‘ಇದು ವಿಷ್ಣುಸರ್ ಮೆಚ್ಚದ ಕೆಲಸ!’

ಕನ್ನಡ ಚಿತ್ರರಂಗದ ಸಮಸ್ತರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಅಭಿಯಾನವನ್ನು ಕಳೆದ ತಿಂಗಳಾಂತ್ಯದಲ್ಲಿ ಆರಂಭಿಸಿದ್ದು ಕಲಾವಿದರ ಭವನದಲ್ಲಿ. ಆದರೆ ಅದರ ಪೋಸ್ಟರ್ ಒಂದರ ಬಿಡುಗಡೆಯ ವಿಚಾರದಲ್ಲಿ ಮೂಡಿರುವ ವಿವಾದ ಮತ್ತು ಮುಂದುವರಿದ ಪ್ರತಿಕ್ರಿಯೆಗಳಿಗೆ ಚಿತ್ರ ಸಾಹಿತಿ, ನಿರ್ದೇಶಕ ವಿ ನಾಗೇಂದ್ರ ಪ್ರಸಾದ್ ಅವರು ಸಿನಿಕನ್ನಡದ ಜೊತೆಗೆ ವ್ಯಕ್ತಪಡಿಸಿರುವ ಅನಿಸಿಕೆ ಇಲ್ಲಿದೆ.

ಘಟನೆಯ ಹಿನ್ನೆಲೆ

ಉಚಿತ ಕೋವಿಡ್ 19 ಲಸಿಕೆಯ ಪ್ರಚಾರಕ್ಕೆ ಬಳಸಲಾಗಿರುವ ಪೋಸ್ಟರ್ ಇದು. ಇದರಲ್ಲಿ ಡಾ.ರಾಜ್ ಕುಮಾರ್ ಮತ್ತು ಡಾ. ಅಂಬರೀಷ್ ಅವರ ಚಿತ್ರಗಳು ಮಾತ್ರ ಇವೆ. ರಾಜ್ ಅವರ ಬಳಿಕ ಜನಪ್ರಿಯರಾಗಿ ಮೆರೆದ ಡಾ. ವಿಷ್ಣುವರ್ಧನ್ ಚಿತ್ರವನ್ನು ಬಳಸಲಾಗಿಲ್ಲ ಎನ್ನುವುದು ವಿಷ್ಣುವರ್ಧನ್ ಅಭಿಮಾನಿಗಳ ನೋವು. ಅದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ದೊಡ್ಡ ಪ್ರತಿಭಟನೆಯೇ ನಡೆಯಿತು. ಅದು ಎಷ್ಟರ ಮಟ್ಟಿಗೆ ಎಂದರೆ ಕಲಾವಿದರ ಭವನಕ್ಕೆ ಸಂಬಂಧಿಸಿದಂತೆ ಅದರ ಜವಾಬ್ದಾರಿ ವಹಿಸಿರುವವರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ಹಿರಿಯ ನಟ ದೊಡ್ಡಣ್ಣ. ಹಾಗಾಗಿ ವಿಷ್ಣುವರ್ಧನ್ ಅಭಿಮಾನಿಗಳು ಮೊದಲು ಅವರಿಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವರಂತೂ ಅವರಿಬ್ಬರ ಫೊಟೊಗಳಿಗೆ ಹಾರಹಾಕಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ. ಈ ಎಲ್ಲ ಘಟನೆಗಳ ಬಗ್ಗೆ ನಾಗೇಂದ್ರ ಪ್ರಸಾದ್ ಅವರ ಮಾತುಗಳು ಹೀಗಿವೆ.

ಇದನ್ನು ವಿಷ್ಣು ಸರ್ ಕೂಡ ಮೆಚ್ಚಲ್ಲ!

“ಮಾಡಿದ್ದು ತಪ್ಪು. ಆದರೆ ಯಾರೋ ಮಾಡಿದ್ದಾರೆ. ರಾಕ್ಲೈನ್ ಸರ್ ಆಗಲೀ, ದೊಡ್ಡಣ್ಣ ಆಗಲೀ “ಹೀಗೊಂದು ಡಿಸೈನ್ ಮಾಡಿ, ಇವರ ಫೊಟೊ ಅಷ್ಟೇ ಹಾಕಿ” ಎನ್ನುವ ಮನಸ್ಥಿತಿಯವರಲ್ಲ.

ವಿಷ್ಣುವರ್ಧನ್ ಅವರ ಫೊಟೋ ಇಲ್ಲದಿರುವುದು
ಅಭಿಮಾನಿಗಳ ಕೋಪ ಕೂಡ ಸಹಜವಾಗಿರುವಂಥದ್ದೇ. ಯಾಕೆಂದರೆ ವಿಷ್ಣುವರ್ಧನ್ ಅವರು ಚಿತ್ರರಂಗದಲ್ಲಿ ಯಾರೊಂದಿಗೆಲ್ಲ ಎಷ್ಟು ಆತ್ಮೀಯರಿದ್ದರು ಎಂದು ತಿಳಿದಿರುವುದಿಲ್ಲ. ಅವರಿಗೆ ವಿಷ್ಣುವರ್ಧನ್ ಒಬ್ಬ ಹಿರಿಯ ನಟನಾಗಿದ್ದು, ಅವರಿಗೆ ಸಿಗಬೇಕಾದ ಮರ್ಯಾದೆ ಸಿಗಲೇಬೇಕು ಎನ್ನುವುದಷ್ಟೇ ವಾದ. ಅದು ನಿಜವೂ ಹೌದು. ಆದರೆ ರಾಕ್ಲೈನ್ ಅವರು, ದೊಡ್ಡಣ್ಣ ಎಲ್ಲ ವಿಷ್ಣುವರ್ಧನ್ ಅವರೊಂದಿಗೆ ಎಷ್ಟು‌ ಚೆನ್ನಾಗಿದ್ದರು, ಎಷ್ಟೊಂದು‌ ಸಿನಿಮಾಗಳನ್ನು ಮಾಡಿದರು ಎನ್ನುವುದನ್ನು ಅರಿತಾಗ ಅವರಿಬ್ಬರಿಂದ ಆ ತಪ್ಪು ಆಗಿಲ್ಲ ಎನ್ನುವುದು ಅರ್ಥವಾಗುತ್ತದೆ. ಹಾಗಾಗಿ ಪ್ರತಿಭಟಿಸುವ ಸಂದರ್ಭದಲ್ಲಿ ಅವರಿಬ್ಬರ ಫೊಟೊಗಳಿಗೆ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿರುವುದು ತಪ್ಪಾಗುತ್ತದೆ. ಸಂದೇಹವಿದ್ದಾಗ ಅವರನ್ನು ಸರಿಯಾಗಿ ಪ್ರಶ್ನಿಸಿ ಉತ್ತರ ಪಡೆಯಬೇಕು” ಎಂದಿದ್ದಾರೆ ನಾಗೇಂದ್ರ ಪ್ರಸಾದ್.

ನಮ್ಮ ಅವಲೋಕನ

‘ಕಲಾವಿದರ ಸಂಘ’ದ ಸ್ಥಾಪನೆಯ ಕನಸು ಕಂಡು ಅದರ ರೂವಾರಿ ಆದವರು ಡಾ. ರಾಜ್ ಕುಮಾರ್. ಅವರ ಕನಸನ್ನು ನನಸು ಮಾಡುವ ಜವಾಬ್ದಾರಿ ವಹಿಸಿಕೊಂಡು ಯಶಸ್ವಿಯಾದವರು ಖ್ಯಾತ ನಟ ಅಂಬರೀಷ್. ಹಾಗಾಗಿ ಆ ಕಲಾವಿದರ ಭವನದಲ್ಲೇ ಲಸಿಕೆ ಕಾರ್ಯಕ್ರಮ ನಡೆದಾಗ ಸಹಜವಾಗಿ ಅವರಿಬ್ಬರ ಹೆಸರು ನೆನಪಿಸಿಕೊಂಡ ಡಿಸೈನರ್ ಎರಡೇ ಮಂದಿಯ ಫೊಟೊಗಳನ್ನು ಹಾಕಿಸಿದ್ದಾರೆ. ಆದರೆ ಕನ್ನಡ ಚಿತ್ರಂಗದ ತಾರೆಯರ ಬಗ್ಗೆ ಹೇಳುವಾಗ ರಾಜ್ ಕುಮಾರ್ ಬಳಿಕ ನೆನಪಾಗುವುದೇ ವಿಷ್ಣುವರ್ಧನ್ ಅವರ ಹೆಸರು ಎನ್ನುವುದನ್ನು ಮರೆತಿದ್ದಾರೆ.

Recommended For You

Leave a Reply

error: Content is protected !!