ನಟ, ಪತ್ರಕರ್ತ ಸುರೇಶ್ಚಂದ್ರ ಸಾವು

ಹಿರಿಯ ನಟ ಮತ್ತು ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ಸುರೇಶ್ಚಂದ್ರ (69) ನಿಧನರಾಗಿದ್ದಾರೆ. ಕೊರೊನಾ ಕಾರಣದಿಂದಾಗಿ ಈ ಸಾವು ಸಂಭವಿಸಿದೆ ಎಂದು ಅವರ ಪುತ್ರ ವಿನಯ ಚಂದ್ರ ಸಿನಿಕನ್ನಡ.ಕಾಮ್ ಗೆ ತಿಳಿಸಿದ್ದಾರೆ.

‘ಚೆಲುವಿನ ಚಿತ್ತಾರ’ ಸಿನಿಮಾದಲ್ಲಿ ಅಮೂಲ್ಯನ ತಂದೆಯ ಪಾತ್ರ ನಿರ್ವಹಿಸಿದ್ದ ಸುರೇಶ್ಚಂದ್ರ ಅವರು ಆ ಮೂಲಕವೇ ಕನ್ನಡ ಚಿತ್ರರಸಿಕರ ಗಮನ ಸೆಳೆದಿದ್ದರು. ಕೋವಿಡ್ ಕಾರಣ ಕಳೆದ ಒಂದು ತಿಂಗಳಿನಿಂದ ಮನೆಯಲ್ಲೇ ಉಳಿದುಕೊಂಡಿದ್ದ ಸುರೇಶ್ ಚಂದ್ರ ಅವರು 25 ದಿನಗಳ ಹಿಂದೆ ಕೋವಿಡ್ ಸೋಂಕಿನೊಂದಿಗೆ ಆಸ್ಪಯ ದಾಖಲಾಗಿದ್ದರು! 22 ದಿನಗಳ ಕಾಲ ಜಯನಗರದ ಅಪೊಲೊ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆಯಲ್ಲಿದ್ದ ಅವರು ಇಂದು ಮಧ್ಯಾಹ್ನ 1.30ರ ಸುಮಾರಿಗೆ ಇಹಲೋಕ ತ್ಯಜಿಸಿದ್ದಾರೆ.

ಪತ್ರಕರ್ತರಾಗಿ ‘ಲಿಂಗೇನಹಳ್ಳಿ ಸುರೇಶ್ಚಂದ್ರ’ ಎಂದೇ ಗುರುತಿಸಿಕೊಂಡಿದ್ದ ಅವರು, ‘ಸಂಜೆವಾಣಿ’ ಪತ್ರಿಕೆಯ ಆರಂಭದಿಂದ ತೀರ ಇತ್ತೀಚಿನವರೆಗೆ ಅದೊಂದೇ ಪತ್ರಿಕೆಯಲ್ಲೇ 37 ವರ್ಷಗಳ ವೃತ್ತಿಯಲ್ಲಿದ್ದರು. ಉಪ ಸಂಪಾದಕರಾಗಿ ವೃತ್ತಿ ಆರಂಭಿಸಿದ ಅವರು ಸಂಪಾದಕರಾಗಿ ನಿವೃತ್ತರಾಗಿದ್ದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು ವಿದ್ಯಾರ್ಥಿ ದೆಸೆಯಲ್ಲೇ ‘ಫಿಲ್ಮ್ ಕ್ರಿಟಿಸಿಸಮ್’ ಸಬ್ಜೆಕ್ಡ್ ಆಯ್ದುಕೊಂಡು ರಿಸರ್ಚ್ ನಲ್ಲಿ‌‌ ಗೋಲ್ಡ್ ಮೆಡಲ್ ಪಡೆದಿದ್ದರು. ಸಂಜೆವಾಣಿಯಲ್ಲಿ ಸಿನಿಮಾ ವಿಭಾಗವನ್ನು ಆರಂಭಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ.

‘ಚೆಲುವಿನ ಚಿತ್ತಾರ’ದ ಖ್ಯಾತಿ

ನಿರ್ದೇಶಕ ಎಸ್ ನಾರಾಯಣ್ ಅವರ ಒತ್ತಾಯಕ್ಕೆ ಮಣಿದು ‘ಚೆಲುವಿನ ಚಿತ್ತಾರ’ದ ಪಾತ್ರ ಒಪ್ಪಿಕೊಂಡಿದ್ದ ಸುರೇಶ್ಚಂದ್ರ ಅವರು ಪಾತ್ರ ನೀಡಿದ ಜನಪ್ರಿಯತೆ ಕಂಡು ಆಮೇಲೆ ನಾರಾಯಣ್ ಅವರಿಗೆ ಕೃತಜ್ಞರಾಗಿದ್ದರು! ಆನಂತರ ನಾರಾಯಣ್ ನಿರ್ದೇಶನದ ಬೇರೆ ಚಿತ್ರಗಳು ಸೇರಿದಂತೆ ಸುಮಾರು 25 ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ನಂದ ಲವ್ಸ್ ನಂದಿತ’, ‘ಜಂಗ್ಲಿ’, ‘ಉಗ್ರಂ’ ಮೊದಲಾದ ಜನಪ್ರಿಯ ಚಿತ್ರಗಳ ಬಳಿಕವೂ ಅವರು‌ ಚೆಲುವಿನ ಚಿತ್ತಾರದ ಪಾತ್ರದ ಮೂಲಕವೇ ಗುರುತಿಸಿಕೊಳ್ಳುತ್ತಿದ್ದುದು ವಿಶೇಷ.

ಸುರೇಂಶ್ಚಂದ್ರ ಅವರು ಪತ್ನಿ ಜಯಲಕ್ಷ್ಮಿ ಮತ್ತು ಇಬ್ಬರು ಗಂಡುಮಕ್ಕಳು‌ ಸೇರಿದಂತೆ ಕುಟುಂಬವರ್ಗವನ್ನು ಅಗಲಿದ್ದಾರೆ. ಹಿರಿಯ ಪುತ್ರ ವಿನಯಚಂದ್ರ ಅವರು ಸಿನಿಮಾ ನಿರ್ದೇಶಕರಾಗಿ ಹೆಜ್ಜೆ ಇಡುತ್ತಿದ್ದು, ಕಿರಿಯ ಪುತ್ರ ಅಭಯಚಂದ್ರ ಸಂಗೀತ ನಿರ್ದೇಶಕರೂ ಹೌದು. ಕೊರೊನಾ ಕೊಂಡೊಯ್ದ ಸಿನಿರಂಗದ ಪ್ರತಿಭಾವಂತರ ಪಟ್ಟಿಗೆ ಸುರೇಶ್ಚಂದ್ರ ಅವರು ಕೂಡ ಸೇರಿಕೊಂಡಿರುವುದು ದುರಂತವೇ ನಿಜ. ಇದೇ ದಿನ ಸಂಜೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಲಿಂಗೇನಹಳ್ಳಿಯಲ್ಲಿ ಮೃತರ ಅಂತ್ಯ ಸಂಸ್ಕಾರ ನೆರವೇರಲಿರುವುದಾಗಿ ತಿಳಿದುಬಂದಿದೆ.

Recommended For You

Leave a Reply

error: Content is protected !!