಅದರ ಬದಲು ಹಿಂದೆ ನಡೆದಿರುವುದನ್ನೆಲ್ಲ ಮರೆತು ಪ್ರಸ್ತುತ ಬದುಕನ್ನು ಕೂಷಿಯಾಗಿ ನಡೆಸಬೇಕು” ಎನ್ನುವುದು ಚಿತ್ರದ ಸಂದೇಶ ಎನ್ನುತ್ತಾರೆ ಸಂದೇಶ್ ಕೃಷ್ಣಮೂರ್ತಿ. ಸಂಕಲನಕಾರರಾಗಿ `ಪ್ರೀತಿ ಇಲ್ಲದ ಮೇಲೆ’ ಎನ್ನುವ ಜನಪ್ರಿಯ ಧಾರಾವಾಹಿಯಿಂದ ಆರಂಭವಾದ ಇವರ ಜರ್ನಿಯಲ್ಲಿ ಕನ್ನಡದ ಇಪ್ಪತ್ತರಷ್ಟು ಪ್ರಮುಖ ಧಾರಾವಾಹಿಗಳು ತೆರೆಕಂಡಿವೆ. ಇದೀಗ ತಮ್ಮ ನಿರ್ದೇಶನದ ಸಿನಿಮಾದ ಎಡಿಟಿಂಗ್ ಕೂಡ ತಾವೇ ಮಾಡಿದ್ದಾರೆ. ಸ್ವತಃ ಕತೆ, ಚಿತ್ರಕತೆ ಸಂಭಾಷಣೆ ಬರೆದಿದ್ದರೂ ಕೂಡ ಸಂಕಲನಕಾರರಾಗಿ ಚಿತ್ರವನ್ನು ಎರಡು ಗಂಟೆ ಎರಡು ನಿಮಿಷಗಳಿಗೆ ಸೀಮಿತಗೊಳಿಸುವಲ್ಲಿ ಗೆದ್ದಿದ್ದಾರೆ.
ನಿರ್ಮಾಪಕರು ಲಕ್ಷ್ಮೀನಾರಾಯಣ ರಾಜು ಅರಸ್ ಅವರ ಎಲ್ ಎನ್ ಆರ್ ಪ್ರೊಡಕ್ಷನ್ಸ್ ಗೆ ಇದು ಪ್ರಥಮ ಚಿತ್ರ. ಪ್ರಥಮ ಹೆರಿಗೆಯ ಎಲ್ಲ ನೋವುಗಳಿಗೆ ಲಾಕ್ಡೌನ್ ಕೂಡ ಕಲಶ ಇಟ್ಟಂತೆ ಆಗಿದೆ. ಇದೇ 25ರ ಶುಕ್ರವಾರ ಚೊಚ್ಚಲ ಚಿತ್ರ ತೆರೆಗೆ ಬರುತ್ತಿರುವ ಆತಂಕ, ಆವೇಗ ಎಲ್ಲವೂ ಅವರಲ್ಲಿದೆ. ಗಾಂಧಿನಗರದ `ತ್ರಿವೇಣಿ’ ಸೇರಿದಂತೆ ರಾಜ್ಯಾದ್ಯಂತ ಒಟ್ಟು ಎಂಬತ್ತರಷ್ಟು ಪರದೆಗಳಲ್ಲಿ ಸಿನಿಮಾ ಪ್ರದರ್ಶನಗೊಳ್ಳಲಿದೆ. ಸದಭಿರುಚಿಯ ಚಿತ್ರವನ್ನು ಪ್ರೇಕ್ಷಕರು ವೀಕ್ಷಿಸಿ ಪ್ರೋತ್ಸಾಹಿಸುತ್ತಾರೆನ್ನುವ ಭರವಸೆಯಲ್ಲಿ ಚಿತ್ರತಂಡ ಇದೆ.