ದಶಕಗಳ ಹಿಂದೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಾಡಲು ಹೊರಟಿದ್ದ ಚಿತ್ರದ ಹೆಸರು ಚಂದಮಾಮ. ಇದೀಗ ಅವರ ಕಟ್ಟಾ ಅಭಿಮಾನಿಯೋರ್ವರು ಅದೇ ಹೆಸರಿನಲ್ಲಿ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದಾರೆ. ಅವರೇ ಮಧು ವೈ.ಜಿ ಹಳ್ಳಿ. ಅಂದಹಾಗೆ ಇವರ ಚಂದಮಾಮನಿಗೂ ರವಿಚಂದ್ರನ್ ಮಾಡಲು ಬಯಸಿದ್ದ ಕತೆಗೂ ಸಂಬಂಧವಿಲ್ಲ. ಇದು ಒಂದು ಬೆಳದಿಂಗಳ ರಾತ್ರಿ ಶುರುವಾಗಿ ಮರುದಿನ ಸಂಜೆಯೊಳಗೆ ಮುಗಿಯುವಂಥ ಕತೆ. ಹಾಗಾಗಿಯೇ ಚಂದಮಾಮ ಎನ್ನುವ ಹೆಸರು ಎಲ್ಲ ಕಾರಣದಿಂದಲೂ ಸೂಕ್ತವೆನಿಸಿ ಆಯ್ಕೆ ಮಾಡಿಕೊಂಡೆ ಎನ್ನುತ್ತಾರೆ ಮಧು.
“ಇದು ರೆಟ್ರೋ ಶೈಲಿಯ ಕತೆ. ಯಾಕೆಂದರೆ ನಲವತ್ತು ವರ್ಷಗಳ ಹಿಂದೆ ನಡೆದಿರಬಹುದಾದ ಒಂದು ಘಟನೆಯನ್ನು ಚಿತ್ರವಾಗಿಸುತ್ತಿದ್ದೇನೆ. ಅಂದರೆ ಇದು ಯಾವುದೇ ಒಂದು ನೈಜ ಘಟನೆ ಆಧಾರಿತ ಚಿತ್ರವಲ್ಲ. ಆದರೆ ನಾನು ಕೂಡ ಹಳ್ಳಿಗಾಡಿನವನಾದ ಕಾರಣ, ಹಳ್ಳಿಗಳಲ್ಲಿ ನಡೆಯುವಂಥ ಘಟನೆಗಳನ್ನು ಸ್ಫೂರ್ತಿಯಾಗಿಸಿಕೊಂಡು ಚಿತ್ರದ ಕತೆ ಮಾಡಿದ್ದೇನೆ. ಇದು ಸುಮಾರು 1984ರ ಕಾಲಘಟ್ಟದಲ್ಲಿ ನಡೆಯುವ ಕತೆ” ಎನ್ನುವ ನಿರ್ದೇಶಕ ಮಧು ವೈ.ಜಿ ಹಳ್ಳಿಯವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನವರು. ಕಳೆದ ಒಂದು ದಶಕದಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾ ಬಂದಿರುವ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಇಪ್ಪತ್ತನಾಲ್ಕು ಗಂಟೆಯಲ್ಲಿ ನಡೆಯುವ ಕತೆಯಲ್ಲಿ ಅವಿದ್ಯಾವಂತ ಜೋಡಿಯ ಪ್ರೇಮಕತೆ ಮತ್ತು ಅದರ ಮುಂದಿನ ಬೆಳವಣಿಗೆಯನ್ನು ತೋರಿಸುತ್ತಿದ್ದೇನೆ ಎಂದು ಕುತೂಹಲ ಮೂಡಿಸುತ್ತಾರೆ.
ಚಂದಮಾಮ ಎನ್ನುವ ಹೆಸರು ಕೇಳಿ ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಮಾತ್ರ ಇರಬಹುದು ಎನ್ನುವ ತಪ್ಪು ಕಲ್ಪನೆ ಯಾರೂ ಮಾಡಬೇಡಿ. ಯಾಕೆಂದರೆ ನಿರ್ದೇಶಕರು ತಿಳಿಸಿರುವ ಪ್ರಕಾರ, ಚಿತ್ರದಲ್ಲಿನ ನಾಯಕ ತುಂಬ ರಫ್ ಆಗಿರುತ್ತಾನೆ. ಹೊಡೆದಾಟದ ದೃಶ್ಯಗಳಿವೆ. ಅದನ್ನು ಹಳ್ಳಿಯ ಸಹಜ ಹೊಡೆದಾಟಗಳ ಶೈಲಿಯಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಇಬ್ಬರಿಗೂ ಹೇಳಿಕೊಳ್ಳುವಂಥ ಹಿನ್ನೆಲೆ ಇರುವುದಿಲ್ಲ. ನಾಯಕನ ಪಾತ್ರವನ್ನು ಹುಬ್ಬಳ್ಳಿಯ ಹುಡುಗ ಆಕಾಶ್ ನಿಭಾಯಿಸುತ್ತಿದ್ದಾರೆ. ರಂಗಭೂಮಿಯ ಹಿನ್ನೆಲೆ ಇರುವ ಕಾರಣ ಉತ್ತಮ ಅಭಿನಯವನ್ನೇ ನೀಡಿದ್ದಾರಂತೆ. ಚಿತ್ರಕ್ಕಾಗಿ ನಾಯಕ ಆರು ತಿಂಗಳಿಂದ ಗಡ್ಡ ಬಿಟ್ಟುಕೊಂಡು ತಯಾರಿ ನಡೆಸಿದ್ದರೆನ್ನುವುದನ್ನು ಅಭಿಮಾನದಿಂದ ನೆನಪಿಸುತ್ತಾರೆ ನಿರ್ದೇಶಕರು. ನಾಯಕಿ ದೀಪಾ ನಾಯರ್ ಕೇರಳದವರು. ಆಕೆ ಕ್ಲಾಸಿಕಲ್ ಡಾನ್ಸರ್ ಆಗಿರುವುದರಿಂದ ಅವರಲ್ಲಿಯೂ ವೃತ್ತಿಪರತೆ ಮನೆ ಮಾಡಿತ್ತು. ಹಾಗಾಗಿ ಮೊದಲ ಚಿತ್ರವಾದರೂ ಗಮನಾರ್ಹ ನಟನೆ ನೀಡಿದ್ದಾರೆ.
ಮ್ಯೂಸಿಕಲ್ ಮೂವಿ
`ಚಂದಮಾಮ’ದಲ್ಲಿ ಎಂಟು ಹಾಡುಗಳಿವೆ. ಆದ ಕಾರಣ ಇದನ್ನೊಂದು ಮ್ಯೂಸಿಕಲ್ ಸಿನಿಮಾ ಎನ್ನಬಹುದು ಅಂತ ನಿರ್ದೇಶಕರ ಅನಿಸಿಕೆ. ಸಂಗೀತ ನೀಡಿರುವ ಕೀರ್ತಿಚಂದ್ರ ವರ್ಮ ಅವರು ಐದು ಪ್ರಮುಖ ಹಾಡುಗಳನ್ನು ಮತ್ತು ಮೂರು ಸಪರೇಟ್ ತುಣುಕುಗಳನ್ನು ಬಳಸಿಕೊಂಡಿದ್ದಾರೆ. ಅವುಗಳನ್ನು ಆಲಿಸುವಾಗ ಎಂಬತ್ತರ ಕಾಲಮಾನದಲ್ಲಿನ ಹಾಡುಗಳನ್ನು ಕೇಳಿದಂಥ ಅನುಭವ ನೀಡಲಿದೆ. ಹಾಡುಗಳನ್ನು ಸಂದರ್ಭಕ್ಕೆ ಅನುಗುಣವಾಗಿ ಬಳಸಿಕೊಂಡು ಅದರಲ್ಲೇ ಸಂಭಾಷಣೆ ಹಂಚಿಕೊಳ್ಳುವಂತೆ ಯೋಜನೆ ಹಾಕಲಾಗಿದೆ. ಸ್ವತಃ ನಿರ್ದೇಶಕ ವೈ.ಜಿ ಹಳ್ಳಿಯವರೇ ಗೀತರಚನೆಯನ್ನೂ ಮಾಡಿರುವ ಕಾರಣ ಈ ಕೆಲಸ ಸುಲಭದಲ್ಲಿ ನೆರವೇರಿದೆ. ಹಾಡು ಮಾತ್ರವಲ್ಲ ಇಡೀ ಸಿನಿಮಾವನ್ನು ಹಾಡಿನಂತೆ ಸರಾಗವಾಗಿ ಚಿತ್ರೀಕರಿಸಿ ದೃಶ್ಯಕಾವ್ಯ ಮೂಡಿಸಿರುವವರು ಛಾಯಾಗ್ರಾಹಕ ಶ್ರೀ ಪುರಾಣಿಕ್. ಮೂಲತಃ ಕುಂದಾಪುರದವರಾಗಿರುವ ಛಾಯಾಗ್ರಾಹಕರ ಕಾರ್ಯವೈಖರಿಯ ಬಗ್ಗೆಯೂ ನಿರ್ದೇಶಕರ ಮೆಚ್ಚುಗೆ ಇದೆ. ತಮಗೆ ಬೇಕಾದ ದೃಶ್ಯಕ್ಕಾಗಿ ಒಂದಷ್ಟು ಹೆಚ್ಚೇ ಸಮಯ ತೆಗೆದುಕೊಂಡರೂ ಕೂಡ ಅದ್ಭುತವಾದ ಛಾಯಾಗ್ರಹಣದಿಂದ ಮನ ಸೆಳೆಯುವುದಾಗಿ ತಿಳಿಸಿದ್ದಾರೆ.
ಚಿತ್ರದಲ್ಲಿ `ಸೂಪರ್ ಸ್ಟಾರ್’ ಮಾಸಿಕದ ಖ್ಯಾತಿಯ ಅಫ್ಜಲ್ ಒಂದು ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ. ನೆಗೆಟಿವ್ ಶೇಡ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಫ್ಜಲ್ ಚಂದಮಾಮ ಚಿತ್ರದಲ್ಲಿ ಪರದೆಯ ಮೇಲೆ ಮಾತ್ರವಲ್ಲ, ಪರದೆಯ ಹಿಂದೆಯೂ ಚಿತ್ರತಂಡದ ಶಕ್ತಿಯಾಗಿದ್ದಾರೆ ಎನ್ನುವುದು ಮಧು ಅವರ ಅನಿಸಿಕೆ. ಒಟ್ಟು ಚಿತ್ರವೇ ಎಂಟು ಪಾತ್ರಗಳ ನಡುವೆ ನಡೆಯುವ ಘಟನೆ. ಅದರಲ್ಲಿ ನಾಯಕ ಮತ್ತು ನಾಯಕಿ ಪ್ರಧಾನ ಪಾತ್ರಗಳಾದರೆ ಅಫ್ಜಲ್ ಅವರದು ವಿಭಿನ್ನತೆ ತೋರಿಸುವ ಪಾತ್ರ ಎನ್ನಲಾಗಿದೆ.
ನಿರ್ಮಾಪಕ ತ್ರಯರ ಸಂಭ್ರಮ
ಬಹಳಷ್ಟು ವಿಭಿನ್ನತೆಯೊಂದಿಗೆ ಮೂಡಿ ಬರುತ್ತಿರುವ ಚಂದಮಾಮ ಚಿತ್ರಕ್ಕೆ ಮೂರು ಮಂದಿ ನಿರ್ಮಾಪಕರಿದ್ದಾರೆ. ಚಿಕ್ಕಮಗಳೂರಿನ ತ್ರಿವೇಣಿ ಗಾಂಧಿಯವರ ಜೊತೆಗೆ ಚಿಂತಾಮಣಿಯ ಸತೀಶ್(ಎಚ್ ಮಾರ್ಕೆಟ್) ಮತ್ತು ಹುಬ್ಬಳ್ಳಿಯ ಅಸ್ಲಂ ಖಾನ್ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಾರೆ. ಪೂರ್ತಿ ಚಿತ್ರೀಕರಣವನ್ನು ಚಿಕ್ಕಬಳ್ಳಾಪುರದಲ್ಲಿ ಚಿಂತಾಮಣಿ ಮತ್ತು ಶಿಡ್ಲಘಟ್ಟದ ಗ್ರಾಮೀಣ ಪ್ರದೇಶಗಳಲ್ಲಿ ನಡೆಸಲಾಗಿದೆ. ಎಂಬತ್ತರ ಕಾಲಘಟ್ಟಕ್ಕೆ ತಕ್ಕ ರೀತಿಯಲ್ಲಿ ಗಡಿ ಪ್ರದೇಶದ ದೃಶ್ಯಗಳು ಕತೆಗೆ ಪೂರಕವೆನಿಸಿದ ಕಾರಣ ಅಲ್ಲೇ ಶೂಟಿಂಗ್ ಮಾಡಲಾಯಿತು ಎನ್ನುವುದು ನಿರ್ದೇಶಕರ ಮಾತು. ಸದ್ಯದಲ್ಲೇ ಚಿತ್ರೀಕರಣ ಪೂರ್ತಿಗೊಳಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳತ್ತ ಗಮನ ಹರಿಸಲಿದೆ. ಒಟ್ಟಿನಲ್ಲಿ ಒಂದೊಳ್ಳೆಯ ಚಿತ್ರವನ್ನು ನೀಡುತ್ತಿರುವ ಸಂತೃಪ್ತಿ ನಿರ್ಮಾಪಕರುಗಳಲ್ಲಿಯೂ ಇದೆ.