ಅಗಲಿದ ಅನುಭವ ಅರವಿಂದ್

ಹಿರಿಯ ನಟ ಶಂಖನಾದ ಅರವಿಂದ್ (70) ಅವರು ನಿಧನರಾಗಿದ್ದಾರೆ. ಅವರು ಕೋವಿಡ್ ಸೋಂಕಿತರಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಹೃದಯಾಘಾತದಿಂದ ಮಧ್ಯಾಹ್ನ ನಿಧನರಾಗಿದ್ದಾರೆ.

ಶಂಖನಾದ ಅರವಿಂದ್ ಅವರು ಶಂಖನಾದ ಮತ್ತು ಅನುಭವ ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದರು. ಹಾಗಾಗಿ ಆ ಸಿನಿಮಾಗಳ ಹೆಸರಿನೊಂದಿಗೆ ಇವರನ್ನು ನೆನಪಿಸಿಕೊಳ್ಳಲಾಗುತ್ತಿತ್ತು. ‘ಬೆಟ್ಟದ ಹೂವು’ ಚಿತ್ರದಲ್ಲಿ ಬಾಲನಟ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಇವರ ನಟನೆ ಮರೆಯಲಾಗದಂಥದ್ದು. ಎಸ್ ಪಿ ಬಾಲಸುಬ್ರಹ್ಮಣ್ಯಂ ಮತ್ತು ಪುನೀತ್ ಅವರ ಕಂಠದಲ್ಲಿ ಮೂಡಿಬಂದ ‘ಬಿಸಿಲೇ ಬರಲೀ’ ಎನ್ನುವ ಕಂಗ್ಲಿಷ್ ಗೀತೆಗೆ ಅರವಿಂದ್ ಅವರ ಅಭಿನಯ ಅಮೋಘ.

ಅರವಿಂದ್ ಅವರು ಇತ್ತೀಚೆಗಷ್ಟೇ ತಮ್ಮ ಪತ್ನಿಯನ್ನು ಕಳೆದುಕೊಂಡಿದ್ದರು. ಅವರ ಪುತ್ರಿ ಮಾನಸ ಹೊಳ್ಳ ಕನ್ನಡ ಚಿತ್ರರಂಗದಲ್ಲಿ ಗಾಯಕಿಯಾಗಿ, ಸಂಗೀತ ನಿರ್ದೇಶಕರಾಗಿ ಜನಪ್ರಿಯರು. ಕಲಾಕುಟುಂಬದಲ್ಲಿ ಮುಕುಟದಂತೆ ಇದ್ದ ಸಜ್ಜನ ನಟನನ್ನು ಕೋವಿಡ್ ಕೊಂದಿರುವುದು ನಿಜಕ್ಕೂ‌ ದುರಂತ.

ಸಿನಿಕನ್ನಡದ ಜೊತೆ ಮಾತನಾಡಿದ ಸಂಗೀತ ನಿರ್ದೇಶಕ ವಿ ಮನೋಹರ್ ಅವರು “ಶಂಖನಾದ ಅರವಿಂದ್ ಅವರು ‘ಅಪರಿಚಿತ’ ಚಿತ್ರದಿಂದಲೇ ಕಾಶೀನಾಥ್ ಅವರೊಂದಿಗೆ ಆತ್ಮೀಯರಾಗಿದ್ದರು. ‘ಶಂಖನಾದ’ ಚಿತ್ರದಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ ಬಳಿಕ ಅವರು ಅದೇ ಹೆಸರಿನಿಂದ ಗುರುತಿಸಲ್ಪಡುತ್ತಿದ್ದರು. ತಮ್ಮನ್ನು ಕಾಶೀನಾಥ್ ಅವರಿಗೆ ಪರಿಚಯ ಮಾಡಿಕೊಟ್ಟಿದ್ದೇ ಅರವಿಂದ್ ಅವರು” ಎಂದು ನೆನಪಿಸಿಕೊಂಡರು.

Recommended For You

Leave a Reply

error: Content is protected !!
%d bloggers like this: