ಕನ್ನಡ ಚಿತ್ರರಂಗ ಎಂದರೆ ಸ್ಟಾರ್ ಕಲಾವಿದರು ಮಾತ್ರವಲ್ಲ. ಅವರನ್ನು ಸ್ಟಾರ್ ಆಗಿಸುವಂಥ ಚಿತ್ರ ನೀಡಿದ ನಿರ್ದೇಶಕರಿಂದ ಹಿಡಿದು ಲೈಟ್ ಬಾಯ್ ವರೆಗಿನ ಕಾರ್ಮಿಕರು ಕೂಡ ಸೇರುತ್ತಾರೆ. ಹಾಗಾಗಿಯೇ ಕೆಲಸವಿರದೆ ಸೊರಗಿರುವ ಚಿತ್ರರಂಗದಲ್ಲಿ ದೊಡ್ಡ ಹೊಡೆತ ತಿನ್ನುತ್ತಿರುವ ಕಾರ್ಮಿಕ ವರ್ಗ ಸೇರಿದಂತೆ ಸಂಕಷ್ಟಕ್ಕೆ ಒಳಗಾಗಿರುವ ಪ್ರತಿಯೊಬ್ಬರಿಗು ದಿನಸಿ ವಿತರಿಸಲು ಮಂದಾಗಿದ್ದಾರೆ ನಟ ನಿರ್ದೇಶಕ ಉಪೇಂದ್ರ.
ಈ ಬಗ್ಗೆ ಅವರು ಸಂದೇಶ ಕಳಿಸಿದ್ದು, ಅದರಲ್ಲಿ “ಕನ್ನಡ ಚಲನಚಿತ್ರ ರಂಗದ ಸಾವಿರಾರು ಕಾರ್ಮಿಕರು, ಕಲಾವಿದರು ಕೆಲಸವಿಲ್ಲದೇ ಕೋವಿಡ್ ಹೊಡೆತಕ್ಕೆ ತತ್ತರಿಸಿ ಹೋಗಿದ್ದಾರೆ. ಈ ಕಾರಣ, ಒಕ್ಕೂಟದ ಎಲ್ಲಾ ಸಂಘಗಳ ಸುಮಾರು ಮೂರು ಸಾವಿರ ಕುಟುಂಬಕ್ಕೆ ಅಭಿಮಾನಿಗಳ ಆಶೀರ್ವಾದದಿಂದ ದಿನಸಿ ಕಿಟ್ ನೀಡಲು ನಿರ್ಧರಿಸಿದ್ದೇನೆ. ವಿತರಣೆ ಬಗ್ಗೆ ತಮ್ಮ ತಮ್ಮ ಸಂಘದ ಮುಖ್ಯಸ್ಥರನ್ನು ಸಂಪರ್ಕಿಸಿ. ನಿಮ್ಮ ಉಪ್ಪಿ ” ಎಂದು ಬರೆದಿದ್ದಾರೆ.
ಪ್ರಜಾಕೀಯ ಪಕ್ಷದ ಮೂಲಕ ರಾಜ್ಯದ ಜನರಿಗೆ ದೊರಕಬೇಕಾದ ನಿಜವಾದ ಸೌಲಭ್ಯ ಒದಗಿಸಲು ವರ್ಷಗಳಿಂದ ಶ್ರಮಿಸುತ್ತಿರುವ ಉಪೇಂದ್ರ ಅವರು ಚಿತ್ರರಂಗದ ಸಂಕಷ್ಟದಲ್ಲಿ ಕೈಜೋಡಿಸುವ ಮೂಲಕ ತಮ್ಮ ಅಂತಃಕರಣ ಏನು ಎನ್ನುವುದನ್ನು ಸಾಬೀತು ಮಾಡಿದ್ದಾರೆ.
ಕಳೆದ ಬಾರಿಯೂ ಕೂಡ ಕೋವಿಡ್ ಬಾಧೆಯ ಸಂದರ್ಭದಲ್ಲಿ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಹದಿನೆಂಟು ವಿಭಾಗಗಳಿಗೆ ಚೆಕ್ ವಿತರಿಸಿ ಮಾನವೀಯತೆ ಮರೆದಿದ್ದರು. ಈ ಬಾರಿ ಅವರಿಂದಾಗಿ ಮೂರು ಸಾವಿರ ಕುಟುಂಬಗಳು ದಿನಸಿ ಸಾಮಾಗ್ರಿ ಪಡೆಯುವಂತಾಗಿರುವುದು ನಿಜಕ್ಕೂ ಅಭಿನಂದನಾರ್ಹ ವಿಚಾರ.