ವಿದಾಯ ಹೇಳಿದ ಸಂಚಾರಿ ವಿಜಯ್

ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಮೆದುಳು ನಿಧನವಾಗಿದೆ. ಶನಿವಾರ ರಾತ್ರಿ ಬೈಕ್ ಅಪಘಾತದಲ್ಲಿ ತಲೆಗೆ ಗಂಭೀರ ಏಟು ಮಾಡಿಕೊಂಡಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ. ಇದನ್ನು ವೈದ್ಯರು ಬ್ರೈನ್ ಡೆತ್ ಎಂದಿದ್ದಾರೆ.

ಲಾಕ್ಡೌನ್ ದಿನಗಳಲ್ಲಿಯೂ ಕೋವಿಡ್ ಸೋಂಕಿತರ ಸಹಾಯ ಮಾಡುತ್ತಾ ಸಮಾಜ ಸೇವೆಯಲ್ಲಿ ನಿರತರಾಗಿದ್ದವರು ವಿಜಯ್. ಶನಿವಾರ ದಿನಾಂಕ 12ರಂದು ರಾತ್ರಿ ಸ್ನೇಹಿತನ ಜೊತೆಗೆ ಬೈಕ್ ನಲ್ಲಿ ಸಂಚರಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಹಿಂಬದಿ ಸವಾರನಾಗಿ ಕುಳಿತಿದ್ದ ವಿಜಯ್ ಯವರು ಜೆ.ಪಿ‌ನಗರದ ರಸ್ತೆಯಲ್ಲಿ ಸ್ಕಿಡ್ ಆದ ಬೈಕ್ ನಿಂದ ಹಾರಿ ಬಿದ್ದಿದ್ದರು. ಬಿದ್ದ ರಭಸಕ್ಕೆ ಪಕ್ಕದಲ್ಲಿದ್ದ ಲೈಟ್ ಕಂಬಕ್ಕೆ ತಲೆ ಢಿಕ್ಕಿಯಾಗಿ ಜ್ಞಾನ ತಪ್ಪಿದ್ದರು. ಬೈಕ್ ಚಲಾಯಿಸುತ್ತಿದ್ದ ನವೀನ್ ಎನ್ನುವವರಿಗೂ ಗಂಭೀರ ಗಾಯಗಳಾಗಿತ್ತು. ತೊಡೆ ಮತ್ತು ತಲೆಯೊಳಗೆ ಭಾರೀ ಸ್ವರೂಪದ ಗಾಯಕ್ಕೊಳಗಾಗಿದ್ದ ವಿಜಯ್ ಅವರನ್ನು ಅಪಘಾತವಾದ ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಬನ್ನೇರುಘಟ್ಟ ರಸ್ತೆಯ ಅಪೊಲೊ ಆಸ್ಪತ್ರೆ ದಾಖಲಿಸಿದಾಗ ಮೆದುಳಿಗೆ ಏಟಾಗಿರುವುದನ್ನು ಗಮನಿಸಿದ ವೈದ್ಯರು ಆಪರೇಷನ್ ನಡೆಸಿದ್ದರು. ಆದರೆ ಪರಿಸ್ಥಿತಿ ಚಿಂತಾಜನಕವಾಗಿಯೇ ಮುಂದುವರಿದಿತ್ತು. ಮುಂದಿನ 48 ಗಂಟೆಗಳ ಕಾಲದಲ್ಲಿ ಅವರ ಪ್ರತಿಕ್ರಿಯೆ ಗಮನಿಸಿ ಪರಿಸ್ಥಿತಿಯ ಬಗ್ಗೆ ತಿಳಿಸುವುದಾಗಿ ಹೇಳಿದ್ದರು ನ್ಯೂರೋ ಸರ್ಜನ್ ಅರುಣ್ ನಾಯಕ್. ವಿಜಯ್ ಅವರ ದೇಹ ಯಾವುದೇ ರೀತಿ ಸ್ಪಂದಿಸಿಲ್ಲ. ನಟನ ನಿಧನದ ವಾರ್ತೆ ಚಿತ್ರರಂಗವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ವಿಜಯ್ ಸಹೋದರ ಅಣ್ಣನ ಅಂಗಾಂಗ ದಾನ ಮಾಡುವ ನಿರ್ಧಾರ ತಿಳಿಸಿದ್ದಾರೆ.

‘ಸಂಚಾರಿ’ ನಾಟಕ ತಂಡದಲ್ಲಿ ನಟನಾಗಿ‌ ಗುರುತಿಸಿಕೊಂಡ ವಿಜಯ್ ಚಿತ್ರರಂಗದಲ್ಲಿ ಕೂಡ ‘ಸಂಚಾರಿ ವಿಜಯ್’ ಆಗಿಯೇ ಗುರುತಿಸಿಕೊಂಡಿದ್ದರು. ಪ್ರಧಾನ ಪಾತ್ರದಲ್ಲಿ ನಟಿಸಿದ ಪ್ರಥಮ ಚಿತ್ರ ‘ನಾನು ಅವಳಲ್ಲ ಅವನು’ ಮೂಲಕ ರಾಷ್ಟ್ರ ಪ್ರಶಸ್ತಿ ಪಡೆದು ದೇಶದ ಗಮನ ಸೆಳೆದ ಪ್ರತಿಭಾವಂತ. ಅದರ ಯಾವುದೇ ಹಮ್ಮುಬಿಮ್ಮುಗಳಿರದೆ ಜನಸೇವೆಯ ಮೂಲಕ ಮನ್ನಣೆ ಪಡೆದವರು. ಕೊಡಗು ದುರಂತದ ವೇಳೆ ಅಲ್ಲಿಗೂ ತೆರಳಿ‌ ಸೇವಾ ನಿರತರಾಗಿದ್ದ ವಿಜಯ್ ಕೊರೊನಾದ ಎರಡು ಅಲೆಗಳ ಸಂದರ್ಭದಲ್ಲಿ ಕೂಡ ಬೆಂಗಳೂರಲ್ಲಿ ಸಕ್ರಿಯ ಸಮಾಜ ಸೇವೆ ಮಾಡಿದ್ದರು. ಇತ್ತೀಚೆಗೆ ಕೂಡ ಕವಿರಾಜ್ ನೇತೃತ್ವದ ‘ಉಸಿರು’ ತಂಡದಲ್ಲಿದ್ದುಕೊಂಡು ರೋಗಿಗಳ ಉಸಿರಾಗಿದ್ದ ವಿಜಯ್ ಈಗ ತಾವೇ ಉಸಿರು‌ ಕಳೆದುಕೊಂಡಿರುವುದು ದುರಂತ. ಇವೆಲ್ಲದರ ನಡುವೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಸಾವಿನ ಬಗ್ಗೆ ಅಧಿಕೃತ ಘೋಷಣೆಯನ್ನು ಇನ್ನಷ್ಟೇ ಹೊರಡಿಸಬೇಕಿದೆ.

ವಿಜಯ್ ಅವರ ಶೀಘ್ರ ಚಿಕಿತ್ಸೆಗೆ ಕಾರಣ ಕರ್ತರಾಗಿದ್ದ ಕಿಚ್ಚ ಸುದೀಪ್ ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

Recommended For You

Leave a Reply

error: Content is protected !!
%d bloggers like this: