
ಚಿತ್ರ: ದೃಶ್ಯಂ 2 (ಮಲಯಾಳಂ)
ತಾರಾಗಣ : ಮೋಹನ್ ಲಾಲ್ , ಮೀನಾ
ನಿರ್ದೇಶನ : ಜೀತು ಜೋಸೆಫ್
ನಿರ್ಮಾಣ : ಆಂಟನಿ ಪೆರುಂಬಾವೂರ್
ಇಬ್ಬರು ಹೆಣ್ಣು ಮಕ್ಕಳ ತಂದೆ ಜಾರ್ಜ್. ಆತನ ದೊಡ್ಡ ಮಗಳು ಅಂಜು ತನ್ನ ಸಹಪಾಠಿಗಳೊಂದಿಗೆ ನೇಚರ್ ಕ್ಯಾಂಪ್‌ಗೆಂದು ಹೋಗಿರುತ್ತಾಳೆ. ಅಂದು ರಾತ್ರಿ ಆಕೆ ಸ್ನಾನ ಮಾಡುವ ವೇಳೆ ವರುಣ್ ಎಂಬ ವಿದ್ಯಾರ್ಥಿ ಆಕೆ ವಿಡಿಯೋ ತೆಗೆದು ತನ್ನೊಂದಿಗೆ ಮಲಗುವಂತೆ ಬ್ಲ್ಯಾಕ್ಮೇಲ್ ಮಾಡುತ್ತಾನೆ. ಮನೆ ತನಕ ಬಂದು ಕಾಡಿದ ಆತನನ್ನು ವಿರೋಧಿಸುವ ಭರದಲ್ಲಿ ಅಂಜು ಕೈಯ್ಯಲ್ಲಿ ಆತನ ಕೊಲೆಯಾಗುತ್ತದೆ. ಅಂಜುವನ್ನು ಕೊಲೆಯಿಂದ ರಕ್ಷಿಸಲಿಕ್ಕಾಗಿ ತಂದೆ ಜಾರ್ಜ್ ಆ ಮೃತ ದೇಹವನ್ನು ಅಡಗಿಸುತ್ತಾನೆ. ಅದೇ ತಾನೇ ಹೊಸದಾಗಿ ಕಟ್ಟುತ್ತಿದ್ದ ಪೊಲೀಸ್ ಸ್ಟೇಷನ್ ಕಟ್ಟಡದ ಅಡಿಯಲ್ಲಿ ಶವವನ್ನು ಹಾಕಿ ಮುಚ್ಚುತ್ತಾನೆ. ಅದರ ಮೇಲೆ ಕಟ್ಟಲ್ಪಟ್ಟ ಪೊಲೀಸ್ ಸ್ಟೇಷನ್ ಕಾರಣದಿಂದಾಗಿ ತಾನು ಯಾವತ್ತಿಗೂ ಸಾಕ್ಷಿ ಸಮೇತ ಅಪರಾಧಿಯಾಗಿ ಬಂಧಿಸಲ್ಪಡುವುದಿಲ್ಲ ಎನ್ನುವ ವಿಶ್ವಾಸದೊಂದಿಗೆ ಜಾರ್ಜ್ ಇರುತ್ತಾನೆ. ಇದು 2013ರಲ್ಲಿ ತೆರೆಕಂಡ ಮಲಯಾಳಂ ಸಿನಿಮಾ ದೃಶ್ಯಂ'ನ ಕತೆ. ಇಂದು ಒಟಿಟಿ ಮೂಲಕ ಬಿಡುಗಡೆಯಾಗಿರುವ
ದೃಶ್ಯಂ2’ರ ಬಗ್ಗೆ ನಮ್ಮ ಅನಿಸಿಕೆಯನ್ನು ನಾವು ಇಲ್ಲಿ ನೀಡುತ್ತಿದ್ದೇವೆ.
