
ಆರಂಭ ಕಾಲದಿಂದಲೂ ಕನ್ನಡದಲ್ಲಿ ಧಾರಾವಾಹಿಗಳ ವಿಚಾರದಲ್ಲಿ ದಾಖಲೆ ಬರೆದ ಕೀರ್ತಿ ಉದಯ ವಾಹಿನಿಯದ್ದು. ಇಂದಿಗೂ ಕೂಡ ಹೊಸ, ಹೊಸ ಸೀರಿಯಲ್‍ಗಳನ್ನು ಪ್ರೇಕ್ಷಕರಿಗೆ ನೀಡುವಲ್ಲಿ ರಾಜನಂತಿರುವ ಉದಯ, ಇದೀಗ ಮತ್ತೊಂದು ಖುಷಿ ಸಮಾಚಾರವನ್ನು ಕಿರುತೆರೆ ಪ್ರಿಯರ ಮುಂದಿರಿಸಿದೆ. ಅದುವೇ ಗೌರಿಪುರದ ಗಯ್ಯಾಳಿಗಳು’ ಮತ್ತು
ನೇತ್ರಾವತಿ’ ಎನ್ನುವ ಎರಡು ವಿನೂತನ ಧಾರಾವಾಹಿಗಳು. ಇದೇ ಮಾರ್ಚ್ ಹದಿನೈದರ ಸೋಮವಾರದಿಂದ ಉದಯ ವಾಹಿನಿಯಲ್ಲಿ ಇವುಗಳ ಪ್ರಸಾರ ಶುರುವಾಗಲಿವೆ.
ಸಂಜೆ 6.30ಕ್ಕೆ `ಗೌರಿಪುರದ ಗಯ್ಯಾಳಿಗಳು’

ಬೆಳ್ಳಿ ಪರದೆಯಲ್ಲಿ ಸುದ್ದಿಯಾದ ಕಿರಗೂರಿನ ಗಯ್ಯಾಳಿಗಳು’ ಸಿನಿಮಾ ಎಲ್ಲರಿಗೂ ಗೊತ್ತು. ಅದೇ ಮಾದರಿಯಲ್ಲಿ ಕಿರುಪರದೆ ವೀಕ್ಷಕರನ್ನು ಸೆಳೆಯಲು ಬರುತ್ತಿರುವ ಧಾರಾವಾಹಿಯೇ
ಗೌರಿಪುರದ ಗಯ್ಯಾಳಿಗಳು’. ಗೌರಿಪುರ ಎನ್ನುವ ಮಧ್ಯಮ ವರ್ಗದವರ ಕಾಲನಿಯಲ್ಲಿರುವ ನಾಲ್ವರು ಗಯ್ಯಾಳಿಗಳ ಕತೆ ಇದು. ಮಧ್ಯಮ ವರ್ಗದ ನಾಲ್ವರು ಮಹಿಳೆಯರು ಸ್ತ್ರೀ ಸಂಘ ಸ್ಥಾಪಿಸಿ ಹಪ್ಪಳ, ಸಂಡಿಗೆ ತಯಾರಿ ಮಾಡುವವರು. ಇವರ ಬಾಯಿಗೆ ಕಾಲನಿಯೇ ಹೆದರುತ್ತದೆ. ಇವರ ನಡುವಲ್ಲಿಯೂ ಸಮಸ್ಯೆಗಳಿವೆ. ಆದರೆ ಹೊರಗಿನವರು ಬಂದಾಗ ಮಾತ್ರ ಇವರೆಲ್ಲ ಒಗ್ಗಟ್ಟಾಗುತ್ತಾರೆ. ಇಂಥವರ ಮಧ್ಯೆ ಗುಲಾಬಿಯಂಥ ಹುಡುಗಿಯೋರ್ವಳ ಪ್ರವೇಶವಾಗುತ್ತದೆ. ಆಕೆ ತನ್ನ ತಂದೆಯ ನಿಗೂಢ ಸಾವಿಗೆ ಸಾಕ್ಷಿ ಹುಡುಕಿಕೊಂಡು ಬಂದಿರುತ್ತಾಳೆ. ಈ ಗಯ್ಯಾಳಿಗಳ ನಡುವೆ ನಡೆಯುವ ರಸಮಯ ಘಟನೆಗಳು ಮ್ತು ಗುಲಾಬಿಯ ಪ್ರವೇಶ ಕತೆಯಲ್ಲಿ ಹೊಸತನವನ್ನು ಸೃಷ್ಟಿಸುತ್ತಾ ಸಾಗುತ್ತದೆ. ರವಿತೇಜ ನಿರ್ದೇಶನದಲ್ಲಿ ಮೂಡಿ ಬರಲಿರುವ ಈ ಧಾರಾವಾಹಿಯಲ್ಲಿ ಪ್ರಧಾನ ಪಾತ್ರಗಳನ್ನು ನವ್ಯಾ, ರೋಹಿಣಿ, ದಿವ್ಯಾ, ವೀಣಾ, ರಚನಾ, ಆರ್ವ ಬಸವಟ್ಟಿ ಮೊದಲಾದವರಿದ್ದಾರೆ. ನಟ, ಸಂಗೀತ ನಿರ್ದೇಶಕ, ಗಾಯಕ ಸಾಧು ಕೋಕಿಲ ಅವರು ತಮ್ಮ `ಸುರಾಗ್’ ಪ್ರೊಡಕ್ಷನ್ಸ್‍ನ ಲಾಂಛನದಲ್ಲಿ ಈ ಧಾರಾವಾಹಿ ನಿರ್ಮಿಸುತ್ತಿದ್ದಾರೆ. ಇದು ಕಿರುತೆರೆಯಲ್ಲಿ ಅವರ ಮೊದಲ ಪ್ರಯತ್ನ.
7.30ಕ್ಕೆ ಹರಿದು ಬರಲಿದೆ `ನೇತ್ರಾವತಿ’

