ಆರಂಭದಿಂದಲೂ ಚಿತ್ರರಂಗದ ಸಮಸ್ಯೆಗಳ ವಿರುದ್ಧದ ಹೋರಾಟದಲ್ಲಿ ಸದಾ ಕೈ ಜೋಡಿಸಿರುವ ನಟ ಡಾ. ಶಿವರಾಜ್ ಕುಮಾರ್. ಇದೀಗ ತಮ್ಮ ಖಾಸಗಿ ಸಂತೋಷವನ್ನು ಕೂಡ ಚಿತ್ರರಂಗದ ಸದಸ್ಯರೊಡನೆ ಹಂಚಿಕೊಂಡಿದ್ದಾರೆ. ಅದಕ್ಕೆ ಎಡೆ ಮಾಡಿಕೊಟ್ಟಿರುವುದು ಅವರ ಮುದ್ದಿನ ಮಡದಿ ಗೀತಾ ಅವರ ಜನ್ಮದಿನ. ಇಂದು ಹುಟ್ಟಿದ ದಿನಾಚರಣೆಯ ಖುಷಿಯಲ್ಲಿರುವ ಪತ್ನಿಯ ಹೆಸರಲ್ಲಿ ಕನ್ನಡ ಚಿತ್ರರಂಗದ ಕಾರ್ಮಿಕರ ಒಕ್ಕೂಟಕ್ಕೆ ಹತ್ತು ಲಕ್ಷದ ಮೊತ್ತವನ್ನು ಉಡುಗೊರೆಯಾಗಿ ನೀಡಿದ್ದಾರೆ ಸೆಂಚುರಿ ಸ್ಟಾರ್ ಶಿವಣ್ಣ.
ಶಿವರಾಜ್ ಕುಮಾರ್ ಕುಟುಂಬ ಮಾಡುವ ದಾನ ಧರ್ಮಗಳಿಗೆ ಲೆಕ್ಕವಿಲ್ಲ. ಆದರೆ ಯಾವುದನ್ನು ಕೂಡ ಪ್ರಚಾರ ಮಾಡಬಾರದು ಎನ್ನುವುದು ಡಾ.ರಾಜ್ ಕುಮಾರ್ ಹಾಕಿ ಕೊಟ್ಟ ದಾರಿ. ಅದರಂತೆ ಸದ್ದಿಲ್ಲದೆ ಹಲವಾರು ಸೇವಾಕಾರ್ಯಗಳನ್ನು ಕೈಗೊಳ್ಳುವ ಶಿವಣ್ಣ ತಮ್ಮ ಅಭಿಮಾನಿಗಳ ಸಾಮಾಜಿಕ ಕಾರ್ಯಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುತ್ತಿರುತ್ತಾರೆ. ಪ್ರಸ್ತುತ ಕೋವಿಡ್ ಕಾಲದಲ್ಲಿ ಶಿವಣ್ಣನನ್ನು ಚಿತ್ರರಂಗದ ಎಲ್ಲ ವಿಭಾಗದ ಅನಧಿಕೃತ ನಾಯಕನೆಂದು ಕೂಡ ಪರಿಗಣಿಸಿ ಅವರ ನೇತೃತ್ವದಲ್ಲಿ ಮುಂದೆ ಹೆಜ್ಜೆ ಹಾಕುತ್ತಿದೆ. ಅಂಥ ಸಂದರ್ಭದಲ್ಲಿ ಶಿವಣ್ಣ ಚಿತ್ರರಂಗದ ಕಾರ್ಮಿಕರಿಗೆ ನೀಡುತ್ತಿರುವ ಈ ಹತ್ತು ಲಕ್ಷದ ಕೊಡುಗೆಯು ಉಲ್ಲೇಖಾರ್ಹವಾಗಿದೆ.
ರಾಜ್ಯದ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರಿಯಾದ ಗೀತಾ ಅವರನ್ನು ಶಿವರಾಜ್ ಕುಮಾರ್ ಅವರು ಮಡದಿಯಾಗಿ ಸ್ವೀಕರಿಸಿ 35 ವರ್ಷಗಳು ಉರುಳಿವೆ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯಪುತ್ರಿ ಅನುಪಮಾ ವಿವಾಹಿತೆಯಾಗಿದ್ದು ಕಿರಿಯ ಪುತ್ರಿ ನಿವೇದಿತಾ ಬಾಲನಟಿಯಾಗಿ ಗುರುತಿಸಿಕೊಂಡಿದ್ದರು. ಪ್ರಸ್ತುತ ಧಾರಾವಾಹಿ, ವೆಬ್ ಸೀರೀಸ್ ನಿರ್ಮಾಣದಲ್ಲಿ ಭಾಗಿಯಾಗಿ ಬಣ್ಣದ ಲೋಕದ ಸಂಬಂಧ ಮುಂದುವರಿಸಿದ್ದಾರೆ. ಗೀತಾ ಅವರು ಶಿವರಾಜ್ ಕುಮಾರ್ ಬ್ಯಾನರ್ ಸಿನಿಮಾಗಳ ನಿರ್ಮಾಪಕಿಯಾಗಿ ಹಾಗೂ ಶಿವಣ್ಣನ ಚಿತ್ರಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಅವರಿಗೆ ಸಿನಿಕನ್ನಡ.ಕಾಮ್ ಜನ್ಮದಿನದ ಶುಭ ಹಾರೈಸುತ್ತದೆ.
ಇಂದು ಶಿವರಾಜ್ ಕುಮಾರ್ ಅವರ ನಾಗವಾರದ ಸ್ವಗೃಹ ‘ಮುತ್ತು’ವಲ್ಲಿ ನಡೆದ ಜನ್ಮದಿನ ಸಂಭ್ರಮದ ವೇಳೆ ನಿರ್ಮಾಪಕ ಮತ್ತು ಶಿವಣ್ಣನ ಆಪ್ತರಾದ ಕೆ.ಪಿ ಶ್ರೀಕಾಂತ್, ನಾಗಿ, ಪುನೀತ್ ಮೊದಲಾದವರು ಉಪಸ್ಥಿತರಿದ್ದರು.