
ತಮಿಳಿನ ಜನಪ್ರಿಯ ನಟ ಸಿಂಬು ಯಾನೇ ಸಿಲಂಬರಸನ್ ನಟನೆಯ ‘ಮಾನಾಡು’ ತಮಿಳು ಚಿತ್ರವು ಐದು ಭಾಷೆಗಳಲ್ಲಿ ಸಿದ್ದಗೊಳ್ಳುತ್ತಿದೆ. ಚಿತ್ರದ ಟೀಸರನ್ನು ಕನ್ನಡದಲ್ಲಿ ಸುದೀಪ್, ತಮಿಳಿನಲ್ಲಿ ಎ.ಆರ್.ರೆಹಮಾನ್, ಹಿಂದಿಯಲ್ಲಿ ಅನುರಾಗ್‌ಕಶ್ಯಪ್, ತೆಲುಗುವಿನಲ್ಲಿ ರವಿತೇಜ ಮತ್ತು ಮಲೆಯಾಳಂನಲ್ಲಿ ಪೃಥ್ವಿರಾಜ್ ಲೋಕಾರ್ಪಣೆ ಮಾಡಿದ್ದರು.
ಚಿತ್ರಕ್ಕೆ ಕನ್ನಡದಲ್ಲಿ ‘ರಿವೈಂಡ್’ ಎಂದು ಇರಿಸಲಾಗಿದ್ದ ಶೀರ್ಷಿಕೆಯನ್ನು ಬಳಿಕ ಬದಲಾಯಿಸಲಾಗಿತ್ತು. ಮುಂದಿನ ದಿನಗಳಲ್ಲಿ ಹೊಸ ಹೆಸರನ್ನು ತಿಳಿಸುವುದಾಗಿ ತಂಡವು ಹೇಳಿಕೊಂಡಿದೆ. ಇತ್ತೀಚೆಗೆ ನಡೆದ ಚಿತ್ರೀಕರಣದಲ್ಲಿ ಆರು ನಿಮಿಷದ ಸಂಭಾಷಣೆಯನ್ನು ಒಂದೇ ಟೇಕ್ ನಲ್ಲಿ ಮುಗಿಸಿ, ಎಲ್ಲರಿಗೂ ಸಿಲಂಬರಸನ್ ಅಚ್ಚರಿ ಮೂಡಿಸಿದ್ದು ಸುದ್ದಿಯಾಗಿದೆ.
ರಾಜಕೀಯದ ಹಿನ್ನೆಲೆಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ರಚನೆ-ನಿರ್ದೇಶನದ ಜವಾಬ್ದಾರಿಯನ್ನು ವೆಂಕಟ್‌ಪ್ರಭು ಕೈಗೆತ್ತಿಕೊಂಡಿದ್ದಾರೆ. ಯುವನ್‌ಶಂಕರ್‌ರಾಜ ಸಂಗೀತ ನೀಡುತ್ತಿದ್ದು, ಛಾಯಾಗ್ರಹಣ ರಿಚರ್ಡ್.ಎಂ.ನಾಥನ್, ಸಂಕಲನ ಪ್ರವೀಣ್.ಕೆ.ಎಲ್, ಸಾಹಸ ಸ್ವಂಟ್‌ಶಿವ, ನೃತ್ಯ ರಾಜು ಸುಂದರಂ ಅವರದ್ದಾಗಿದೆ. ಸುರೇಶ್ ಕಮತ್ ಚಿ ಅವರು ’ವಿ ಹೌಸ್ ಪ್ರೊಡಕ್ಷನ್’ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಕಲ್ಯಾಣಿ ಪ್ರಿಯದರ್ಶನ್ ಅವರು ಚಿತ್ರದ ನಾಯಕಿ. ಮತ್ತೊಂದು ಮುಖ್ಯ ಪಾತ್ರದಲ್ಲಿ ಎಸ್.ಜೆ ಸೂರ್ಯ ಇವರೊಂದಿಗೆ ವೈ.ಜಿ ಮಹೇಂದ್ರನ್, ವಾಗಿ ಚಂದ್ರಶೇಖರ್, ಅಂಜನಕೀರ್ತಿ, ಎಸ್.ಎ.ಚಂದ್ರಶೇಖರ್, ಉದಯ, ಮನೋಜ್.ಕೆ ಭಾರತಿ, ಪ್ರೇಮ್‌ಜಿ ಅಮರನ್, ಡ್ಯಾನಿಯೆಲ್, ಕರುಣಾಕರನ್ ಮುಂತಾದವರು ನಟಿಸುತ್ತಿದ್ದಾರೆ.