ಅನಂತನ ಅವಾಂತರ’,
ತರ್ಲೆ ನನ್ನ ಮಗ’ ಸಿನಿಮಾ ನೋಡಿದವರು ಆ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಂಥ ನಟಿ ಅಂಜಲಿಯವರನ್ನು ಮರೆಯುವುದು ಕಷ್ಟ. ಅವುಗಳಷ್ಟೇ ಅಲ್ಲ; ವಿಷ್ಣುವರ್ಧನ್ ಅವರ ನೀನು ನಕ್ಕರೆ ಹಾಲು ಸಕ್ಕರೆ’ ಚಿತ್ರದಲ್ಲಿಯೂ ಆಕೆ ನಾಯಕಿಯಾಗಿದ್ದರು. ಹಾಗೆ ತೊಂಬತ್ತರ ದಶಕದಲ್ಲಿ ಜನಪ್ರಿಯ ನಟಿಯಾಗಿದ್ದ ಅಂಜಲಿ ಇದೀಗ ಕಿರುತೆರೆಯ ಮೂಲಕ ಮರಳಿ ಬರುತ್ತಿರುವ ಧಾರಾವಾಹಿಯೇ
ನೇತ್ರಾವತಿ’.
ಅಂದಹಾಗೆ ಅಂಜಲಿಯವರದ್ದು ನೇತ್ರಾವತಿಯ ಪಾತ್ರವಲ್ಲ. ಸುಮಾರು ಇಪ್ಪತ್ತೆರಡು ವರ್ಷಗಳ ಬಳಿಕ ಬಣ್ಣದ ಲೋಕಕ್ಕೆ ಮರಳುತ್ತಿರುವಾಗ ಸಹಜವಾಗಿ ಅಂಜಲಿ ನೇತ್ರಾವತಿಗೆ ತಾಯಿಯಾಗಿದ್ದಾರೆ. ಈ ತಾಯಿಯ ಹೆಸರು ಭಾಗೀರಥಿ.

ನೇತ್ರಾವತಿ ಎಂದೊಡನೆ ಧರ್ಮಸ್ಥಳ ಕ್ಷೇತ್ರದಿಂದ ಹರಿಯುವ ನದಿಯ ನೆನಪಾಗುವುದು ಸಹಜ. ಈ ನೇತ್ರಾವತಿಯೂ ಅಷ್ಟೇ; ಮಂಜುನಾಥ ಸ್ವಾಮಿಯ ಭಕ್ತೆ. ವೃತ್ತಿಯಲ್ಲಿ ಆಶಾ ಕಾರ್ಯಕರ್ತೆ. ಎಲ್ಲವನ್ನು ತನ್ನೊಡಲ ಒಳಗೆ ಅಡಗಿಸಿ ಆರಾಮವಾಗಿ ಹರಿಯುವ ನದಿಯಂತೆ ತನ್ನೊಳಗೆ ನೋವಿದ್ದರೂ ತೋರಿಸಿಕೊಳ್ಳದೆ ಇತರರಿಗೆ ನಗು ಹಂಚಿ ಸಮಾಧಾನ ನೀಡುವಾಕೆ. ದುರ್ಗಾ ಶ್ರೀಯವರು ಜೀವ ತುಂಬಲಿರುವ ನೇತ್ರಾವತಿ ಧಾರಾವಾಹಿಯು ಡಾ.ರಾಜ್ ಕುಮಾರ್ ಕುಟುಂಬಕ್ಕೆ ಸೇರಿದ `ಪೂರ್ಣಿಮಾ ಪ್ರೊಡಕ್ಷನ್ಸ್’ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ.
ಕಿರುತೆರೆಯ ಜನಪ್ರಿಯ ನಿರ್ದೇಶಕ ಸಂತೋಷ್ ಗೌಡ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಧಾರಾವಾಹಿಯ ತಾರಾಗಣದಲ್ಲಿ ಸನ್ನಿ ಮಹಿಪಾಲ್, ಸಚಿನ್, ಚೈತ್ರಾ ರಾವ್, ದಾನಪ್ಪ, ಐಶ್ವರ್ಯಾ ಮೊದಲಾದವರಿದ್ದಾರೆ. ದಯಾಕರ್ ಛಾಯಾಗ್ರಹಣ ಮತ್ತು ಗುರುಮೂರ್ತಿ ಹೆಗ್ಡೆಯವರು ಸಂಕಲನ ನಿರ್ವಹಿಸಿರುವ ಈ ಧಾರಾವಾಹಿ ಕೂಡ ಮಾರ್ಚ್ 15ರ ಸೋಮವಾರದಿಂದ ಸಂಜೆ 7.30ಕ್ಕೆ ಪ್ರಸಾರಗೊಳ್ಳಲಿದೆ.
