ಪೊರ್ಕಿ ಚಿತ್ರ ನೋಡಿದವರು ಇದು ಪರಭಾಷೆಯ ನಟಿ ಎಂದೇ ತಿಳಿದಿದ್ದರು. ಆ ಮಟ್ಟಿಗೆ ಆಮದು ಬೆಡಗಿಯದ ಅಂಗಸೌಂದರ್ಯದೊಡನೆ ಆಗಮಿಸಿದ ನಟಿ ಪ್ರಣೀತಾ. ನಿನ್ನೆ ಭಾನುವಾರ ಅವರ ವಿವಾಹ ನೆರವೇರಿರುವುದಾಗಿ ತಿಳಿದು ಬಂದಿದೆ. ಕೋವಿಡ್ ಕಾಲದ ನಿಯಮಗಳಂತೆ ಬೆರಳೆಣಿಕೆಯ ಮಂದಿಯ ಉಪಸ್ಥಿತಿಯಲ್ಲಿ ಪ್ರಣೀತಾ ವಿವಾಹಿತೆಯಾಗಿದ್ದಾರೆ.
ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ರೆಸಾರ್ಟ್ ಒಂದರಲ್ಲಿ ಪ್ರಣೀತಾ ಸುಭಾಷ್ ಮದುವೆ ನೆರವೇರಿದೆ. ವರ ಬೆಂಗಳೂರಿನಲ್ಲೇ ಉದ್ಯಮಿಯಾಗಿರುವ ನಿತಿನ್ ರಾಜ್ ಕ್ಷತ್ರಿಯ ಎಂದು ತಿಳಿದು ಬಂದಿದೆ.
ಚಿತ್ರರಂಗದಲ್ಲಿ ಮುಂದುವರಿಯುತ್ತಾರ?
ಪೊರ್ಕಿ, ಜರಾಸಂಧ, ಭೀಮಾ ತೀರದಲ್ಲಿ, ಬ್ರಹ್ಮ, ಮಾಸ್ ಲೀಡರ್ ಹೀಗೆ ಕನ್ನಡದ ಸ್ಟಾರ್ ನಟರಾದ ದರ್ಶನ್, ದುನಿಯಾ ವಿಜಯ್, ಉಪೇಂದ್ರ, ಶಿವರಾಜ್ ಕುಮಾರ್ ಮೊದಲಾದವರ ಚಿತ್ರಗಳಲ್ಲಿ ನಟಿಸಿದರೂ ಒಂದು ಬ್ಲಾಕ್ ಬಸ್ಟರ್ ಯಶಸ್ಸಿನ ಸಿನಿಮಾ ಅವರಿಗೆ ದೊರಕಲೇ ಇಲ್ಲ. ಹಾಗಂತ ತಮಿಳು, ತೆಲುಗು ಮತ್ತು ಹಿಂದಿಯಿಂದಲೂ ಬಂದ ಅವಕಾಶಗಳಿಗೆ ಕೊರತೆ ಇರಲಿಲ್ಲ. ಪ್ರಗತಿಯ ಪಥದಲ್ಲಿರುವಾಗಲೇ ಇದೀಗ ವೈವಾಹಿಕ ಬದುಕನ್ನು ಪ್ರವೇಶಿಸಿದ್ದಾರೆ. ಕೊರೊನಾ ಕಾಲವಲ್ಲದಿದ್ದರೆ ಕನ್ನಡ ಕಿರುತೆರೆ ಮಾಧ್ಯಮಗಳು ಎರಡು ದಿನ ಸಂಭ್ರಮಾಚರಣೆ ನಡೆಸುತ್ತಿದ್ದಂಥ ಮದುವೆ ಇದು. ಆದರೆ ಕೊರೊನಾ ಕಾರಣ ಎಲ್ಲವೂ ಗುಟ್ಟಿನಲ್ಲಿ ಎನ್ನುವಂತೆ ಮುಗಿದಿದೆ. ಆದರೆ ಮುಂದೆ ಚಿತ್ರರಂಗದಲ್ಲಿ ಮುಂದುವರಿಯಲಿದ್ದಾರ ಎನ್ನುವ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ.
ಪ್ರಣೀತಾ ಚಿತ್ರರಂಗದಲ್ಲಿ ಜನಪ್ರಿಯ ನಟಿಯಾದರೂ ವೈಯಕ್ತಿಕವಾಗಿ ಅದ್ಧೂರಿತನದ ಹೆಸರಲ್ಲಿ ದುಂದುವೆಚ್ಚಕ್ಕೆ ಆದ್ಯತೆ ನೀಡಿದವರಲ್ಲ. ಅದನ್ನು ತಮ್ಮ ಹತ್ತು ಹಲವು ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳ ಮೂಲಕ ಸಾಬೀತು ಪಡಿಸಿದವರು. ಹಾಗಾಗಿ ಈ ವಿವಾಹದ ರೀತಿ ಪ್ರಣೀತಾ ವೈಯಕ್ತಿಕವಾಗಿಯೂ ಸಂಭ್ರಮಿಸಿದ್ದರೆ ಅಚ್ಚರಿ ಇಲ್ಲ. ಸದ್ಯಕ್ಕೆ ವಿವಾಹ ಸಂಭ್ರಮದಲ್ಲಿರುವ ಅವರು ಮುಂದೊಮ್ಮೆ ಇವೆಲ್ಲಕ್ಕೂ ಸ್ವತಃ ಉತ್ತರ ನೀಡಲಿರುವುದು ಖಚಿತ. ನವಜೋಡಿಗೆ ಸಿನಿಕನ್ನಡ.ಕಾಮ್ ಶುಭಾಶಯಗಳು.