ಸದಾ ರಾಣಿ ಈ ಸುಧಾರಾಣಿ!

ಡಾ.ಶಿವರಾಜ್ ಕುಮಾರ್ ಅವರ ಮೂರುವರೆ ದಶಕಗಳ ಯಶಸ್ವಿ ವೃತ್ತಿ ಬದುಕನ್ನು ನೆನಪಿಸುವಾಗ ನಾವು ಮರೆಯುವ ತಾರೆಯೊಬ್ಬರಿದ್ದಾರೆ. ಅವರೇ ಸುಧಾರಾಣಿ. ಅವರು ಕೂಡ ಶಿವಣ್ಣನ ಪ್ರಥಮ ಚಿತ್ರದ ಮೂಲಕವೇ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ಇಂದಿಗೂ ಕೂಡ ಸ್ಟಾರ್ ನಟಿಯ ಬೇಡಿಕೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಇಷ್ಟು ವರ್ಷಗಳ‌ ಪಯಣದ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ‌ ಅವರು ನಡೆಸಿದ ಅವಲೋಕನ‌ ಇಲ್ಲಿದೆ.

ಸಂತೃಪ್ತಿ ಇದೆ

“ನೀವು ಯಾವುದೇ ವಿಚಾರ ತೆಗೆದುಕೊಂಡರೂ ಪೂರ್ತಿಯಾಗಿ ಪ್ಲಸ್ ಅಥವಾ ಮೈನಸ್ ಎಂದು ಹೇಳಲಾಗದು. ಎಲ್ಲ ರೀತಿಯ ಜರ್ನಿಯಲ್ಲಿಯೂ ಮೈನಸ್, ಪ್ಲಸ್ ಇದ್ದೇ ಇರುತ್ತವೆ. ಆದರೆ ಟೋಟಲ್ ಆಗಿ ನೋಡಿದಾಗ ಖಂಡಿತವಾಗಿಯೂ ನನಗೆ ಇದುವರೆಗಿನ ಸಿನಿಮಾ ಪಯಣ ತೃಪ್ತಿ ತಂದುಕೊಟ್ಟಿದೆ.”

ಪರಭಾಷೆಗೆ ಪ್ರಯತ್ನಿಸಲೇ ಇಲ್ಲ!

ನನಗೆ ಯಾವತ್ತಿಗೂ ಬೇರೆ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಗುರುತಿಸಬೇಕು ಅನಿಸಿಲ್ಲ. ಹಾಗಂತ ಮಾಡೇ ಇಲ್ಲ ಅಂತ ಏನಿಲ್ಲ. ನಟಿಸಿದ್ದೀನಿ, ಆದರೆ ಅಲ್ಲಿ ಸ್ಟಾರ್ ಆಗಬೇಕು ಎನ್ನುವ ಯೋಚನೆಯೇ ನನಗೆ ಬರಲಿಲ್ಲ. ಅಥವಾ ನನಗೆ ಅಷ್ಟೆಲ್ಲ ಯೋಚಿಸುವಷ್ಟು ಸಮಯವೇ ದೊರಕಿಲ್ಲ ಎನ್ನಬಹುದು. ಯಾಕೆಂದರೆ ನನಗೆ ಯಾವತ್ತಿಗೂ ಕನ್ನಡದಲ್ಲಿ ಅವಕಾಶಗಳಿಗೆ ಕೊರತೆಯಾಗಲೇ ಇಲ್ಲ. ಒಂದು ವೇಳೆ ನಾನು ಪರಭಾಷೆಯಲ್ಲೇ ಉಳಿದಿದ್ದರೆ ಇಲ್ಲಿ ಸಿಕ್ಕಂಥ ತೃಪ್ತಿ ನನಗೆ ಅಲ್ಲಿ ಸಿಗುತ್ತಿತ್ತೋ ಗೊತ್ತಿಲ್ಲ. ಯಾಕೆಂದರೆ ಬರಿಯ ರೊಮ್ಯಾಂಟಿಕ್ ಹೀರೋಯಿನ್ ಆಗುವ ಆಸಕ್ತಿಯಂತೂ ನನಗೆ ಆರಂಭದಿಂದಲೇ ಇರಲಿಲ್ಲ. ಇವತ್ತಿಗೆ ಈ ಜರ್ನಿ ನೋಡಿದಾಗ ಯಾವುದೇ ರಿಗ್ರೆಟ್ ಇಲ್ಲ.