ಚಿತ್ರದ ಮೊದಲ ದೃಶ್ಯದಲ್ಲೇ ಯಾರೋ ಒಬ್ಬಾತ ಹೆದರಿ ಓಡುವುದನ್ನು ತೋರಿಸಲಾಗುತ್ತದೆ. ಆನಂತರ ತಿಳಿದು ಬರುವಂತೆ ಆತ ಒಂದು ಕೊಲೆ ನಡೆಸಿ ಅಲ್ಲಿಂದ ಓಡುತ್ತಿರುತ್ತಾನೆ. ಹಾಗೆ ಆತ ತಪ್ಪಿಸಿಕೊಂಡು ಹೋಗುವ ಸಂದರ್ಭದಲ್ಲಿ ಅರ್ಧ ಕಟ್ಟಿದ ಪೊಲೀಸ್ ಸ್ಟೇಷನ್ ಒಳಗಿನಿಂದ ಜಾರ್ಜ್ ಕೈಯ್ಯಲ್ಲಿ ಹಾರೆ ಹಿಡಿದು ಹೊರಗೆ ಬರುವುದನ್ನು ಕಂಡಿರುತ್ತಾನೆ. ಹಾಗಾಗಿ ಶವ ಎಲ್ಲಿದೆ ಎನ್ನುವುದಕ್ಕೆ ಎಲ್ಲಿಯೂ ಸಾಕ್ಷಿಗಳಿಲ್ಲ ಎನ್ನುವ ಜಾರ್ಜ್ ನ ನಂಬಿಕೆ ಸುಳ್ಳಾಗಿದೆ ಎನ್ನುವುದನ್ನು ಆರಂಭದಲ್ಲೇ ತೋರಿಸಲಾಗುತ್ತದೆ. ಆದರೆ ಅಂತ ಒಬ್ಬ ಸಾಕ್ಷಿ ಯಾವ ಸಂದರ್ಭದಲ್ಲಿ ಜಾರ್ಜ್ ವಿರುದ್ಧ ಸಾಕ್ಷಿ ಹೇಳುತ್ತಾನೆ? ಅದಕ್ಕೆ ಜಾರ್ಜ್ ಪ್ರತಿಕ್ರಿಯೆ ಹೇಗಿರುತ್ತದೆ? ಕೊನೆಗೂ ಜಾರ್ಜ್ ಜೈಲು ಸೇರುತ್ತಾನ ಎನ್ನುವುದನ್ನು `ದೃಶ್ಯಂ2′ ಸಂಪೂರ್ಣವಾಗಿ ನೋಡಿದರೆ ಮಾತ್ರ ತಿಳಿದುಕೊಳ್ಳಬಹುದಾಗಿದೆ.
ನಿರ್ದೇಶಕ ಜೀತು ಜೋಸೆಫ್, ಈ ಎರಡನೇ ಭಾಗದಲ್ಲಿ ಯಾವುದೇ ಹೊಸ ಕ್ರೈಮ್‌ಗಳಿರುವುದಿಲ್ಲ, ಫ್ಯಾಮಿಲಿ ಸ್ಟೋರಿಯನ್ನಷ್ಟೇ ನಿರೀಕ್ಷಿಸಬೇಕು ಎಂದು ಮೊದಲೇ ಹೇಳಿದ್ದರು. ಆದರೆ ಯಾವುದೇ ಸಸ್ಪೆನ್ಸ್ ಥ್ರಿಲ್ಲರ್‌ಗೆ ಕಡಿಮೆ ಇರದ ಹಾಗೆ ಸೀಟಿನ ತುದಿಯಲ್ಲಿ ಕುಳಿತುಕೊಂಡು ನೋಡುವಷ್ಟು ಕುತೂಹಲಕರವಾಗಿ ಈ ಚಿತ್ರ ಮಾಡಿದ್ದಾರೆ. `ದೃಶ್ಯಂ’ನಲ್ಲಿ ಸಹದೇವ ಎನ್ನುವ ಪೊಲೀಸ್ ಕಾನ್ಸ್ಟೇಬಲ್ ಜಾರ್ಜ್ ಮತ್ತು ಕುಟುಂಬಕ್ಕೆ ದೊಡ್ಡ ಎದುರಾಳಿಯಂತೆ ಕಂಡಿದ್ದರೆ ಈ ಬಾರಿ ಐ.ಜಿ ಥಾಮಸ್ ಪಾತ್ರದಲ್ಲಿ ಆಗಮಿಸಿರುವ ಮುರಳಿ ಗೋಪಿ ಖಳನಾಗಿ ಕಾಡುತ್ತಾರೆ. ಈ ಬಾರಿ ಮೈಂಡ್ ಗೇಮ್‌ಗೆ ಹೆಚ್ಚು ಒತ್ತು ನೀಡಲಾಗಿದೆ. ಅದು ಕೂಡ ಪ್ರೇಕ್ಷಕನ ಬುದ್ಧಿವಂತಿಕೆ ಸವಾಲಾಗುವ ಮಟ್ಟದಲ್ಲಿದೆ. ಅದೇ ವೇಳೆ ಮಾಜಿ ಐ.ಜಿ ಹಾಗು ಮೃತ ವರುಣ್ ತಾಯಿಯಿಂದ ಜಾರ್ಜ್ ಕಪಾಳಕ್ಕೆ ಹೊಡೆಸಿಕೊಳ್ಳುವ ದೃಶ್ಯಗಳು ಕೂಡ ಪ್ರೇಕ್ಷಕರನ್ನು ಬೆಚ್ಚಿಬೀಳಿಸುತ್ತದೆ.
