ಮಿಲನಾ ನಾಗರಾಜ್ ಅವರು ನಿನ್ನೆ ತಮ್ಮ ಜನ್ಮ ದಿನಾಚರಣೆ ಮಾಡಿಕೊಂಡರು. ಅವರು ನಾಯಕಿಯಾಗಿರುವ `ಫಾರ್ ರಿಜಿಸ್ಟ್ರೇಶನ್’ ಚಿತ್ರ ತಂಡ ಸಣ್ಣದೊಂದು ವಿಡಿಯೋ ತುಣುಕಿನ ಮೂಲಕ ಶುಭ ಕೋರಿದೆ. ಸಿನಿಕನ್ನಡ.ಕಾಮ್ ಜೊತೆಗೆ ಮಾತನಾಡಿರುವ ನಿರ್ದೇಶಕ ನವೀನ್ ದ್ವಾರಕನಾಥ್ ಅವರು ಆ ಘಟನೆಯ ಬಗ್ಗೆ ಮತ್ತು ಚಿತ್ರ ಯಾವ ಹಂತದಲ್ಲಿದೆ ಎನ್ನುವ ಬಗ್ಗೆ ಒಂದಷ್ಟು ಮಾಹಿತಿಗಳನ್ನು ನೀಡಿದ್ದಾರೆ.
ಕಳೆದ ವರ್ಷ ಬಿಡುಗಡೆಯಾಗಿ ಸುದ್ದಿ ಮಾಡಿದ್ದ ಚಿತ್ರಗಳು ಲವ್ ಮಾಕ್ಟೇಲ್ ಮತ್ತು ದಿಯಾ. ಆ ಎರಡು ಸಿನಿಮಾಗಳ ನಾಯಕಿ ಮತ್ತು ನಾಯಕನನ್ನು ತಮ್ಮ ಚಿತ್ರದಲ್ಲಿ ಜೋಡಿಯಾಗಿಸಿದ್ದಾರೆ ನಿರ್ದೇಶಕ ದ್ವಾರಕನಾಥ್. ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸಗಳೆಲ್ಲ ನಡೆದಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮೇ ತಿಂಗಳಲ್ಲಿ ಚಿತ್ರೀಕರಣ ಶುರು ಮಾಡಬೇಕಿತ್ತು. ಆದರೆ ಸದ್ಯಕ್ಕೆ ಕೊರೊನಾ ಎರಡನೇ ಅಲೆಯ ಪರಿಣಾಮ ವಾತಾವರಣ ಗಂಭೀರತೆ ಪಡೆದುಕೊಂಡಿದೆ. ಅದರ ನಡುವೆ ಕೂಡ ನಿರ್ದೇಶಕರು ನಾಯಕಿ ಮಿಲನಾರ ಜನ್ಮದಿನವನ್ನು ನೆನಪಿಸಿಕೊಂಡು ಒಂದು ವಿಶೇಷ ವಿಡಿಯೋ ಕ್ಲಿಪ್ ಮೂಲಕ ಶುಭ ಕೋರಿದ್ದಾರೆ. ಅಂದಹಾಗೆ ಕೋವಿಡ್ 19 ಕಾರಣದಿಂದ ಅಸೌಖ್ಯದಲ್ಲಿದಲ್ಲಿದ್ದ ಮಿಲನಾ ನಾಗರಾಜ್ ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ.
ಚಿತ್ರದಲ್ಲಿ ಐದು ಹಾಡುಗಳಿದ್ದು ಅವುಗಳನ್ನು ಕವಿರಾಜ್, ಭರ್ಜರಿ ಚೇತನ್ ಕುಮಾರ್ ಮತ್ತು ಅವನೇ ಶ್ರೀಮನ್ನಾರಾಯಣ ಖ್ಯಾತಿಯ ನಾಗಾರ್ಜುನ ಶರ್ಮ ರಚಿಸಿದ್ದಾರೆ. ನಿರ್ದೇಶಕ ನವೀನ್ ಅವರ ಬಾಲ್ಯದ ಸ್ನೇಹಿತ ಪ್ರಸ್ತುತ ಐಟಿ ಉದ್ಯೋಗಿಯಾಗಿರುವ ಹರೀಶ್ ಅಚಿಂತ್ಯ ಅವರು ಸಂಗೀತ ನೀಡುತ್ತಿದ್ದಾರೆ. ಈಗಾಗಲೇ ಟ್ರ್ಯಾಕ್ ಸಿಂಗಿಂಗ್ ತಯಾರಾಗಿದ್ದು ಕೊರೊನಾ ಕಾಟ ತಣ್ಣಗಾದೊಡನೆ ರಿಜಿಸ್ಟ್ರೇಶನ್ ಕೆಲಸ ಶುರುವಾಗಲಿದೆ. ನಿಶ್ಚಲ್ ಫಿಲ್ಮ್ಸ್ ಬ್ಯಾನರ್ ನಲ್ಲಿ ಚಿತ್ರ ತಯಾರಾಗುತ್ತಿದೆ.