ರಾಕ್ಷಸ ಎನ್ನುವ ಪದವನ್ನು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ತಮ್ಮ ಪ್ರೀತಿಯ ಕೆಲವರಿಗೆ ಬಳಸುತ್ತಿದ್ದರು. ಅದು ಅವರ ಮೆಚ್ಚಿನ ಮಂದಿಯ ಅಗಾಧ ಪ್ರತಿಭೆಯನ್ನು ವರ್ಣಿಸಲು ಪದ ಸಿಗದೆ ಹಾಗೆ ಹೇಳುತ್ತಿದ್ದರು. ನಮ್ಮ ಪಾಲಿಗೆ ಅಂಥ ರಾಕ್ಷಸರಲ್ಲಿ ಎಸ್ ಪಿ ಬಿಯವರೂ ಒಬ್ಬರು. ಇನ್ನು ಒಂದೇ ಒಂದು ವರ್ಷ ನಮ್ಮ ಜೊತೆಗೆ ಇದ್ದಿದ್ದರೂ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ 75 ವರ್ಷ ತುಂಬಿರುತ್ತಿತ್ತು. ಆದರೆ ಕಳೆದ ವರ್ಷದ ಕೊರೊನ ಅಬ್ಬರದಲ್ಲಿ ಅಗಲಿ ಹೋದವರು ಗಾನ ದಿಗ್ಗಜನ ಜನ್ಮದಿನವನ್ನು ನೆನಪಿಗಷ್ಟೇ ಸೀಮಿತಗೊಳಿಸಬೇಕಾದ ಅನಿವಾರ್ಯತೆ ನಮ್ಮದು. ಜನಪ್ರಿಯ ಲೇಖಕ ನವೀನ್ ಸಾಗರ್ ಅವರು ಇಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರನ್ನು ಭಾವುಕ ಬರಹದೊಂದಿಗೆ ಸ್ಮರಿಸಿಕೊಂಡಿದ್ದಾರೆ.
ಕಳೆದವರ್ಷ ಈ ಲಾಕ್ ಡೌನ್ ಹೊತ್ತಲ್ಲಿ ದಿನವೂ ಸಂಜೆ ಎಸ್ಪಿಬಿ ಫೇಸ್ಬುಕ್ಕಲ್ಲಿ ಲೈವ್ ಬಂದು ತಮ್ಮ ಅಭಿಮಾನಿಗಳ ರಿಕ್ವೆಸ್ಟ್ ತಗೊಂಡು ಅವರಿಷ್ಟದ ಹಾಡು ಹಾಡ್ತಿದ್ರು. ಶ್ರುತಿ ಪೆಟ್ಟಿಗೇಲಿ ಶ್ರುತಿ ಹಾಕ್ಕೊಂಡು.. ಶರ್ಟಿಗೊಂದು ಪುಟ್ಟ ಮೈಕ್ ಸಿಕ್ಕಿಸ್ಕೊಂಡು..ಅದೆಷ್ಟು ಶ್ರದ್ಧೆ ವಿನಯದಿಂದ ಬಂದು ನಿಂತು..ಎಲ್ಲ ಐದು ಭಾಷೆಗಳ ಶ್ರೋತೃಗಳನ್ನು ಮುದಗೊಳಿಸುತ್ತಿದ್ದರು. ಅಲ್ಲೆಲ್ಲೋ ಒಂದು ಸಾಲು ತಪ್ಪಾಗಿ ಹಾಡಿದೆ ಅನಿಸಿದರೆ.. ಉಹೂಂ ಏನೋ ರಾಗ ಹದತಪ್ಪಿಹೋಯ್ತು ಅನಿಸಿದರೆ.. ಕೇಳುಗರ ಕ್ಷಮೆ ಕೇಳಿ ಮತ್ತೆ ಪದೇಪದೆ ಆ ಸಾಲಿಗೆ ವಾಪಸ್ ಹೋಗಿ ತಿದ್ದಿಕೊಂಡು ಮನಸ್ಸಿಗೆ ಸಮಾಧಾನ ಆಗೋತನಕ ಬಿಡದೆ ರಾಗ,ರಿದಮ್ಮನ್ನು ದಾರಿಗೆ ತಂದುಕೊಂಡು ಹಾಡಿ ಸುಖಿಸುತ್ತಿದ್ದರು.
ಅದೇ ಅಂದ್ಕೊಳ್ತಿದ್ದೆ.. ಇಂದೆಲ್ಲ ಬಾಲಿವುಡ್ ಸಿಂಗರ್ ಗಳು ನಿನ್ನೆ ಮೊನ್ನೆ ಫೇಮಸ್ ಆದ ಸಿಂಗರ್ ಗಳು.. ಸಿನಿಮಾ ಪ್ಲೇ ಬ್ಯಾಕ್ ರೆಕಾರ್ಡಿಂಗನ್ನೂ ಸಹ ..ತಾವು ಹಾಡಿದ್ದೇ ಹಾಡು.. ಹೇಳಿದ್ದೇ ಲಿರಿಕ್ಸು.. ಎಂಬಂತೆ ಅಲ್ಲೆಲ್ಲೋ ಕೂತು ರೆಕಾರ್ಡ್ ಮಾಡಿ ಕಳಿಸಿ ದರ್ಪ ಮೆರೆಯುತ್ತಾರೆ. ರೀಟೇಕ್ ಮಾಡೋದಿಲ್ಲ. ತಪ್ಪಿದ್ದರೂ ತಿದ್ದಿಕೊಳ್ಳುವುದಿಲ್ಲ. ಫೈನಲ್ ಸಾಂಗ್ ಒಳಗೆ ರಾಗ ಹದ ತಪ್ಪಿದರೆ ತಿದ್ದೋಕೆ ಈಗ ಏನೇನೋ ಟೆಕ್ನಾಲಜಿ ಬಂದಿದೆ. ಆದರೆ ಲಿರಿಕ್ಸ್ ತಪ್ಪಿದರೆ ಹಾಗೇ ಉಳಿದುಹೋಗುತ್ತದೆ. ಅಂಥ ಸಿಂಗರ್ ಗಳಿಗೆ ಸಾಹಿತ್ಯದ ಬೆಲೆಯೆಲ್ಲಿ ಗೊತ್ತಾಗಬೇಕು. ಸಂಗೀತಕ್ಕಿರೋ ಬೆಲೆ ಸಾಹಿತ್ಯಕ್ಕೂ ಇದೆ ಎಂದು ಹಲವು ಸಿಂಗರ್ ಗಳಿಗೆ ಅರ್ಥವೇ ಆಗೋದಿಲ್ಲ. ಇನ್ನು ಹಲವರಿಗೆ ಬೆಳೆದುನಿಂತಮೇಲೆ ತಾನು ಹೇಗೇ ಏನೇ ಹಾಡಿದರೂ ಅದನ್ನು ಸ್ವೀಕರಿಸಲೇಬೇಕೆಂಬ ದುರಹಂಕಾರ. ಇಂಥವರ ಮಧ್ಯ ಅದೆಷ್ಟು ಭಿನ್ನರಾಗಿ ವಿಭಿನ್ನರಾಗಿ ನಿಂತರು ಎಸ್ಪಿಬಿ. ಸುಮ್ಮನೆ ಫೇಸ್ಬುಕ್ಕಲ್ಲಿ ಹಾಡುವಾಗಲೂ ರಾಗ ಸಾಹಿತ್ಯ ತಪ್ಪಕೂಡದೆಂಬ ಶಿಸ್ತುಶ್ರದ್ಧೆಗಳು ತಂತಾನೇ ಬರುವುದಲ್ಲ. ಅದು ಕಲಾಸರಸ್ವತಿಯ ವಿಧೇಯ ವಿದ್ಯಾರ್ಥಿಯಾಗಿಯೇ ಉಳಿದಾತನಿಗೆ ಮಾತ್ರ ಬರುವಂಥದ್ದು.
ಎಸ್ಪಿಬಿ.. ರಾಜಕುಮಾರ್… ಸಚಿನ್‌ತೆಂಡೂಲ್ಕರ್.. ವಿರಾಟ್ ಕೊಹ್ಲಿ.. ಇವರನ್ನೆಲ್ಲ ಒಂದೇ ಸಾಲಿನಲ್ಲಿ ನಿಲ್ಲಿಸಿ ನನ್ನ ಕಣ್ಣು ನೋಡುವುದು ಇದೇ ಕಾರಣಕ್ಕೆ. ವಯಸ್ಸಿನಲ್ಲಿ ಸಾಧನೆಯಲ್ಲಿ ಕಾಲಮಾನದಲ್ಲಿ ಸಾಧನಾವಿಭಾಗಗಳಲ್ಲಿ ವ್ಯತ್ಯಾಸಗಳಿರಬಹುದು. ಆದರೆ ಶ್ರದ್ಧೆ ವಿನಯ ಕಲಿಕಾಮನೋಭಾವ ಇವರೆಲ್ಲರದ್ದೂ ಅನ್ ಮ್ಯಾಚಬಲ್.