ಸಂಪಾದಿಸಿದ್ದರಲ್ಲಿ ಅಭಿಮಾನದ ಪಾಲು ಅಧಿಕ!

ನಾನು‌ ಕಮರ್ಷಿಯಲ್ ಕಾರಣಕ್ಕಾಗಿ ‌ಪಾತ್ರಗಳನ್ನು ಒಪ್ಪಲಿಲ್ಲ. ನಟನೆಯ ಆಸಕ್ತಿಯಿಂದ ಒಪ್ಪಿಕೊಳ್ಳುತ್ತಿದ್ದೆ.
ಕಮರ್ಷಿಯಲ್ ಮೈಂಡ್ ಸೆಟ್ ಮೊದಲಿಂದಲೂ ‌ಇರಲಿಲ್ಲ. ಹಾಗಾಗಿಯೇ ಆರಂಭದ ದಿನಗಳಲ್ಲಿ ಬೌನ್ಸ್ ಆದ ಚೆಕ್ ಗಳ ರಾಶಿಯೇ ಬಿದ್ದಿದ್ದವು. ಹಾಗಂತ ನಾನು ನಟಿಸಿದ್ದೆಲ್ಲ ಒಳ್ಳೆಯ ಪಾತ್ರಗಳನ್ನು ಮಾತ್ರ ಎಂದು ಹೇಳಲಾರೆ. ನಿರಂತರವಾಗಿ ನಟಿಸುತ್ತಿರುವಾಗ ಇವೆಲ್ಲ ಸಾಮಾನ್ಯ. ಆದರೆ ಒಂದಂತೂ‌ ನಿಜ, ಇಂದಿಗೂ ಸುಧಾರಾಣಿ ನಿರ್ವಹಿಸಿರುವ ಪಾತ್ರ ಎನ್ನುವ ಕಾರಣಕ್ಕೆ ನಿರೀಕ್ಷೆ ಇರಿಸಿ ನೋಡುವವರಿದ್ದಾರೆ. ಅಷ್ಟಾದರೂ ಗಳಿಸಿರುವುದಕ್ಕೆ ತೃಪ್ತಿ ಇದೆ.

ನನ್ನ ಪಾತ್ರಗಳ ಆಯ್ಕೆ ನನ್ನದೇ..!

ನನಗೆ ಆರಂಭದಲ್ಲೇ ‘ಆನಂದ್’ನಂಥ ಒಳ್ಳೆಯ ಸಿನಿಮಾ‌ ದೊರಕಿತು. ಅದು ಯಾವ ಧೈರ್ಯದಿಂದ ನನ್ನನ್ನು ನಾಯಕಿಯಾಗಿ ಮಾಡಲು ಪಾರ್ವತಮ್ಮ ಧೈರ್ಯ ತೋರಿಸಿದರೋ ನನಗೆ ಗೊತ್ತಿಲ್ಲ. ಆನಂತರ ನಡೆದಿದ್ದೆಲ್ಲ ನಿಮಗೆ ಗೊತ್ತಿದೆ. ಹಾಗಾಗಿ ಎಲ್ಲವೂ ನನ್ನ. ಎಫರ್ಟ್ ನಿಂದ ಮಾತ್ರ ಸಾಧ್ಯವಾಯಿತು ಎಂದು ನಾನು ಒಪ್ಪುವುದಿಲ್ಲ. ಆ ದಿನಗಳಿಂದಲೇ ನನಗೆ ಒಳ್ಳೆಯ ‌ಪಾತ್ರಗಳು ದೊರಕಿದವು. ಅವನೇ ನನ್ನ ಗಂಡ’ದಂಥ ಸಬ್ಜೆಕ್ಟ್ ಆ ವಯಸ್ಸಲ್ಲೇ ಮಾಡಿದ್ದೆನೆಂಬುದನ್ನು ನಾನು ಎಂದಿಗೂ ಮರೆಯಬಾರದು. ಅವತ್ತು ನನ್ನ ಸಿನಿಮಾಗಳ ಆಯ್ಕೆಯನ್ನು ಅಮ್ಮ ಮಾಡುತ್ತಿದ್ದರು. ಈಗ ನಾನೇ ಆಯ್ಕೆ ಮಾಡುತ್ತೇನೆ. ಮೊದಲೆಲ್ಲ ಪಾತ್ರ ಇಷ್ಟವಾಗಿಲ್ಲ ಎಂದು ಹೇಳಲು ಹಿಂಜರಿಯುತ್ತಿದ್ದೆ. ಆದರೆ ಈಗ ‘ನನಗ್ಯಾಕೆ ಇಂಥ ಪಾತ್ರ ಕೊಡ್ತೀರ? ಇದರಲ್ಲಿ ಅಭಿನಯಕ್ಕೇನು ಅವಕಾಶ ಇದೆ?’ ಎಂದು ನೇರವಾಗಿಯೇ ಕೇಳಿ ಬಿಡುತ್ತೇನೆ!

