
ವಿಶ್ವ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಖ್ಯಾತ ಕಿರುತೆರೆ ನಿರ್ದೇಶಕ ಟಿ.ಎನ್ ಸೀತಾರಾಮ್ ಅವರ ಬರಹ ಇದು. ತಮ್ಮ ರಂಗಭೂಮಿಯ ದಿನಗಳ ರಸಪೂರ್ಣ ನೆನಪುಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರ ಅನುಮತಿಯೊಂದಿಗೆ ನಮ್ಮ ಸಿನಿಕನ್ನಡ.ಕಾಮ್ ಓದುಗರಿಗಾಗಿ ನಾವು ಇಲ್ಲಿ ನೀಡಿದ್ದೇವೆ.
ನಾನು ನಾಲ್ಕು ನಾಟಕ ಬರೆದು ನಂತರ ಸೋಮಾರಿಯಾಗಿಬಿಟ್ಟೆ.
ಯಾರಾದರೇನಂತೆ,
ಬದುಕ ಮನ್ನಿಸು ಪ್ರಭುವೆ,
ಆಸ್ಫೋಟ
ಮತ್ತು
ನಮ್ಮೊಳಗೊಬ್ಬ ನಾಜೂಕಯ್ಯ
ಮೊದಲ ನಾಟಕ ಬರೆದಾಗ ನನಗೆ 18 ವರ್ಷ.ಕಾಲೇಜಿನಲ್ಲಿ ಓದುತ್ತಿದ್ದೆ.ಪ್ರಜಾವಾಣಿ ಪತ್ರಿಕೆ ಯವರು ಮೊದಲ ಬಾರಿಗೆ ದೀಪಾವಳಿ ಗಾಗಿ ನಾಟಕ ರಚನಾ ಸ್ಪರ್ಧೆ ಏರ್ಪಡಿಸಿದ್ದರು. ಐನೂರು ರೂಪಾಯಿ ಯ ಒಂದೇ ಬಹುಮಾನ.
ಯೂರೋಪಿನಲ್ಲಿ ಆಗ ತಾನೇ ಪ್ರಚಲಿತ ವಾಗುತ್ತಿದ್ದ ಅಸಂಗತ ನಾಟಕಗಳ(absurd theatre) ನಿಂದ ಪ್ರಭಾವಿತನಾಗಿ ‘ಯಾರಾದರೇನಂತೆ’ ಎನ್ನುವ ಅಸಂಗತ ನಾಟಕ ಬರೆದು ಕಳಿಸಿದ್ದೆ.
ನನಗೆ ಬಹುಮಾನ ಬರಲಾರದು ಎಂದೇ ನಾನು ಭಾವಿಸಿದ್ದೆ. ಆದರೆ ಬಹುಮಾನ ಬಂದೇ ಬಿಟ್ಟಿತು. ಆದರೆ ಪೂರಾ ಐನೂರು ರೂಪಾಯಿ ಅಲ್ಲ. ಬಹುಮಾನವನ್ನು ಇಬ್ಬರಿಗೆ ತೀರ್ಪುಗಾರರು ಹಂಚಿದ್ದರು.ಬಹುಮಾನ ದಲ್ಲಿ ಇನ್ನೂರು ರೂಪಾಯಿ ನನಗೆ, ಮುನ್ನೂರು ರೂಪಾಯಿ ನನ್ನ ಗುರುಗಳಾಗಿದ್ದ ಲಂಕೇಶ್ ಮೇಷ್ಟ್ರಿಗೆ.
ಹೌದು.ಮೇಷ್ಟ್ರು ಕೂಡಾ ಅದೇ ಸ್ಪರ್ಧೆ ಗೆ ಅದ್ಭುತ ನಾಟಕವೊಂದನ್ನು ಬರೆದು ಕಳಿಸಿದ್ದರು.ಸಂಸರ ಬದುಕಿನ ಕೊನೆಯ ದಿನಗಳನ್ನು ಆಧರಿಸಿದ್ದ ‘ಪೋಲೀಸರಿದ್ದಾರೆ ಎಚ್ಚರಿಕೆ’ ನಮ್ಮನ್ನು ತಲ್ಲಣಗೊಳಿಸುವ ಸುಂದರ ನಾಟಕ.