ಮೋಹನ್ ಲಾಲ್ ನಾಯಕರಾಗಿ ಎಂದಿನಂತೆ ಅದ್ಭುತವಾಗಿ ನಟಿಸಿದ್ದಾರೆ. ಆ ಬಗ್ಗೆ ಎರಡು ಮಾತೇ ಇಲ್ಲ. ಆದರೆ ಈ ಬಾರಿ ನಿರ್ದೇಶಕರು ಚಿತ್ರಕತೆ ಮತ್ತು ಸನ್ನಿವೇಶಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ. ಹಾಗಾಗಿ ಜಾರ್ಜ್ ಪಾತ್ರಧಾರಿ ಮೋಹನ್‌ಲಾಲ್‌ಗೆ ಮೊದಲ ಭಾಗದಲ್ಲಿದ್ದಷ್ಟು ಇಲ್ಲಿ ಅಭಿನಯಕ್ಕೆ ಅವಕಾಶಗಳಿರಲಿಲ್ಲ ಎಂದೇ ಹೇಳಬಹುದು. ಮಾತ್ರವಲ್ಲ, ಮೊದಲ ಭಾಗವನ್ನು ನೋಡಿದ ಜನರು ಆ ರೀತಿಯಲ್ಲಿ ಅಪರಾಧ ನಡೆಸಿದ್ದಾರೆ ಎನ್ನುವ ಆಪಾದನೆ ಕೇಳಿದ್ದಕ್ಕೋ ಗೊತ್ತಿಲ್ಲ; ಈ ಬಾರಿ ನಾಯಕನ ಅಪರಾಧದ ಸಮರ್ಥನೆಯ ಹೋರಾಟಕ್ಕೆ ಯಾವುದೇ ವೈಭವೀಕರಣ ನೀಡಿಲ್ಲ ಎನ್ನಬಹುದು. ಎರಡನೇ ಭಾಗದಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಮಲಯಾಳಂ ನಟ ಸಾಯಿಕುಮಾರ್ ಒಂದು ಪ್ರಮುಖ ಪಾತ್ರವನ್ನೇ ನಿಭಾಯಿಸಿದ್ದಾರೆ. ಉಳಿದಂತೆ ಮೊದಲ ಭಾಗದಲ್ಲಿದ್ದ ಬಹುತೇಕ ಎಲ್ಲ ಕಲಾವಿದರನ್ನು ಬಳಸಿಕೊಳ್ಳಲಾಗಿದೆ.