ಸಚಿನ್‌ಕೂಡ ಇನ್ನೂರು ಪಂದ್ಯ ಆಡಿದನಂತರವೂ ಐವತ್ತು ಶತಕ ಬಾರಿಸಿದ ನಂತರವೂ.. ಇರುವ ದಾಖಲೆಗಳನ್ನೆಲ್ಲ ಮುರಿದು ಕ್ರಿಕೆಟ್ ದೇವರು ಅನಿಸಿಕೊಂಡ ನಂತರವೂ ಆಟದಲ್ಲಿ ಉಡಾಫೆ ಮೆರೆಯಲಿಲ್ಲ. ಹೊಸಬೌಲರನ್ನೂ ಅದೇ ಗೌರವದಿಂದ ಎದುರಿಸಿದ. ಪ್ರತಿಬಾರಿ ಔಟಾದಾಗಲೂ… ಇನ್ಮುಂದೆ ಹೀಗೆ ಔಟಾಗಬಾರದು ಎಂದು ತನ್ನ ವಿಡಿಯೋ ನೋಡಿ ನೋಡಿ ತಪ್ಪುತಿದ್ದಿಕೊಳ್ಳುತ್ತಿದ್ದ.. ಒಂದು ಹೊಸ ಶಾಟ್ ಕಲಿಯಲು ಸತತ ಪ್ರಾಕ್ಟಿಸ್‌ಮಾಡುತ್ತಿದ್ದ.
ಕೊಹ್ಲಿ ಕೂಡ.. ಎಂಟು ಗಂಟೆ ಗ್ರೌಂಡಲ್ಲಿ ಆಡಿ ಬಳಲಿದನಂತರ ಮಧ್ಯರಾತ್ರಿ ಆದರೂ ಸರಿ ಜಿಮ್ಮಲ್ಲಿ ದೇಹ ದಂಡಿಸುವುದನ್ನು ಮಿಸ್‌ಮಾಡೋದಿಲ್ಲವಂತೆ. ಎಂಥ ಪರಿಸ್ಥಿತಿಯಲ್ಲೂ ಎಲ್ಲೇ ಇದ್ದರೂ.. ದಿನಕ್ಕೊಂದು ಗಂಟೆ ನೆಟ್ಸ್ ನಲ್ಲಿ ಪ್ರಾಕ್ಟಿಸ್ ಮಾಡುವುದನ್ನು ಮಿಸ್ ಮಾಡುವುದಿಲ್ಲವಂತೆ. ಜಾಗವೇ ಇಲ್ಲದ ಜಾಗದಲ್ಲೂ ಒಂದು ಬ್ಯಾಟ್ ಹಿಡ್ಕೊಂಡು ಸ್ಟಾನ್ಸ್ ಸ್ಟೈಲ್ ಅಂತ ಇಂದಿಗೂ ಒಬ್ನೇ ಪ್ರಾಕ್ಟಿಸ್ ಮಾಡ್ತಾ ನಿಲ್ಲೋದನ್ನು ಕಂಡವರಿದ್ದಾರೆ. ಕ್ರಿಕೆಟನ್ನು ಆ ಪರಿ ಪ್ರೀತಿಸದೆ ಗೌರವಿಸದೇ ಆ ಶ್ರದ್ಧೆ ಬರುವುದು ಅಸಾಧ್ಯ.
ರಾಜ್ ಕುಮಾರ್ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಮುಗ್ಧತೆ ವಿನಯ ಮತ್ತು ಶ್ರದ್ಧೆಶಿಸ್ತುಗಳಿಗೆ ಅದು ಪರ್ಯಾಯ ಹೆಸರು ಅಷ್ಟೆ.
ಹೊಸ ಚಿತ್ರಗಳಲ್ಲಿ ಎಸ್ಪಿಬಿ ಹಿನ್ನೆಲೆಗಾಯನ ಮಿಸ್ ಮಾಡ್ಕೊಳ್ತಾ ಇದ್ದ ನಮ್ಮಂಥ ಅಭಿಮಾನಿಗಳಿಗೆ ಫೇಸ್ಬುಕ್ಕಲ್ಲಿ ಸಿಕ್ರು ಎಂಬ ಖುಷಿ ಇನ್ನೂ ಚಿಗುರಿತ್ತಾ ಇರುವಾಗಲೇ ಕೋವಿಡ್ ಅವರನ್ನು ನಮ್ಮಿಂದ ದೂರ ಕರೆದೊಯ್ದಿತು. ಎಲ್ಲ ಸಾವುಗಳೂ ನಷ್ಟವೇ.. ದುಃಖಕರವೇ.. ದೊಡ್ಡದೇ. ಆದರೆ ಎಸ್ಪಿಬಿ ಇರಬೇಕಿತ್ತು. ಸುಖವಿದಾಯ ಹೊಂದಬೇಕಿತ್ತು. ಹೀಗೆ ಹೋಗಬಾರದಿತ್ತು. ಇಷ್ಟು ಬೇಗ ಹಾಡು ನಿಲ್ಲಬಾರದಿತ್ತು.