ನನ್ನ ನಾಟಕಕ್ಕಿಂತ ತುಂಬಾ ಉತ್ತಮ ನಾಟಕ ಅದು.ನ್ಯಾಯ ವಾಗಿ ನೋಡಿದರೆ ಆ ನಾಟಕಕ್ಕೇ ಪೂರಾ ಮೊದಲ ಬಹುಮಾನ ಬರಬೇಕಿತ್ತು.ಗುರುಗಳಾದ ಲಂಕೇಶರ ನಾಟಕವೆಲ್ಲಿ, ನನ್ನ ನಾಟಕವೆಲ್ಲಿ! ಆದರೆ ಅದೇಕೋ ತೀರ್ಪು ಗಾರರು ಬಹುಮಾನ ಹಂಚಿಬಿಟ್ಟಿದ್ದರು.ಉದಯೋನ್ಮುಖ ನಾಟಕಕಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಅವರು ಹಾಗೆ ಮಾಡಿದ್ದಿರಬಹುದು ಎಂದು ನಾನು ಭಾವಿಸಿದೆ.
ಅವರು ನಾಟಕ ಕಳಿಸುತ್ತಾರೆಂದು ನನಗೆ ಗೊತ್ತಿದ್ದರೆ ನಾನು ನಾಟಕ ಕಳಿಸು ಸಾಹಸ ಮಾಡುತ್ತಿರಲಿಲ್ಲ. ಅವರ ತೀರಾ ಹತ್ತಿರದ ಶಿಷ್ಯ ಆಗಿದ್ದೆ ನಾನು ಆಗ. ಹಾಗೆಂದು ನನ್ನ ನಾಟಕ ತೀರಾ ಕಳಪೆಯಾಗಿರಲಿಲ್ಲ.ಲಂಕೇಶರ ನಾಟಕದ ತೇಜಸ್ಸಿನ ಮುಂದೆ ನನ್ನದು ಮಂಕಾಗಿತ್ತು.

ಬಹುಮಾನ ದ ವಿವರಗಳು ಪತ್ರಿಕೆಯಲ್ಲಿ ಬಂದ ದಿನ ರವೀಂದ್ರ ಕಲಾಕ್ಷೇತ್ರಕ್ಕೆ ಸಂಭ್ರಮದಲ್ಲಿ ಹೋದ ನನಗೆ ಅಲ್ಲಿ ಸಿಕ್ಕಿದ ಮೇಷ್ಟ್ರು ಸಹಜವಾಗಿ ನನ್ನ ಮೇಲೆ ಮತ್ತು ಪ್ರಜಾವಾಣಿ ಯ ಮೇಲೆ ಬಹಳ ಸಿಟ್ಟಾಗಿಬಿಟ್ಟರು.
ಅಲ್ಲಿ ನನ್ನ ಇನ್ನೊಬ್ಬ ಗುರುಗಳಾಗಿದ್ದ ಕೆ.ಮರುಳಸಿದ್ಧಪ್ಪ ನವರೂ ಇದ್ದರು.ಅವರ ಸಿಟ್ಟು ನನಗೆ ಅರ್ಥ ವಾಗಿತ್ತು.ಅದು ನ್ಯಾಯವಾಗಿ ಕೂಡಾ ಇತ್ತು. ಅವರ ನಾಟಕ ಪ್ರತಿಭೆಯ ಕಾಲು ಭಾಗವೂ ಇಲ್ಲದಿದ್ದ ನನಗೆ ಅವರ ಬಹುಮಾನದಲ್ಲಿ ಅರ್ಧ ಕಿತ್ತು ಕೊಟ್ಟರೆ.ಸಿಟ್ಟು ಬರುವುದು ಸಹಜವಾಗಿತ್ತು. ‘ ನಾನು ಈ ಬಹುಮಾನ ವನ್ನು ತಿರಸ್ಕರಿಸಿ ಹೇಳಿಕೆ ಕೊಟ್ಟು ಬಿಡಲಾ ಸಾರ್’ ಎಂದು ಕೇಳಿದೆ.ಹಾಗೆ ಹೇಳಿಕೆ ಕೊಡಲು ಸಿದ್ಧವೂ ಆಗಿದ್ದೆ.ಆಗ ಕೆ.ಎಂ.ಎಸ್.ರವರು ಹಾಗೆಲ್ಲಾ ಮಾಡಬಾರದು ಎಂದು ತಡೆದರು.
