ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಥಮ ಬಾರಿಗೆ ಅರ್ಧಕ್ಕೆ ಸ್ಥಗಿತವಾಗಿತ್ತು. ಆದರೆ ಕಲರ್ಸ್ ವಾಹಿನಿಯ ಮುಖ್ಯಸ್ಥರಾದ ಪರಮೇಶ್ವರ ಗುಂಡ್ಕಲ್ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಮುಂದುವರಿಸುವ ಪಣ ತೊಟ್ಟಿದ್ದಾರೆ. ಈ ಬಗ್ಗೆ ಅವರು ಫೇಸ್ಬುಕ್ ನಲ್ಲಿ ಹಂಚಿಕೊಂಡ ಮಾಹಿತಿಯನ್ನು ಅದೇ ರೀತಿ ಇಲ್ಲಿ ನೀಡುತ್ತಿದ್ದೇವೆ.
ಊರು ಸೇರಿದಾಗಲೇ ದಾರಿ ಮುಗಿಯುವುದು. ಮನೆ ಸೇರಿದಾಗಲೇ ಹಾದಿಯಲ್ಲಿ ಕಷ್ಟಪಟ್ಟಿದ್ದು ಸಾರ್ಥಕ ಅನಿಸೋದು. ಅರ್ಧದಲ್ಲಿಯೇ ನಿಲ್ಲಿಸಿದ್ದ ಪ್ರಯಾಣವನ್ನು ಈಗ ಪುನಃ ಅದೇ ಹನ್ನೆರಡು ಜನರೊಂದಿಗೆ ಶುರು ಮಾಡುವ ಸಮಯ.
ಇದೊಂಥರಾ ಎರಡನೇ ಇನಿಂಗ್ಸ್. ಯಾರು ಚೆನ್ನಾಗಿ ಆಡುತ್ತಿದ್ದಾರೆ, ಎಲ್ಲಿ ಚೆನ್ನಾಗಿ ಆಡಬಹುದಿತ್ತು, ಎಲ್ಲಿ ಚೆನ್ನಾಗಿ ಆಡಬೇಕಾಗಿತ್ತು, ಯಾರಿಗೆ ಗಾಯವಾಗಿದೆ, ಯಾರು ಬೇಗ ಸುಸ್ತಾಗುತ್ತಾರೆ, ಯಾರು ರೊಚ್ಚಿಗೇಳುತ್ತಾರೆ, ಪಿಚ್ ಹೇಗೆ ವರ್ತಿಸುತ್ತಿದೆ ಎನ್ನುವುದೆಲ್ಲಾ ಗೊತ್ತಿದೆ. ಮೊದಲನೇ ಇನಿಂಗ್ಸಿನ ಸ್ಕೋರ್ ಕಾರ್ಡ್ ಎಲ್ಲರಿಗೂ ಗೊತ್ತು. ಆದರೆ ಎರಡನೇ ಇನಿಂಗ್ಸಿನಲ್ಲಿ ಯಾರು ಹೇಗೆ ಆಡುತ್ತಾರೆ ಅನ್ನುವುದರ ಮೇಲೇ ಮ್ಯಾಚ್ ಯಾರು ಗೆಲ್ಲುತ್ತಾರೆ ಎಂಬ ತೀರ್ಮಾನ ಆಗುವುದು.. ಎರಡನೇ ಇನಿಂಗ್ಸಿನಲ್ಲಿ ಮತ್ತೆ ಮೊದಲ ರನ್ ಓಡಬೇಕು. ಮೊದಲ ವಿಕೆಟ್ ಉರುಳಿಸಬೇಕು. ಅದೇ ಏಕಾಗ್ರತೆ, ಶ್ರದ್ಧೆ ಮತ್ತು ಜೀವನಪ್ರೀತಿ ಬೇಕು. ಇಷ್ಟು ವರ್ಷಗಳ ಕಾಲ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ ಯಾವ ಬಿಗ್ ಬಾಸ್ ಶೋದಲ್ಲೂ ಎರಡನೇ ಇನಿಂಗ್ಸ್ ಆಡುವ ಅವಕಾಶ ಯಾರಿಗೂ ಸಿಕ್ಕಿರಲಿಲ್ಲ. ಕನ್ನಡದಲ್ಲಿ ಈ ಹನ್ನೆರಡು ಕಂಟೆಸ್ಟೆಂಟುಗಳಿಗೆ ಅಂಥದ್ದೊಂದು ಅವಕಾಶ ಸಿಗುತ್ತಿದೆ.
ಜೂನ್ ತಿಂಗಳು. ಹೊರಗಡೆ ಮಳೆ. ಹೊಸ ತರಗತಿಗೆ ಹೊಸದಾಗಿರೋ ಕೊಡೆ ಹಿಡಿದು ಹೋದಷ್ಟೇ ಖುಷಿಯೊಂದಿಗೆ ವಾಪಸ್ ಕೆಲಸಕ್ಕೆ ಹಾಜರಾಗುತ್ತಿದ್ದೇವೆ. ಪಾಸಾಗುತ್ತೇವೋ ಫೇಲಾಗುತ್ತೇವೋ ಅನ್ನುವುದಕ್ಕಿಂತ ತರಗತಿಯಲ್ಲಿ ಕುಳಿತು ಕಲಿತಾ ಇರಬೇಕು ಅನ್ನೋದೇ ವಿಷಯ.