ಬದಲಾವಣೆಗೆ ಒಗ್ಗುವುದು ಕಷ್ಟವಲ್ಲ!

ನಾಯಕಿಯಾಗಿ ಬಂದೆ ಎನ್ನುವ ಕಾರಣಕ್ಕೆ ಇಂದಿಗೂ‌ ನಾಯಕಿಯಾಗಿಯೇ ಇರಬೇಕು ಎನ್ನುವುದು ಧರ್ಮವಲ್ಲ. ಹಾಗಂತ ಈಗ ಹಿಂದಿನ ಚಿತ್ರಗಳಂತೆ ಪೋಷಕ ಪಾತ್ರಗಳಿಗೆ ಪ್ರಾಧಾನ್ಯತೆ ಇಲ್ಲ. ಅವೆಲ್ಲ ಗೊತ್ತಿದ್ದರೂ ಅಭಿನಯಕ್ಕೆ ಅವಕಾಶ ಇರುವ ಪಾತ್ರಗಳನ್ನಷ್ಟೇ ‌ಮಾತ್ರ ಆಯ್ಕೆ ಮಾಡುತ್ತೇನೆ. ಅದು ಸಿನಿಮಾ ಇರಲಿ, ಧಾರಾವಾಹಿ ಇರಲಿ ಅಥವಾ ವೆಬ್ ಸೀರೀಸ್ ಇರಲಿ. ಈಗ ಅವುಗಳ‌ ನಡುವಿನ ಅಂತರ ಕಡಿಮೆಯಾಗಿದೆ. ನನಗೆ ಇರುವ ಸಾಮ್ಯತೆ ಒಂದೇ ಒಳ್ಳೆಯ ಪಾತ್ರ ಮಾತ್ರ. ‘ಅಂಧಾಧುನ್’ ಚಿತ್ರದಲ್ಲಿ ಟಬು ಮಾಡಿದಂಥ ಪಾತ್ರ ಸಿಗಬೇಕು.

‘ಜೊತೆ ಜೊತೆಯಲಿ’ ಜೊತೆಯಲಿ

ಧಾರಾವಾಹಿ ಒಪ್ಪಿಕೊಳ್ಳಲು ಕೂಡ ಒಂದು‌ ಕಾಣರವಿತ್ತು. ಅದೊಂದು‌ ಅತಿಥಿ ಪಾತ್ರ. ಒಳ್ಳೆಯ ತಂಡದೊಂದಿಗೆ ಕೆಲಸ‌ ಮಾಡಿದ ಅನುಭವ ದೊರಕಿತು. ಅವರ ಮೇಕಿಂಗ್ ರೀತಿಯನ್ನಂತೂ ಮೆಚ್ಚಲೇಬೇಕು. ಕಿರುತೆರೆಯ ಪಾತ್ರಗಳು ಟಿ.ವಿ ವೀಕ್ಷಕರ ಜೊತೆಗೆ ಕನೆಕ್ಟ್ ಆಗುವ ರೀತಿಯೇ ಅದ್ಭುತ. ಅದರ ಜೊತೆಯಲ್ಲಿ ನಾನು ನಟಿಸಿದ ಸಿನಿಮಾಗಳು‌ ಕೂಡ‌ ಬಿಡುಗಡೆಗೆ ಕಾದಿವೆ. ಅವುಗಳಲ್ಲೊಂದು‌ ಪುನೀತ್ ರಾಜ್ ಕುಮಾರ್ ‌ನಟನೆಯ ‘ಯುವರತ್ನ.’ ಹಾಗೆಯೇ ‘ತುರ್ತು ನಿರ್ಗಮನ’, ‘ವಾಸಂತಿ ನಲಿದಾಗ’, ‘ಫಾರ್ ರಿಜಿಸ್ಟ್ರೇಶನ್’ ಮೊದಲಾದ ಸಿನಿಮಾಗಳು ವಿವಿಧ ಹಂತಗಳಲ್ಲಿ ಇವೆ. ಇವುಗಳಲ್ಲಿ ‘ತುರ್ತು ನಿರ್ಗಮನ’ದ ಪಾತ್ರ ನನ್ನ ಮಗಳಿಗೂ ತುಂಬ ಇಷ್ಟವಾಗಿದೆ.

ಮಗಳಿಗೆ ಸಿನಿಮಾ ಆಸಕ್ತಿ ಇಲ್ಲ!

ಮಗಳನ್ನು ಸಿನಿಮಾರಂಗಕ್ಕೆ ಕರೆತರಬೇಕು ಎನ್ನುವ ಆಸಕ್ತಿ ನನಗಿಲ್ಲ. ಅವಳಿಗಂತೂ‌ ಮೊದಲೇ ಇಲ್ಲ. ಕ್ಯಾಮೆರಾ ಮುಂದೆ ಸಂದರ್ಶನಕ್ಕೂ ಬರಲೊಪ್ಪದ ಮನಸ್ಥಿತಿ ಅವಳದು. ಇತ್ತೀಚೆಗೆ ವಾಹಿನಿಯೊಂದರ ಸಂದರ್ಶನದಲ್ಲಿ ‘ಇದೇ ಕೊನೆ’ ಎಂದು ಒತ್ತಾಯದಿಂದ ಕೂರಿಸಬೇಕಾಯಿತು. ಅವಳು ಎರಡನೇ ವರ್ಷದ ಲಾ ಓದುತ್ತಿದ್ದಾಳೆ. ಚಿತ್ರರಂಗ ಬೇಕೋ ಬೇಡವೋ ಎನ್ನುವುದು ಅವಳ ಆಯ್ಕೆಗೆ ಬಿಟ್ಟಿದ್ದು. ಪ್ರಸ್ತುತ ಎರಡನೇ ವರ್ಷದ ಲಾ ಓದುತ್ತಿದ್ದಾಳೆ. ಆಯ್ಕೆ ಮಾಡಿಕೊಳ್ಳಲಾಗದಷ್ಟು ತುಂಬ ಚಿಕ್ಕ ಹುಡುಗಿ ಏನೂ ಅಲ್ಲ. ನಟನೆ ವಿಚಾರದಲ್ಲಂತೂ ಅದು ಒಳಗಿನಿಂದಲೇ ಇಷ್ಟಪಟ್ಟು‌ ಮಾಡಬೇಕು. ಕಲೆಯ ಬಗ್ಗೆ ಆಸಕ್ತಿ ಇದೆ. ಉಮಾ ಕುಮಾರ್ ಬಳಿ ಕರ್ನಾಟಕ ಸಂಗೀತ ಅಭ್ಯಾಸ ಮಾಡ್ತಿದ್ದಾಳೆ. ವಸುಂಧರ ಸಂಪತ್ ಬಳಿ‌ ಭರತನಾಟ್ಯ ಅಭ್ಯಾಸ ನಡೆಸಿದ್ದಾಳೆ.

Recommended For You

Leave a Reply

error: Content is protected !!
%d bloggers like this: