ರಜಾ, ಮಜಾ ಮತ್ತು ದ್ವಯಾರ್ಥದ ಸಜಾ..!

ಚಿತ್ರ : ಮಂಗಳವಾರ ರಜಾದಿನ
ತಾರಾಗಣ: ಚಂದನ್ ಆಚಾರ್, ಲಾಸ್ಯ ನಾಗರಾಜ್
ನಿರ್ದೇಶನ: ಯುವಿನ್
ನಿರ್ಮಾಣ: ತ್ರಿವರ್ಗ ಫಿಲ್ಮ್ಸ್

ಕುಮಾರ್ ಒಬ್ಬ ಯುವ ಕ್ಷೌರಿಕ. ಯಾವುದೇ ದುರಭ್ಯಾಸಗಳಿರದ ಸಭ್ಯ ಹುಡುಗ. ಆತನಿಗೊಂದೇ ಆಸೆ, ಜೀವನದಲ್ಲೊಮ್ಮೆ ಖ್ಯಾತ ನಟ ಕಿಚ್ಚ ಸುದೀಪ್ ಅವರಿಗೆ ತಾನೇ ಖುದ್ದಾಗಿ ಹೇರ್‌ಸ್ಟೈಲ್ ಮಾಡಬೇಕು! ಆ ಒಂದು ಅವಕಾಶಕ್ಕಾಗಿ ಸದಾ ಪ್ರಯತ್ನಿಸುತ್ತಿರುತ್ತಾನೆ. ಆ ಆಸೆಯ ಬೆನ್ನು ಬಿದ್ದಾಗ ಖಾಸಗಿ ಬದುಕಿನಲ್ಲಿ ಒಂದಷ್ಟು ಸಮಸ್ಯೆಗಳು ಎದುರಾಗುತ್ತವೆ. ಅವುಗಳನ್ನು ಹೇಗೆ ಎದುರಿಸುತ್ತಾನೆ ಎನ್ನುವುದೇ ಮಂಗಳವಾರ ರಜಾದಿನ ಚಿತ್ರ.

ಶೀತಲ್ ಎನ್ನುವ ಚೆಲುವೆ ತನ್ನ ತಾತನ ತಲೆಗೂದಲು ಕತ್ತರಿಸಲು ಕುಮಾರನ್ನು ಮನೆಗೆ ಕರೆದೊಯ್ಯುತ್ತಾಳೆ. ಹಾಗೆ ಶೀತಲ್ ಮತ್ತು ಕುಮಾರ್ ನಡುವೆ ಆತ್ಮೀಯತೆ ಬೆಳೆಯುತ್ತದೆ. ಆಕೆಗೆ ಸುದೀಪ್ ಅವರಿಗೆ ಹೇರ್‌ಸ್ಟೈಲ್ ಮಾಡಬೇಕೆನ್ನುವ ಕುಮಾರ್ ಆಸೆ ತಿಳಿಯುತ್ತದೆ. ಮಾರ್ಟಿನ್ ಎನ್ನುವವರ ಮೂಲಕ ಸುದೀಪ್ ಭೇಟಿಯಾಗಿಸುವ ಪ್ರಯತ್ನ ನಡೆಸುತ್ತಾಳೆ. ಆದರೆ ಆ ಮಧ್ಯವರ್ತಿ ಸುದೀಪ್‌ ಭೇಟಿಗೆ ನಾಲ್ಕುಲಕ್ಷ ಹಣ ಕೇಳುತ್ತಾನೆ. ಆದರೆ ಅದೇ ಸಮಯದಲ್ಲಿ ಕುಮಾರ್‌ನ ತಂದೆ ಆಸ್ಪತ್ರೆ ಸೇರಿಕೊಂಡು ಆಪರೇಷನ್‌ಗೆ ಹಣದ ಅಗತ್ಯ ಬೀಳುತ್ತದೆ. ಸಂಬಂಧ, ಅಭಿಮಾನಗಳ ನಡುವೆ ಕುಮಾರ್ ಆಯ್ದುಕೊಳ್ಳುವ ಕರ್ತವ್ಯ ಯಾವುದು ಎನ್ನುವುದು ಚಿತ್ರದ ಸಾರಾಂಶ. ಅಂದಹಾಗೆ ಕೊನೆಗೂ ಸುದೀಪ್ ಹೇರ್‌ಸ್ಟೈಲ್ ಮಾಡಬೇಕೆನ್ನುವ ಕುಮಾರ್‌ ಆಸೆ ನೆರವೇರುವುದೇ ಎನ್ನುವ ಕುತೂಹಲಕ್ಕೆ ನಾವು ಕೂಡ ಉತ್ತರಿಸುವುದಿಲ್ಲ.

