ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 3’ ರ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದ ಜಯಶ್ರೀ ಕಳೆದ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದಿದ್ದ ಜಯಶ್ರೀ ರಾಮಯ್ಯ ಕಲಾವಿದೆಯಾಗಿ ಮಾಲಾಶ್ರೀ ನಾಯಕಿಯಾಗಿದ್ದ ‘ಉಪ್ಪು ಹುಳಿ ಖಾರ’ ಸಿನಿಮಾದಲ್ಲಿ ನಟಿಸಿದ್ದರು. ಜೀವನದಲ್ಲಿ ಹಲವಾರು ಕನಸುಗಳನ್ನು ಇರಿಸಿಕೊಂಡಿದ್ದ ಜಯಶ್ರೀ ನಟನೆಗೆ ಅವಕಾಶ ದೊರಕದೆ ಖಿನ್ನತೆಗೆ ಒಳಗಾಗಿದ್ದರೆಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ಮಾಗಡಿ ರಸ್ತೆಯ ‘ಸಂಧ್ಯಾ ಕಿರಣ’ ವೃದ್ಧಾಶ್ರಮದಲ್ಲಿ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈವೆಂಟ್ ಆರ್ಗನೈಸರ್ ಆಗಿಯೂ ಕೆಲಸ ಮಾಡುತ್ತಿದ್ದ ಜಯಶ್ರೀ ಈ ಹಿಂದೆ ತಮ್ಮ ಸೋದರ ಮಾವನ ವಿರುದ್ಧ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನಲ್ಲಿ ಸೋದರ ಮಾವ ಗಿರೀಶ್ ತಮಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದಾರೆ. ಅಲ್ಲದೆ ನಡುರಾತ್ರಿ ನಮ್ಮನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಿದ್ದರು. ಆಸ್ತಿ ವಿವಾದ ಮತ್ತು ಖಾಸಗಿ ಕಾರಣಗಳಿಂದಾಗಿ ಜಯಶ್ರೀ ಮತ್ತು ಗಿರೀಶ್ ನಡುವೆ ಜಗಳವಾಗಿದ್ದು ಕಳೆದ ರಾತ್ರಿ ಜಯಶ್ರೀ ಮತ್ತವರ ತಾಯಿಯನ್ನು ಹೊರಹಾಕಿದ್ದಾರೆ ಎಂದು ತಿಳಿದಿತ್ತು. ಆನಂತರ ಮನೆ ಬದಲಾಯಿಸಿದ ಬಳಿಕ ಹನುಮಂತ ನಗರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಕಳೆದ ವರ್ಷ ಲಾಕ್ಡೌನ್ ಸಂದರ್ಭ ಸಂಕಷ್ಟದ ಸಾವಿನ ಜತೆಗೆ ಡಿಪ್ರೆಶನ್ ಆತ್ಮಹತ್ಯೆಗಳಿಗೂ ಕೊರತೆ ಇರಲಿಲ್ಲ. ಅದೇ ವೇಳೆ ಜಯಶ್ರೀಯವರು ಕೂಡ ಆತ್ಮಹತ್ಯೆ ನಡೆಸುವುದಾಗಿ ಪೋಸ್ಟ್ ಹಾಕಿ ಸುದ್ದಿಯಾಗಿದ್ದರು. ಈ ಸಂದರ್ಭದಲ್ಲಿ ಬಿಗ್ ಬಾಸ್ ಸೀಸನ್ ತ್ರಿಯಲ್ಲಿ ಪಾಲ್ಗೊಂಡಿದ್ದ ಹಿರಿಯ ನಟಿ ಶ್ರುತಿ, ಅಯ್ಯಪ್ಪ, ಮಾಸ್ಟರ್ ಆನಂದ್ ಮೊದಲಾದವರು ಫೋನ್ ಮಾಡಿ ನಾವೆಲ್ಲ ಇರುವುದಾಗಿ ಧೈರ್ಯ ತುಂಬಿದ್ದರು. ನಟ ಸುದೀಪ್ ಅವರು ತಕ್ಷಣ ಹೈದರಾಬಾದ್ ನಿಂದ ಫೋನ್ ಮಾಡಿ ಅಂಥ ಪ್ರಯತ್ನಗಳನ್ನು ಮಾಡಬೇಡಿ. ಆತಂಕ ಆದಾಗ ನನಗೆ ಫೋನ್ ಮಾಡಿ ಎಂದು ಹೇಳಿದ್ದರಂತೆ.
ಇಷ್ಟೆಲ್ಲ ಸಾಂತ್ವನದ ಬಳಿಕ ಸುಧಾರಣೆಗೊಂಡಂತೆ ಕಂಡು ಬಂದಂತೆ ಇದ್ದ ಅವರು ಇದೀಗ ನಿನ್ನೆ ದಿಢೀರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮೀಯರು ದುಃಖ ತಪ್ತರಾಗಿದ್ದಾರೆ.