ನೇತ್ರದಾನ ಮಹಾದಾನ ಎನ್ನುವ ಅಭಿಯಾನದ ಹಿನ್ನೆಲೆಯಲ್ಲಿ ಮೂಡಿ ಬರುತ್ತಿರುವ ಚಿತ್ರ `ಬೆಳಕು’. ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಬಂದು ಕತ್ತಲೆಯಾದಾಗ ಮೂಡುವ ಬೆಳಕೇ ಚಿತ್ರದ ಕಾನ್ಸೆಪ್ಟ್. ಈ ಕುರಿತಾದ ಮಾಹಿತಿಯನ್ನು ಸಂಪೂರ್ಣ ಕತೆಯ ಸಮೇತ ನೀಡಿದ್ದಾರೆ ನಿರ್ದೇಶಕ ಮಂಜುನಾಥ್.
“ನೇತ್ರದಾನ ಪಡೆದಿರುವ ಹುಡುಗಿಯೊಬ್ಬಳು ಕಷ್ಟಪಟ್ಟು ನೇತ್ರತಜ್ಞೆಯಾಗುತ್ತಾಳೆ. ಆಕೆ ಮುಂದೆ ಅನಿರೀಕ್ಷಿತವಾಗಿ ಒಂದು ಕುಟುಂಬದ ಜೊತೆಗೆ ಆತ್ಮೀಯ ಸಂಬಂಧ ಬೆಳೆಸಿಕೊಳ್ಳುತ್ತಾಳೆ. ಆ ಸಂಬಂಧವೇ ಈ ಚಿತ್ರದ ಎರಡು ಪ್ರಮುಖ ಪಿಲ್ಲರ್ ಎಂದು ಹೇಳಬಹುದು. ಅವರೇ ರಾಘವೇಂದ್ರ ರಾಜ್ ಕುಮಾರ್ ಮತ್ತು ಸುಧಾರಾಣಿ. ಇವರೊಂದಿಗೆ ಸೇರಿಕೊಳ್ಳುವ ನೇತ್ರತಜ್ಞೆಗೆ ತನಗೆ ಸಿಕ್ಕಿರುವಂಥ ಕಣ್ಣು ಇವರ ಮಗನದ್ದೇ ಎನ್ನುವ ಸತ್ಯದ ಅರಿವಾಗುತ್ತದೆ. ಬಳಿಕ ಇವರ ಸಂಬಂಧ ಇನ್ನಷ್ಟು ಆತ್ಮೀಯವಾಗುತ್ತದೆ. ನಾನು ನಿಮ್ಮ ಮಗಳಂತೆ ಇರುತ್ತೇನೆ ಎಂದು ಕೇಳಿಕೊಳ್ಳುತ್ತಾಳೆ. ಅವರು ಕೂಡ ಒಪ್ಪಿಕೊಳ್ಳುತ್ತಾರೆ. ಆದರೆ ನಮಗಾಗಿ ಆಕೆ ತ್ಯಾಗಜೀವಿಯಾಗಿ ಬದುಕಬಾರದು ಎಂದುಕೊಂಡು ಆಕೆಯ ವಿವಾಹಕ್ಕೆ ತಯಾರಿ ಮಾಡುತ್ತಾರೆ. ಆದರೆ ಆಕೆ ಒಬ್ಬ ಅಂಧನನ್ನೇ ಮದುವೆಯಾಗುವ ಮೂಲಕ ಅಲ್ಲಿಯೂ ಆದರ್ಶವಾಗುತ್ತಾಳೆ. ಒಟ್ಟಿನಲ್ಲಿ ಎಲ್ಲರೂ ನೇತ್ರದಾನದ ಬಗ್ಗೆ ಕಾಳಜಿ ಇರಿಸಿಕೊಳ್ಳಬೇಕು ಎನ್ನುವುದೇ ಚಿತ್ರದ ಸಂದೇಶ” ಎಂದು ಒಂದೇ ಉಸಿರಿಗೆ ಚಿತ್ರದ ಪೂರ್ತಿ ಹೂರಣವನ್ನು ನೀಡಿದ್ದಾರೆ ನಿರ್ದೇಶಕ ಮಂಜುನಾಥ್.
