ಮಹಾಲಕ್ಷ್ಮಿ ಅಂದರೆ ಕನ್ನಡ ಸಿನಿರಸಿಕರು ಮರೆಯಲಾಗದ ಮುಖ. ಅದರಲ್ಲಿಯೂ “ನೀ ಮುಡಿದ ಮಲ್ಲಿಗೆ ಹೂವಿನ ಗಂಧ ಕರೆತಂತು ಊರಿಂದ..” ಎಂದು ರವಿಚಂದ್ರನ್ ಹಾಡಿ ಕುಣಿದಾಗ ಸೀರೆಗಳ ನಡುವೆ ಮೆರೆದ ಸ್ವಾಭಿಮಾನದ ಚೆಲುವೆ ಎಲ್ಲರಿಗೂ ಇಷ್ಟವಾಗಿದ್ದರು. ಆದರೆ ವಿವಾಹದ ಬಳಿಕ ಬರೋಬ್ಬರಿ ಮೂರು ದಶಕಗಳ ಕಾಲ ಚಿತ್ರರಂಗದಿಂದ ದೂರವಾಗಿದ್ದ ಮಹಾಲಕ್ಷ್ಮಿ ಈಗ ಮರಳಿದ್ದಾರೆ. ಅದು ಯಾವ ಸಿನಿಮಾ ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಚಿತ್ರದ ಹೆಸರು ‘ಟಿ.ಆರ್.ಪಿ ರಾಮ’ ಹೊಸಬರ ತಂಡದ ಈ ಚಿತ್ರವನ್ನು ಅಶುತೋಷ್ ಪಿಕ್ಚರ್ಸ್ ನಿರ್ಮಿಸುತ್ತಿದೆ. ಚಿತ್ರದ ಮುಹೂರ್ತ ಸಮಾರಂಭ ಇಂದು ಬೆಳಿಗ್ಗೆ ಹನುಮಂತನಗರದ ಆಂಜನೇಯ ಗುಡ್ಡದಲ್ಲಿ ನೆರವೇರಿದೆ. ಇದೊಂದು ವಿಭಿನ್ನ ಪಾತ್ರವಾಗಿರುವ ಕಾರಣ ಚಿತ್ರವನ್ನು ಒಪ್ಪಿಕೊಂಡಿದ್ದಾಗಿ ಮಹಾಲಕ್ಷ್ಮಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಮಹಾಲಕ್ಷ್ಮಿಯ ಸನಿಹವನ್ನು ಸದಾ ಬಯಸುವವರೇ ಇರುವಾಗ ಮರಳಿ ಬಂದಿರುವ ಈ ನಾಯಕಿಗೂ ಅದೇ ರೀತಿಯ ಆದರದ ಸ್ವಾಗತ ದೊರಕಿದೆ.
ತಾಯಿ ಮಗನ ಕತೆ ಇರುವ ಈ ಚಿತ್ರದಲ್ಲಿ ಟಿ.ವಿ ವಾರ್ತಾ ಮಾಧ್ಯಮ ಕೂಡ ಪ್ರಧಾನ ಪಾತ್ರದಲ್ಲಿದೆ ಎನ್ನಲಾಗಿದೆ. ಹಾಗಾಗಿ ನಾಯಕನ ಹೆಸರಿನ ಜೊತೆಗೆ ಟಿ.ಆರ್.ಪಿ ಎಂದು ಸೇರಿಸಿ ಚಿತ್ರಕ್ಕೆ “ಟಿ.ಆರ್.ಪಿ ರಾಮ” ಎಂದು ಹೆಸರಿಡಲಾಗಿದೆ ಎಂದು ನಿರ್ದೇಶಕ ರವಿ ಪ್ರಸಾದ್ ತಿಳಿಸಿದ್ದಾರೆ. ತಾಯಿಯಾಗಿ ಮಹಾಲಕ್ಷ್ಮೀ ನಟಿಸಿದ್ದು, ರಾಮನಾಗಿ ಸ್ವತಃ ನಿರ್ದೇಶಕ ರವಿಪ್ರಸಾದ್ ಕಾಣಿಸಿಕೊಂಡಿದ್ದಾರೆ. ರವಿಪ್ರಸಾದ್ ಚಿತ್ರಕತೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ನಾಟಕಕಾರ ಹನಮಂತ ಹಾಲಗೇರಿಯವರು ಕತೆ ಬರೆದು ಕೈಜೋಡಿಸಿದ್ದಾರೆ. ಗುರು ಪ್ರಸಾದ್ ನರ್ನಾಡ್ ಛಾಯಾಗ್ರಹಣ, ರಾಜ್ ಗುರುಹೊಸಕೋಟೆ ಸಂಗೀತ ಇರುವ ಈ ಚಿತ್ರಕ್ಕೆ ಸಹನಿರ್ದೇಶಕ ಪ್ರವೀಣ್ ಸೂಡ ಅವರು ಸಂಭಾಷಣೆ ರಚಿಸಿದ್ದಾರೆ. ಕವಿರಾಜ್, ಲಿಂಗರಾಜ್, ಭಜರಂಗಿ ಮೋಹನ್ ಅವರೊಂದಿಗೆ ಸ್ವತಃ ರಾಜ್ ಗುರು ಅವರು ಕೂಡ ಗೀತೆ ರಚಿಸಿದ್ದಾರೆ. ರಾಮಾಂಜನೇಯ ದೇವಾಲಯದಲ್ಲಿ ನಡೆದ ಮುಹೂರ್ತದಲ್ಲಿ ಖ್ಯಾತ ಗೀತರಚನೆಕಾರ, ನಿರ್ದೇಶಕ ಕವಿರಾಜ್ ಕ್ಲ್ಯಾಪ್ ಮಾಡಿ ಚಿತ್ರಕ್ಕೆ ಶುಭ ಕೋರಿದರು.