ಚಲನಚಿತ್ರ ಸಾಹಿತಿಯಾಗಿ, ಸಂಭಾಷಣೆಕಾರರಾಗಿ ‘ಭಂಗೀರಂಗ’ ಎಂದೇ ಖ್ಯಾತರಾಗಿದ್ದ ಶ್ರೀರಂಗ(86) ನಿಧನರಾಗಿದ್ದಾರೆ. ಭಾನುವಾರ ಸಂಜೆ ಕಾಲವಾದ ಅವರು ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಶ್ರೀರಂಗ ಅವರ ರಚನೆಯಲ್ಲಿರುವ ‘ನಂಜುಂಡಿ ಕಲ್ಯಾಣ’ ಚಿತ್ರದ ‘ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ’, ಸೇರಿದಂತೆ ‘ರಂಭೆ ನೀ ವೈಯ್ಯಾರದ ಗೊಂಬೆ’, ‘ಬಾರೆ ಬಾರೇ ಕಲ್ಯಾಣ ಮಂಟಪಕ್ಕೆ ಬಾ’, ‘ಸುಮ್ ಸುಮ್ನೆ ಓಳು ಬಿಡೋ ಸುಂದರಿ’….. ಹಾಡುಗಳನ್ನ ಹಾಗು ‘ಜನುಮದ ಜೋಡಿ’, ‘ರಕ್ತ ಕಣ್ಣೀರು’, ‘ಆಕಾಶ್’, ‘ವೀರ ಕನ್ನಡಿಗ’, ‘ಅಪ್ಪಾಜಿ’, ‘ಇನ್ಸ್ಪೆಕ್ಟರ್ ವಿಕ್ರಮ್’, ‘ಗಂಡುಗಲಿ ಕುಮಾರ ರಾಮ’, ‘ಆಸೆಗೊಬ್ಬ ಮೀಸೆಗೊಬ್ಬ’ ಮುಂತಾದ ಚಿತ್ರದ ಹಾಡುಗಳನ್ನು ಪ್ರತಿಯೊಬ್ಬ ಕನ್ನಡಿಗರೂ ಒಂದಲ್ಲ ಒಂದು ಸಾರಿ ಗುನುಗೇ ಗುನುಗಿರುತ್ತೇವೆ. ಇವರು ಬರೆದು ನಿರ್ದೇಶಿಸಿದ ಹಲವಾರು ನಾಟಕಗಳನ್ನೂ ನೋಡಿರುತ್ತೇವೆ. ಜೊತೆಗೆ ‘ಅಂಜದ ಗಂಡು’, ‘ಕಿಂದರಿ ಜೋಗಿ’, ‘ಮುತ್ತೈದೆ ಭಾಗ್ಯ’, ‘ಅದೃಷ್ಟ ರೇಖೆ’, ‘ಪುಕ್ಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡ’, ‘ಶುಕ್ರ ದೆಶೆ’, ‘ಭೂಲೋಕದಲ್ಲಿ ಯಮರಾಜ’ ಹೀಗೆ ಹಲವಾರು ಚಿತ್ರಗಳಿಗೆ ಸಂಭಾಷಣೆ ಬರೆದಿದ್ದಾರೆ.
ಕಳೆದ ವರ್ಷ ಶ್ರೀರಂಗರನ್ನು ಭೇಟಿಯಾಗಿದ್ದ ನಟ ಸಂಚಾರಿ ವಿಜಯ್ ಅವರು ತಮ್ಮೊಂದಿಗೆ ಹಂಚಿಕೊಂಡಿದ್ದ ಮಾತುಗಳನ್ನು ಹೀಗೆ ನೆನಪಿಸಿಕೊಂಡಿದ್ದಾರೆ “ಸುಮಾರು ಹದಿನೈದು ಇಪ್ಪತ್ತು ವರ್ಷಗಳಾಯ್ತು ಗಾಂಧಿನಗರದ ಕಡೆ ಮುಖಮಾಡಿ ಈಗ ಎಲ್ಲಾ ಬದಲಾಗಿರಬೇಕು,ನಾನು ಒಂದಷ್ಟು ವರ್ಷಗಳ ಕಾಲ ಚಿತ್ರರಂಗಕ್ಕೆ ದುಡಿದೆ ಈಗ ವಯೋಸಹಜ ಸಣ್ಣ ಪುಟ್ಟ ಕಾಯಿಲೆಗಳು ಕೆಲಸ ಮಾಡೋದು ಕಷ್ಟ. ಈಗಲೂ ಬರೆಯಬೇಕೆಂಬ ಆಸೆ ಬೆಟ್ಟದಷ್ಟಿದೆ ಆದರೆ ಏನು ಮಾಡೋದು ಕಾಲ ಬದಲಾಗಿದೆ ಈಗಿನವರ ಸಿನಿಮಾ ಅಭಿರುಚಿಯೇ ಬೇರೆ’ ಎಂದು ಹೇಳಿದ್ದರು. ಈ ಮನೆಯಲ್ಲಿರುವುದು ನಾವಿಬ್ಬರೇ ಸದ್ಯಕ್ಕೆ ನಮ್ಮನ್ನು ನೋಡಿಕೊಳ್ಳುವವರು ಯಾರು ಇಲ್ಲ, ಮಗಳು ಅಲ್ಲಿ ಇಲ್ಲಿ ಆರ್ಕೆಷ್ಟ್ರಾದಲ್ಲಿ ಹಾಡಿ ಜೀವನ ನಡೆಸುತ್ತಿದ್ದಾಳೆ ಅವಳದು ಒಂಥರಾ ಕಷ್ಟ. ಅದರೊಳಗೆ ನಮ್ಮನ್ನು ನೋಡಿಕೊಳ್ಳುವುದಂತೂ ಕಷ್ಟ ಸಾಧ್ಯ ಹಾಗೂ ಹೀಗೂ ಕೊರೊನ ಸಂಕಷ್ಟದಲ್ಲೂ ಬದುಕಿ ಜೀವನ ನಡೆಸುತ್ತಾ ಇದ್ದೀವಿ” ಎನ್ನುವುದು ಅವರ ಮಾತಾಗಿತ್ತು. ಆದರೆ ಕೊರೊನಾದ ಎರಡನೇ ಅಲೆ ವೇಳೆಗೆ ಅವರು ಶ್ರೀರಂಗ ನಮ್ಮನ್ನು ಅಗಲಿದ್ದಾರೆ. ಹಾಗಂತ ಅವರ ಸಾವಿಗೆ ಕೊರೊನಾ ಕಾರಣವಲ್ಲ. ಶ್ರೀರಂಗರದ್ದು ವಯೋಸಹಜ ಸಾವು. ಆದರೆ ಅವರು ನೀಡಿದ ಗೀತೆಗಳಿಗೆ ಕನ್ನಡ ಚಿತ್ರರಂಗ ಇರುವ ತನಕ ಸಾವಿಲ್ಲ.