
ಮೊದಲೇ ಚಿತ್ರರಂಗ ದೊಡ್ಡ ನಷ್ಟದಲ್ಲಿದೆ. ತಯಾರಾದ ಸಿನಿಮಾಗಳನ್ನು ಬಿಡುಗಡೆ ಮಾಡಲಾಗದೆ ನಿರ್ಮಾಪಕರು, ಬಡ್ಡಿಗೆ ಸಾಲ ತೆಗೆದುಕೊಂಡವರು ಥಿಯೇಟರ್ ಯಾವಾಗ ಯಥಾಸ್ಥಿತಿಗೆ ತಲುಪಲಿದೆ ಎನ್ನುವ ಕಾಯುವಿಕೆಯಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಅನಿಮಲ್ ವೆಲ್ಫೇರ್ ಸರ್ಟಿಫಿಕೇಟ್ ಬೋರ್ಡ್ ಮೂಲಕ ಸರ್ಕಾರ ಗಾಯದ ಮೇಲೆ ಬರೆ ಎಳೆಯುವ ಕ್ರಮಕ್ಕೆ ಮುಂದಾಗಿದೆ. ಈ ಬಗ್ಗೆ ಕನ್ನಡ ಚಿತ್ರರಂಗದ ಭರವಸೆಯ ಸಂಭಾಷಣೆಕಾರ, ಯುವ ನಿರ್ದೇಶಕ ವೀರೇಂದ್ರ ಮಲ್ಲಣ್ಣ ವಿರೋಧ ವ್ಯಕ್ತಪಡಿಸಿದ್ದಾರೆ.
“ಐದುನೂರು ರೂಪಾಯಿಗಳಿಂದ ಸೀದಾ ಮುವತ್ತು ಸಾವಿರ ರೂಪಾಯಿ.. ಅರವತ್ತು ಪಟ್ಟು!! ಬರಿ ಇಷ್ಟೇ ಅಲ್ಲ. ಅರ್ಜಿ ಸಲ್ಲಿಸಲು 1100 ರೂಪಾಯಿ ಇದ್ದದ್ದು 5000/- ಆಗಿದೆ. ನಾಯಿ, ಹಸು, ಇತರೆ ಯಾವುದೇ ಪರ್ಫಾರ್ಮಿಂಗ್ ಅನಿಮಲ್ ಚಾರ್ಜಸ್ 500/- ರೂಪಾಯಿ ಇದ್ದದ್ದು 5,000/-ಕ್ಕೆ ಏರಿಸಿದ್ದಾರೆ. ಒಂದು ಕುದುರೆಗೆ ಈ ಮುನ್ನ 500/- ಇದ್ದದ್ದು ಈಗ 2000/- ಚಿತ್ರೀಕರಣಪೂರ್ವ ಅನುಮತಿಗೆ ಶೂನ್ಯದಿಂದ 25,000/- ಚಿತ್ರಿಕರಣಾನಂತರದ ಅನುಮತಿಗೆ ಸೀದಾ 30,000/- ಒಟ್ಟು ಎಪ್ಪತ್ತು ಸಾವಿರ ಅಫಿಷಿಯಲ್.. (ಅಫಿಷಿಯಲ್ಲಾಗಿ ಕೆಲಸ ಸುಲಭಕ್ಕೆ ಮುಗಿಯುವುದಿಲ್ಲ ಬಿಡಿ..) ಪ್ರಯಾಣ ವೆಚ್ಚ ಸೇರಿ ಈ ಮೊದಲು ಒಟ್ಟಾರೆ ಕೆಲವು ಸಾವಿರಗಳಲ್ಲಿ ಮುಗಿಯುತ್ತಿದ್ದದ್ದು ಈಗ ಲಕ್ಷ ದಾಟುತ್ತದೆ.
ಈ ಹಿಂದೆ ಚೆನ್ನೈನಲ್ಲಿ ಇದ್ದ ಅನಿಮಲ್ ಬೋರ್ಡ್ ಕಛೇರಿಯನ್ನು ಉತ್ತರಭಾರತಕ್ಕೆ ಶಿಫ್ಟ್ ಮಾಡಿತು, ಅಲ್ಲಿನ ಅರ್ಜಿಗಳು, ರೂಲ್ಸು-ಕ್ಲಾಸು ಹಾಗೂ ಪ್ರೊಸೀಜರುಗಳು ಪ್ರಚಂಡ ಸಿನಿಮಾ ನಿರ್ದೇಶಕರಿಗೂ ಸಹ ಅರ್ಥವಾಗದಂತವು. ಈಗ ರೇಟ್ ಕಾರ್ಡ್ ಜಾಸ್ತಿ ಮಾಡಿದಾರೆ.. ಒಂದು ಸಿನಿಮಾಗೆ 70,000/- ವರ್ಷಕ್ಕೆ ಸುಮಾರು 800 ಸಿನಿಮಾಗಳು ಹಾಗೂ ಸಾವಿರಕ್ಕೂ ಹೆಚ್ಚು ಜಾಹೀರಾತುಗಳಲ್ಲಿ ಪ್ರಾಣಿಗಳನ್ನು ಬಳಸಲಾಗುತ್ತದೆ. ಒಟ್ಟು ಮೊತ್ತ ಸುಮಾರು ಹತ್ತು ಕೋಟಿಗಳಷ್ಟು. ದೊಡ್ಡ ಸಿನಿಮಾ ಮಾಡುವವರಿಗೆ ಲಕ್ಷವೆಂಬುದು ಸಮಸ್ಯೆಯಾಗಲಾರದು. ಆದರೆ ಕೆಲವು ಲಕ್ಷಗಳಲ್ಲಿ ಸಿನಿಮಾ ಮಾಡುವ ಹೊಸಬರಿಗೆ ಇದು ದೊಡ್ಡ ಬರೆ…! ರೇಟು ಜಾಸ್ತಿ ಮಾಡಬಾರದು ಅಂತಲ್ಲ, ಕಾಲಕಾಲಕ್ಕೆ ದರಗಳನ್ನು ಹೆಚ್ಚಿಸಲೇಬೇಕು, ಆ ವಿಭಾಗದಲ್ಲಿ ಕೆಲಸ ಮಾಡುವ ಸರ್ಕಾರಿ ಉದ್ಯೋಗಿಗಳಿಗೆ ಪಾಪ ಸಂಬಳ ಕೊಡಲೇಬೇಕು ಸರ್ಕಾರ. ಆದ್ರೆ ಈ ಪರಿ ಉಸಿರುಗಟ್ಟುವಂತಹ ಏರಿಕೆ!!!!!!”