ಈ ಚಿತ್ರಕ್ಕೂ ಹೊಸ ಬೆಳಕು ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಡಾ.ರಾಜ್ ಕುಮಾರ್‌ಗೂ ಈ ಚಿತ್ರಕ್ಕೂ ಸಂಬಂಧವಿದೆ. ಅದು ನೇತ್ರದಾನದ ಕುರಿತಾದ ಅವರ ಆಶಯ ಮಾತ್ರವಲ್ಲ, ಅವರ ಪುತ್ರನಾದ ನಾನು ಕೂಡ ಈ ಚಿತ್ರದಲ್ಲೊಂದು ಪಾತ್ರ ಮಾಡುತ್ತಿದ್ದೇನೆ. ಅದೇ ದೊಡ್ಡ ಸಂಬಂಧ ಎಂದು ನಕ್ಕರು ನಟ ರಾಘವೇಂದ್ರ ರಾಜ್ ಕುಮಾರ್. ಚಿತ್ರದಲ್ಲಿ ಯಾರು ಪ್ರಮುಖ ಪಾತ್ರವಹಿಸುತ್ತಾರೆ ಎನ್ನುವುದಕ್ಕಿಂತ, ಒಂದು ಒಳ್ಳೆಯ ಸಂದೇಶ ಇರುವ ಚಿತ್ರದಲ್ಲಿ ಎಲ್ಲರೂ ಭಾಗವಾಗಿದ್ದಾರೆ ಎನ್ನುವುದೇ ಖುಷಿಯ ವಿಚಾರ ಎಂದರು ರಾಘಣ್ಣ. ನಟಿ ಸುಧಾರಾಣಿ ಮಾತನಾಡಿ, ಡಾ.ರಾಜ್ ಕುಮಾರ್ ಕುಟುಂಬದ ಮೂಲಕವೇ ಚಿತ್ರರಂಗ ಪ್ರವೇಶಿಸಿದ ನಾನು ಇದುವರೆಗೆ ಆ ಕುಟುಂಬದ ಮೂರು ತಲೆಮಾರಿನ ಕಲಾವಿದರ ಜೊತೆಗೂ ನಟಿಸಿದ್ದೇನೆ. ಆದರೆ ರಾಘಣ್ಣನೊಂದಿಗೆ ನಟಿಸುವ ಪ್ರಥಮ ಅವಕಾಶ ಈ ಚಿತ್ರದ ಮೂಲಕ ದೊರಕಿದೆ ಎಂದರು.
ಚಿತ್ರದಲ್ಲಿ ನವನಟಿ ನಿರೀಕ್ಷಾ ಶೆಟ್ಟಿ ಪುತ್ತೂರು ಪ್ರಧಾನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ತುಳು ಭಾಷೆಯಲ್ಲಿ ತೆರೆಕಂಡ ‘ಅಪ್ಪೆ ಟೀಚರ್’ ಎನ್ನುವ ಸೂಪರ್ ಹಿಟ್ ಚಿತ್ರದಲ್ಲಿ ಅವರು ನಾಯಕಿಯಾಗಿದ್ದರು.
“ಇದು ನನ್ನ ನಿರ್ಮಾಣದ 28ನೇ ಚಿತ್ರ” ಎಂದು ಮಾತು ಶುರು ಮಾಡಿದ ನಿರ್ಮಾಪಕ ಬಿ ಎನ್ ಗಂಗಾಧರ್ ಇದೇ ವರ್ಷ ಮೂವತ್ತನೆಯ ಚಿತ್ರ ಕೂಡ ತಯಾರಿಸುವ ಸಾಧ್ಯತೆ ಇದೆ ಎಂದರು. ಅದಕ್ಕೆ ಕಾರಣ ಇಂಥದೇ ಒಳ್ಳೆಯ ಸಬ್ಜೆಕ್ಟ್ ಬಗ್ಗೆ ರಾಘಣ್ಣನಲ್ಲಿ ಮಾತನಾಡಿದಾಗ ಅವರು ಬೇರೊಂದು ಕತೆಯನ್ನು ಕೂಡ ಒಪ್ಪಿಕೊಂಡಿದ್ದಾರೆ. ಹಾಗಾಗಿ ರಾಘವೇಂದ್ರ ರಾಜ್ ಕುಮಾರ್ ಅವರೊಂದಿಗೆ ಸದ್ಯದಲ್ಲೇ ಮತ್ತೊಂದು ಸಿನಿಮಾ ಕೂಡ ಮಾಡುವುದು ಬಹುತೇಕ ಖಚಿತವಾಗಿದೆ” ಎಂದರು. ಒಂದು ಒಳ್ಳೆಯ ಕತೆ ಇರುವ ಈ `ಬೆಳಕು’ ಚಿತ್ರಕ್ಕೆ ಪ್ರಶಸ್ತಿ ಬರುವುದೆನ್ನುವ ನಿರೀಕ್ಷೆ ನನಗಿದೆ ಎಂದು ಅವರು ಮಾತು ಮುಗಿಸಿದರು.