ಎರಡನೆಯ ದಿನದ ವೇಳೆಗೆ ಮೇಷ್ಟ್ರ ಸಿಟ್ಟು ಮುಕ್ಕಾಲು ಭಾಗ ಕಡಿಮೆ ಯಾಗಿತ್ತು.ನನ್ನ ಗೆಳೆಯ ಮತ್ತು ನಿರ್ದೇಶಕ ಆರ್.ನಾಗೇಶ್ ಬಂದು ಈ ಎರಡೂ ನಾಟಕಗಳನ್ನು ಒಟ್ಟಿಗೇ ಪ್ರದರ್ಶಿಸುವ ಇಚ್ಛೆ ವ್ಯಕ್ತ ಪಡಿಸಿದ.(ನಾಗೇಶ್ ಆಗಿನ ಕಾಲದ ರಂಗಭೂಮಿಯ ದೊಡ್ಡ ರಂಗ ಚೈತನ್ಯ ವಾಗಿದ್ದ.ನಿರ್ದೇಶನ ಮತ್ತು ನಟನೆಗಳಲ್ಲಿ ನನ್ನ ಗುರುವಾಗಿದ್ದ.ಅವನ ಒತ್ತಾಯವಿಲ್ಲದಿದ್ದರೆ ನಾನು ಮುಂದೆ ಯಾವ ನಾಟಕವನ್ನೂ ಬರೆಯುತ್ತಿರಲಿಲ್ಲ, ನಿರ್ದೇಶನಕ್ಕೂ ಇಳಿಯುತ್ತಿರಲಿಲ್ಲ)
ಬಹಳ ಅಂಜಿಕೆಯಿಂದಲೇ ಲಂಕೇಶ್ ಮೇಷ್ಟ್ರ ಬಳಿ ಹೋಗಿ ಈ ವಿಚಾರ ಪ್ರಸ್ತಾಪ ಮಾಡಿದೆವು.ಮೇಷ್ಟ್ರ ಸಿಟ್ಟು ಮಾಯವಾಗಿತ್ತು. ಇದಕ್ಕೆ ಸಂತೋಷದಿಂದ ಒಪ್ಪಿಗೆ ಇತ್ತು,ಎರಡೂ ನಾಟಕಗಳನ್ನು ತಮ್ಮ ಪ್ರತಿಮಾ ನಾಟಕ ರಂಗದಿಂದಲೇ ಪ್ರದರ್ಶಿಸಲು ಹೇಳಿ ಅದಕ್ಕೆ ಬೇಕಾದ ಹಣ ಕೊಟ್ಟರು.ಐದೈದು ರೂಪಾಯಿ ಟಿಕೆಟ್ ಇಟ್ಟು ನಾಟಕ ಮಾಡಿದೆವು.
ನಾಟಕ ಹೌಸ್ ಫುಲ್ ಆಯಿತು.ಮೇಷ್ಟ್ರ ‘ಪೋಲೀಸರಿದ್ದಾರೆ ಎಚ್ಚರಿಕೆ’ ನಾಟಕ ದಲ್ಲಿ ಸಿಂಹ ಮತ್ತು ನಾನು ಮುಖ್ಯ ಪಾತ್ರ ಗಳನ್ನು ವಹಿಸಿದೆವು, ನನ್ನ
‘ಯಾರಾದರೇನಂತೆ ‘ ನಾಟಕದಲ್ಲಿ ಇಂದಿನ ರಂಗದೊರೆ ಆಸ್ಪತ್ರೆಯ ಮುಖ್ಯಸ್ಥ
ಡಾಕ್ಟರ್ ರಾಜಕುಮಾರ್ ಮುಖ್ಯ ಪಾತ್ರ ವಹಿಸಿದ್ದರು.ನಿರೀಕ್ಷೆ ಯಂತೆ ಲಂಕೇಶರ ನಾಟಕಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತು. ಮೇಷ್ಟ್ರ ಆ ನಾಟಕ ಇಂದಿಗೂ ನನ್ನ ಅಚ್ಚು ಮೆಚ್ಚಿನ ನಾಟಕಗಳಲ್ಲಿ ಒಂದು.
ಮುಂದಿನ ವರ್ಷದ ಪ್ರಜಾವಾಣಿ ದೀಪಾವಳಿ ನಾಟಕ ಸ್ಫರ್ಧೆ ವೇಳೆಗೆ ಮೇಷ್ಟ್ರು ನಾಟಕ ಕಳಿಸುತ್ತಿಲ್ಲವೆಂದು ಖಾತರಿ ಮಾಡಿಕೊಂಡು ನಾನೊಂದು ನಾಟಕ ಬರೆದು ಕಳಿಸಿದೆ.ಅದಕ್ಕೆ ಮೊದಲ ಬಹುಮಾನ ಪೂರಾ ಐನೂರು ರೂಪಾಯಿ ಬಂತು.
ನನ್ನ ತಂದೆ ಆ ವರ್ಷದ ಮೊದಲಲ್ಲಿ ತೀರಿಕೊಂಡಿದ್ದರು.ಅವರ ಯಾವುದೋ ಮಾತನ್ನು ನಾನು ಕೇಳಿರಲಿಲ್ಲವೆಂದು ನನಗೆ ಸ್ವಲ್ಪ ಪಾಪಪ್ರಜ್ಞೆ ಕಾಡುತ್ತಿತ್ತು. ಅವೆರಡು ಸಂಗತಿಗಳನ್ನು ಇಟ್ಟುಕೊಂಡು, ನನ್ನ ಬದುಕಿನ ಒಂದು ಭಾಗದಂತಿರುವ ‘ಬದುಕ ಮನ್ನಿಸು ಪ್ರಭುವೇ’ ನಾಟಕವೇ ಅದು.ಅದು ಯಶಸ್ವಿ ಯಾದ ನಾಟಕವಾಯಿತು.ಮೇಷ್ಟ್ರು ಕೂಡಾ ತುಂಬಾ ಮೆಚ್ಚುಗೆ ಯ ಮಾತುಗಳನ್ನು ಆಡಿದರು..
ಲಂಕೇಶ್ ಮೇಷ್ಟ್ರು ನನಗೆ ಕಲಿಸಿದ್ದು ಅಪಾರ.ಗದ್ಯ, ಚಿಂತನೆ, ಬದುಕು, ಮನುಷ್ಯ ನ ನೂರು ಮುಖಗಳು, ಖ್ಯಾತಿಯ ಕ್ಷಣಿಕತೆ ಎಲ್ಲದರ ಬಗ್ಗೆ.. ನನಗೆ ಅವರ ಬಹುತೇಕ ನಾಟಕಗಳಲ್ಲಿ ಮುಖ್ಯ ಪಾತ್ರ ಕೊಟ್ಟಿದ್ದರು.ಅವರ ಚಿತ್ರ ಪಲ್ಲವಿಯಲ್ಲಿ ನನ್ನನ್ನು ಹೀರೋ ಮಾಡಿದರು.ನನಗೆ ಒಂದು ಪುಟ್ಟ ಸೆಲೆಬ್ರಿಟಿ ಸ್ಥಾನ ತಂದುಕೊಟ್ಟರು..ನಾನು ಏರಿದ್ದೇನೆ ಎಂದುಕೊಂಡ ಅನೇಕ ಮೆಟ್ಟಿಲು ಅವರು ಹತ್ತಿಸಿದ್ದು
ಬೆಂಗಳೂರು ವಿಶ್ವವಿದ್ಯಾಲಯವು ಆ ವರ್ಷ ‘ ದಶಕದ ಶ್ರೇಷ್ಠ ನಾಟಕಗಳು’ ಎಂಬ ಗ್ರಂಥ ಪ್ರಕಟಿಸಿತು.ಅದರಲ್ಲಿ ನನ್ನ ಈ ನಾಟಕವೂ ಸೇರಿತ್ತು.
ನನ್ನ ಗುರು, ಗೆಳೆಯ ನಾಗೇಶ್ ಹೋಗಿ ಹತ್ತು ವರ್ಷ ದ ಮೇಲಾಯಿತು.ಲಂಕೇಶ್ ಮೇಷ್ಟ್ರು ಹೋಗಿ ಇಪ್ಪತ್ತು ವರ್ಷದ ಮೇಲಾಯಿತು.ಅವರಿಂದ ನಾನು ಕಲಿತಿದ್ದು ಅಪಾರ.
ಅಂದಿನ ಕಹಿ ಘಟನೆಯಿಂದಾಗಿ ನಾನು ನನ್ನ ಮೊದಲ ಆ ನಾಟಕ ಪ್ರಕಟಿಸಲಿಲ್ಲ. ದೀಪಾವಳಿ ಸಂಚಿಕೆಯಲ್ಲಿ ಆ ವರ್ಷ ಅದು ಪ್ರಕಟವಾದುದ್ದೆಷ್ಟೋ ಅಷ್ಟೇ.
ಇಂದು ವಿಶ್ವ ರಂಗಭೂಮಿಯ ದಿನಾಚರಣೆ.ಅದರ ನೆನಪು ಬಂದ ಹಾಗ ಇದೆಲ್ಲಾ ನೆನಪಾಯಿತು.
ವಿಶ್ವ ರಂಗಭೂಮಿ ಶುಭಾಶಯಗಳು