ಮೊದಲ ಭಾಗ ತೆರೆಕಂಡ ಏಳು ವರ್ಷಗಳ ಬಳಿಕ ತೆರೆಕಂಡಿರುವ ಈ ಎರಡನೇ ಭಾಗದಲ್ಲಿ ಆ ಅಂತರವನ್ನು ಆರು ವರ್ಷಗಳನ್ನಾಗಿ ತೋರಿಸಲಾಗಿದೆ. ಅದನ್ನು ಕಲಾವಿದರ ದೇಹಪ್ರಕೃತಿಯಲ್ಲಿನ ಸಹಜ ಬದಲಾವಣೆಗಳಿಗೆ ಮಾತ್ರವಲ್ಲದೆ, ಕತೆಯ ಸಂದರ್ಭಗಳಿಗೆ ಹೊಂದುವಂತೆ ಮಾಡಿರುವ ನಿರ್ದೇಶಕರ ಜಾಣ್ಮೆಯನ್ನು ಮೆಚ್ಚಲೇಬೇಕು. ಕೇಬಲ್ ಆಪರೇಟರ್ ಆಗಿದ್ದ ಜಾರ್ಜ್ ಇಷ್ಟು ವರ್ಷಗಳ ಬಳಿಕ ಥಿಯೇಟರ್ ಮಾಲೀಕನಾಗಿ ಬದಲಾಗುವುದು ಮತ್ತು ಸ್ವತಃ ಸಿನಿಮಾ ನಿರ್ಮಿಸಲು ಮುಂದಾಗುವುದು ಇವೆಲ್ಲವೂ ಆತನ ವೃತ್ತಿ ಕ್ಷೇತ್ರಕ್ಕೆ ಹೇಗೆ ಸಂಬಂಧಿಸಿದೆಯೋ ಅದೇ ರೀತಿ ಕತೆಯ ಮುಂದುವರಿಕೆಗೂ ಹೊಂದಿಕೊಂಡೇ ಇರುತ್ತದೆ ಎನ್ನುವುದನ್ನು ಕ್ಲೈಮ್ಯಾಕ್ಸ್ ಮೂಲಕ ರೋಮಾಂಚನಕಾರಿಯಾಗಿ ತೆರೆದಿಡಲಾಗಿದೆ.
ಅಂದಹಾಗೆ ಎಲ್ಲವೂ ಆಕರ್ಷಕವಾಗಿದೆ ಎನ್ನುವ ಸಂದರ್ಭದಲ್ಲೇ ಕೆಲವೊಂದು ದೃಶ್ಯಗಳಲ್ಲಿ ಲೋಪದೋಷಗಳು ಇವೆ ಎನ್ನುವುದನ್ನು ಹೇಳಲೇಬೇಕು. ಉದಾಹರಣೆಗೆ ಈ ಬಾರಿ ಕೂಡ ನಾಯಕನ ಬುದ್ಧಿವಂತಿಕೆಯನ್ನು ತೋರಿಸುವ ಪ್ರಯತ್ನವಿದೆ. ಆತನನ್ನೂ ಮೀರಿದ ಜಾಣ ಪೊಲೀಸರು ಇಲಾಖೆಯಲ್ಲಿ ಇದ್ದಾರೆ ಎನ್ನುವುದನ್ನು ತೋರಿಸುತ್ತಲೇ ಚಿತ್ರದ ಕೊನೆಯ ದೃಶ್ಯಗಳಲ್ಲಿ ಎಲ್ಲೋ ಒಂದು ಕಡೆ ಪೊಲೀಸರು ಸರಿಯಾದ ಎಚ್ಚರಿಕೆ ವಹಿಸಿಲ್ಲ ಎನ್ನುವಂತಿರುವುದು ಸುಳ್ಳಲ್ಲ. ಉದಾಹರಣೆಗೆ ಇಷ್ಟು ದೊಡ್ಡ, ಪ್ರಮುಖ ಪ್ರಕಣವೊಂದರಲ್ಲಿ ಪೊಲೀಸ್ ಸ್ಟೇಷನ್ ಒಳಗಿನ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ದಾಖಲೆಗಾಗಿ ಚಿತ್ರೀಕರಿಸಿ ಇಟ್ಟಿಲ್ಲ ಎನ್ನುವುದು ಮತ್ತು ನಾಯಕ ಜಾರ್ಜ್ ಮೇಲೆ ಸಂದೇಹ ಸಾಬೀತಾಗುತ್ತಿರುವ ಸಮಯದಲ್ಲಿ ಆತನ ಮನೆಗೆ ಪೊಲೀಸ್ ಕಾವಲು ಹಾಕುವ ಅಥವಾ ಆತನನ್ನು ಹಿಂಬಾಲಿಸುವ ಪ್ರಯತ್ನ ನಡೆಸದಿರುವುದು ಕತೆಯಲ್ಲಿನ ಮೈನಸ್ ಗಳಾಗಿ ಗೋಚರಿಸುತ್ತವೆ. ಆದರೆ ಇವುಗಳಾಚೆಗೆ ಕೂಡ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎನ್ನುವುದನ್ನು ನೋಡಿದವರೆಲ್ಲ ಒಪ್ಪುತ್ತಿದ್ದಾರೆ.
ಶಶಿಕರ ಪಾತೂರು