ಚಂದನ್ ಆಚಾರ್ ಅವರು ಕುಮಾರ್ ಪಾತ್ರದಲ್ಲಿ ಸಹಜ ಅಭಿನಯ ನೀಡಿದ್ದಾರೆ. ಅವರು ನಗು, ಅಳು, ಡೈಲಾಗ್ ಡೆಲಿವರಿ ಎಲ್ಲದರಲ್ಲಿಯೂ ಸಹಜತೆ ಇದೆ. ಹಾಗಾಗಿಯೇ ಆರಂಭದ ಒಂದಷ್ಟು ದ್ವಯಾರ್ಥ ಪ್ರಯೋಗಗಳನ್ನು ಅವರ ಬಾಯಿಯಿಂದ ಕೇಳಿದಾಗ ನಗುವಷ್ಟೇ ಮೂಡುತ್ತದೆ. ಮಾತ್ರವಲ್ಲ, ವಿದ್ಯಾವಂತನಲ್ಲದ ಕಾರಣ ಲೋಕಜ್ಞಾನ ಕಡಿಮೆ. ಹಾಗಾಗಿ ಆತ ಮುಗ್ದವಾಗಿ ಆಡುವ ಮಾತುಗಳಲ್ಲಿ ನಾವು ದ್ವಯಾರ್ಥ ಹುಡುಕಬಾರದು. ಆದರೆ ದೃಶ್ಯದಿಂದ ದೃಶ್ಯಕ್ಕೆ ಅಂಥ ಪದಗಳಿಗೆಂದೇ ಅನಗತ್ಯ ಸಂಭಾಷಣೆಗಳು ಸೃಷ್ಟಿಯಾದಾಗ ರೇಜಿಗೆ ಮೂಡುತ್ತದೆ. ಶೀತಲ್ ಪಾತ್ರದಲ್ಲಿ ಲಾಸ್ಯ ನಾಗರಾಜ್ ಗಮನ ಸೆಳೆಯುತ್ತಾರೆ. ಕುಮಾರ್ ತಂದೆ ಮಾದೇವನಾಗಿ ಗೋಪಾಲಕೃಷ್ಣ ದೇಶಪಾಂಡೆ ಎಂದಿನಂತೆ ತಮ್ಮ ಸಹಜ, ಆಕರ್ಷಕ ನಟನೆ ನೀಡಿದ್ದಾರೆ. ಮಾರ್ಟಿನ್ ಪಾತ್ರದಲ್ಲಿ ಜಹಾಂಗೀರ್ ನಟನೆ ನಗು ತರಿಸುತ್ತದೆ. ಆದರೆ ಭಾವನಾತ್ಮಕ ಸನ್ನಿವೇಶಗಳಲ್ಲಿ ನಾಟಕೀಯತೆ ನುಸುಳಿದೆ. ನಾಯಕನ ತಾಯಿ ಹರಿಣಿ ಮತ್ತು ನಾಯಕಿಯ ತಾತನಾಗಿ ಸತ್ಯ ಅವರಿಗೆ ಹೆಚ್ಚು ಅವಕಾಶಗಳಿಲ್ಲವಾದರೂ ನೆನಪಲ್ಲಿ ಉಳಿಯುತ್ತಾರೆ.

ನಿರ್ದೇಶಕ ಯುವಿನ್ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಚಿತ್ರದ ಸಂಭಾಷಣೆ, ನಿರೂಪಣೆ ಮತ್ತು ಪಾತ್ರಗಳ ಆಯ್ಕೆಯಲ್ಲಿ ವಿಜಯ ಪ್ರಸಾದ್ ಚೇಷ್ಟೆ, ಯೋಗರಾಜ್ ಭಟ್ಟರ `ಡ್ರಾಮ’ ಇಣುಕುತ್ತದೆ. ಉದಯ್ ಲೀಲ ಛಾಯಾಗ್ರಹಣದಲ್ಲಿ ಆಕರ್ಷಣೆಯಿದೆ. ಸುಪ್ರೀತ್ ಮತ್ತು ನಿಶಾಂತ್ ಕಲಾ ನಿರ್ದೇಶನ ಕ್ಷೌರದ ಅಂಗಡಿ ಸೇರಿದಂತೆ ಒಳಾಂಗಣ ದೃಶ್ಯಗಳಿಗೆ ಸಹಜತೆ ತಂದಿದೆ. ತಂದೆಯ ಕುರಿತಾಗಿ ಪುನೀತ್ ರಾಜ್ ಕುಮಾರ್ ಹಾಡಿರುವ ಗೀತೆ ಅಪ್ಪು ಅಭಿಮಾನಿಗಳಿಗೆ ವಿಶೇಷ ಆಕರ್ಷಣೆಯಾದರೆ, ಪೂರ್ತಿ ಚಿತ್ರ ಸುದೀಪ್ ಅವರ ಫ್ಯಾನ್ಸ್‌ಗಳಿಗೆ ವಿಶೇಷವಾಗಿ ಮೆಚ್ಚುಗೆಯಾದೀತು.

ಶಶಿಕರ ಪಾತೂರು

Recommended For You

Leave a Reply

error: Content is protected !!
%d bloggers like this: