
ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ `ವಿಕ್ರಾಂತ್ ರೋಣ’ ಬಿಡುಗಡೆಯ ದಿನಾಂಕ ಘೋಷಿಲಾಗಿದೆ. ಇದೇ ಆಗಸ್ಟ್ 19ರಂದು ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಅಧಿಕೃತವಾಗಿ ಘೋಷಿಸಿದ್ದಾರೆ.
2019ರಲ್ಲಿ ಸುದೀಪ್ ಅವರ ನಟನೆಯ ಪೈಲ್ವಾನ್' ಚಿತ್ರ ತೆರೆಕಂಡ ಬಳಿಕ ಅವರು ನಾಯಕರಾಗಿ ನಟಿಸಿದ ಯಾವ ಸಿನಿಮಾಗಳೂ ಬಂದಿಲ್ಲ. ಹಾಗಾಗಿ ಸತತ ಮೂರು ವರ್ಷಗಳಿಂದ ಸುದೀಪ್ ಅಭಿಮಾನಿಗಳು ಅವರದೊಂದು ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಇದರ ನಡುವೆ ಅದೇ ವರ್ಷ
ಸೈರ ನರಸಿಂಹ ರೆಡ್ಡಿ’ ಎನ್ನುವ ಚಿರಂಜೀವಿಯ ತೆಲುಗು ಸಿನಿಮಾ ಮತ್ತು ದಬಂಗ್ 3' ಎನ್ನುವ ಸಲ್ಮಾನ್ ಖಾನ್ ಅವರ ಹಿಂದಿ ಸಿನಿಮಾ ಪ್ರದರ್ಶನ ಕಂಡಿತ್ತು. ಅವುಗಳಲ್ಲಿನ ಸಣ್ಣ ಪಾತ್ರಗಳಿಗಿಂತ ಕನ್ನಡದಲ್ಲೇ ನಾಯಕರಾಗಿ ಚಿತ್ರ ತುಂಬ ತುಂಬಿರುವ ಆರಡಿ ಕಟೌಟ್ ಬರಲೆಂದು ಕಾಯುತ್ತಿದ್ದಾರೆ ಅಭಿಮಾನಿಗಳು. ಇದರ ನಡುವೆ
ಕೋಟಿಗೊಬ್ಬ 3′ ಕೂಡ ಈ ವರ್ಷ ತೆರೆ ಕಾಣಲಿರುವ ಚಿತ್ರವಾಗಿ ಘೋಷಿಸಲ್ಪಟ್ಟಿದೆ.
ಎಷ್ಟೊಂದು ಅತಿಥಿ ಪಾತ್ರ?
ಸುದೀಪ್ ಇತ್ತೀಚೆಗೆ ಹೆಚ್ಚು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತಿಲ್ಲ. ಆದರೆ ಅವರನ್ನು ಅತಿಥಿಯಾಗಿ ಆಹ್ವಾನಿಸುವವರು ಅವರು ಮಾಡಬೇಕಾದ ಪಾತ್ರಕ್ಕೆ ಜೀವತುಂಬಲು ಕನ್ನಡದಲ್ಲಿ ಮತ್ತೋರ್ವ ನಟನಿಲ್ಲ ಎನ್ನುವ ಮಾತು ಹೇಳುತ್ತಿರುವುದು ಸತ್ಯ. ಉದಾಹರಣೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕರಾಗಿರುವ ರವಿಬೋಪಣ್ಣ ಚಿತ್ರದಲ್ಲಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬಂದು ಇಡೀ ಸಿನಿಮಾವನ್ನು ಎತ್ತಿ ಹಿಡಿಯುವ ನಾಯಕರಾಗಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಅದೇ ರೀತಿ ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿರುವ ಕಬ್ಜ' ಚಿತ್ರದಲ್ಲಿಯೂ ಸುದೀಪ್ ಒಂದು ವಿಶೇಷ ಅತಿಥಿ ಪಾತ್ರವನ್ನು ಒಪ್ಪಿಕೊಂಡಿರುವುದು ಎಲ್ಲರಿಗೂ ಗೊತ್ತು. ಆದರೆ ಕನ್ನಡದಲ್ಲಿ ಸುದೀಪ್ ಅತಿಥಿ ಪಾತ್ರಗಳನ್ನೇ ಮಾಡಿದರೂ ಅದರಲ್ಲಿ ಅವರ ಇಮೇಜ್‌ಗೆ ತಕ್ಕ ಪಾತ್ರಗಳಿರುತ್ತವೆ ಎನ್ನುವ ಭರವಸೆ ಫ್ಯಾನ್ಸ್ ನಡುವೆ ಇದೆ. ಅದಕ್ಕೆ ಉದಾಹರಣೆಯಾಗಿ ಪೈಲ್ವಾನ್‌ಗೂ ಮೊದಲು ಶಿವರಾಜ್ ಕುಮಾರ್ ಅವರೊಂದಿಗೆ ನಟಿಸಿ ತೆರೆಕಂಡ
ವಿಲನ್’ ಚಿತ್ರವೇ ಉದಾಹರಣೆ. ಒಟ್ಟಿನಲ್ಲಿ ಈ ವರ್ಷ ಸುದೀಪ್ ಅಭಿಮಾನಿಗಳು ಹಬ್ಬ ಆಚರಿಸಲಿರುವುದು ಖಚಿತ.
ಬೆಳ್ಳಿಹಬ್ಬಕ್ಕೊಂದು ಒಳ್ಳೆಯ ಸಿನಿಮಾ
ರಂಗಿತರಂಗ ಎನ್ನುವ ಒಂದೇ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಮಾತ್ರವಲ್ಲ, ಅಕ್ಕಪಕ್ಕದ ಭಾಷೆಗಳಲ್ಲಿಯೂ ತರಂಗ ಏರ್ಪಡಿಸಿದ ಕೀರ್ತಿ ನಿರ್ದೇಶಕ ಅನೂಪ್ ಭಂಡಾರಿಯವರದ್ದು. ಇದೀಗ ಅವರು ಸುದೀಪ್ ಅವರಂಥ ಸ್ಟಾರ್ ಜೊತೆ ಸೇರಿ ಚಿತ್ರ ಮಾಡುತ್ತಾರೆ ಎಂದಾಗ ಸಹಜವಾಗಿ ಆ ಪ್ರಾಜೆಕ್ಟ್ ಬಗ್ಗೆ ಎಲ್ಲರಲ್ಲಿಯೂ ಕುತೂಹಲ ತುಂಬಿಕೊಂಡಿದೆ. `ಫ್ಯಾಂಟಂ’ ಎನ್ನುವ ಫ್ಯಾಂಟಸಿ ಕಾನ್ಸೆಪ್ಟ್ ನ ಹೆಸರಿನೊಂದಿಗೆ ಸುದ್ದಿಯಾಗಿದ್ದ ಈ ಚಿತ್ರ ಹೆಸರು ಬದಲಾಯಿಸಿ ವಿಕ್ರಾಂತ್ ರೋಣ ಎಂದಾಗಲೂ ಜನಪ್ರಿಯತೆಗೆ ಎಲ್ಲೂ ಕೊರತೆಯಾಗಿಲ್ಲ. ಅದಕ್ಕೆ ಸಾಕ್ಷಿಯಾಗಿ ದುಬೈನ ಬುರ್ಜ್ ಖಲೀಫದಲ್ಲಿ ಟೈಟಲ್ ಟೀಸರ್ ಲಾಂಚ್ ಮಾಡಿ ಕಿಚ್ಚನ ಎಪ್ಪತ್ತೈದನೇ ವರ್ಷಕ್ಕೆ ಶುಭ ಕೋರಿದ್ದು ಜಗತ್ತಿನಾದ್ಯಂತ ಸುದ್ದಿಯಾಗಿತ್ತು. ಚಿತ್ರವು ಕನ್ನಡ ಸೇರಿದಂತೆ ತಮಿಳು, ತೆಲುಗು, ಹಿಂದಿ, ಮಲಯಾಳಂ, ರಷ್ಯನ್, ಚೈನೀಸ್, ಅರೆಬಿಕ್ ಮತ್ತು ಸ್ಪಾನಿಷ್ ಭಾಷೆಗಳಲ್ಲಿ ತೆರೆಕಾಣುತ್ತಿರುವುದು ಮತ್ತೊಂದು ವಿಶೇಷ.
