ಮಕ್ಕಳ ಕೈಗೆ ಮೊಬೈಲ್ ಫೋನ್ ಕೊಟ್ಟರೆ ಏನೆಲ್ಲ ಆಗಬಹುದು? ಅದಕ್ಕೊಂದು ಒಳ್ಳೆಯ ಘಟನೆ ಉದಾಹರಣೆಯಾಗಿ ಸಿಕ್ಕಿದೆ. ಅದು ಕತೆಗಾರ ಟಿ.ಕೆ ದಯಾನಂದ್ ಅವರ ಮನೆಯಿಂದ. ಅವರ ನಾದಿನಿಯ ನಾಲ್ಕು ವರ್ಷದ ಮಗಳು ಆದ್ಯ ಮಾಡಿದ ಕಿತಾಪತಿ ಏನು ಎನ್ನುವುದನ್ನು ತಮ್ಮದೇ ಮಾತುಗಳಲ್ಲಿ ಹೀಗೆ ಹೇಳಿಕೊಂಡಿದ್ದಾರೆ!
ನಮ್ ಮನೆ ಕಿತಾಪತಿ ಸುಬ್ಬಿಗೆ ನನ್ನ ಹಳೇ ಫೋನನ್ನ ಹಕ್ಕಿಗಳು ಪ್ರಾಣಿಗಳು ನೇಚರ್, ಕಾರ್ಟೂನ್ ನೋಡಲಿ ಅಂತ ಕೊಟ್ಟಿದ್ದೆ. ಒಂದು ಮಧ್ಯಾಹ್ನ ಊಟ ಮಾಡೋವಾಗ ಹೊಸಫೋನಿಗೆ ಕಾಲ್ ಬಂತು, ಕ್ಯಾಬ್ ಬಂದಿದೆ ಸಾರ್ ಅಂತ. ಕ್ಯಾಬಾ? ಎಲ್ಲಿಗೆ? ಅಂದೆ. ಊಟಿಗೆ ಅಂದ. ಹೆಂಡ್ತಿ ಸರ್ರ್ ಅಂತ ತಿರುಗಿದ್ಳು, “ನನ್ ಬಿಟ್ಟು ಯಾವಳ ಜೊತೆ ಊಟಿಗೆ ಕ್ಯಾಬ್ ಬುಕ್ ಮಾಡವ್ನೆ ಇವ್ನು” ಅನ್ನೋಥರ..
ಮುಂದಾಗಲಿರುವ ಅನಾಹುತ ಗ್ರಹಿಸಿದ ನಾನು “ನಾನ್ಯಾವ ಕ್ಯಾಬೂ ಬುಕ್ ಮಾಡಿಲ್ವಲ್ಲ ಅಂತ ಹೇಳಿದ್ರೆ ಡ್ರೈವರ್ ಕೇಳ್ತಿಲ್ಲ.. ತಮಿಳುನಾಡು ಊಟಿಗೆ ಕ್ಯಾಬ್ ಬುಕ್ ಮಾಡಿದೀರಿ, ಮನೆ ಕೆಳಗೆ ಇದೀನಿ ಬನ್ನಿ ಅಂತ. ಏನೋ ತಪ್ಪಾಗಿರಬೇಕು ಅಂತ ಹೇಳಿ ಕಳಿಸ್ದೆ, ಇನ್ಹತ್ತು ಸೆಕೆಂಡಿಗೆ ಇನ್ನೊಂದು ಕಾಲ್, ಸಾರ್ ಕೋಲಾರ ಔಟ್ ಸ್ಕರ್ಟ್ ಹಳ್ಳಿಗೆ ಕ್ಯಾಬ್ ಬುಕ್ ಮಾಡಿದ್ರಲ್ಲ ಮನೆ ಕೆಳಗೆ ಇದೀನಿ ಅಂತ.. ಇದ್ಯಾವ ತಲೆನೋವ್ ಮಾರ್ರೆ ಅಂತ ಅವನಕೈಲೂ ಬೈಸ್ಕೊಂಡು ವಾಪಸ್ ಕಳಿಸಿ ಊಟ ಮಾಡ್ತಿದ್ದೆ..
ಮತ್ತೊಂದು ಕಾಲ್ ಈ ಸಲ ಔಟ್ ಆಫ್ ಸ್ಟೇಟ್..
ಗಾಬರಿಯಾಗಿ ನೋಡಿದರೆ ಹೆಂಡ್ತಿ ” ಅವಳೆಲ್ಲವಳೆ ನೋಡು ” ಅಂದ್ಲು. ನೋಡಿದ್ರೆ.. ನಮ್ಮನೆ ಕಿತಾಪತಿ ಸುಬ್ಬಿ ಅವಳ ಕೈಲಿದ್ದ ಫೋನಲ್ಲಿ ಓಲಾ ಆಪ್ ಓಪೆನ್ ಮಾಡ್ಕೊಂಡು ಯಾವ್ದೋ ಕಾರ್ ಗೇಮ್ ಅಂತ ಏನೇನೋ ಒತ್ತಿ next next next ಒತ್ತಿ ಕೂತಿದ್ದಾಳೆ. ಸಾಲು ಸಾಲಾಗಿ ಎಲ್ಲೆಲ್ಲಿಗೋ ಕ್ಯಾಬ್ ಬುಕ್ ಆಗಿವೆ. ಆಮೇಲೆ ಫೋನ್ ಕಿತ್ಕೊಂಡು ಓಲಾ ಆಪ್ uninstall ಮಾಡಿ ಕೊಟ್ಮೇಲೆ ಕ್ಯಾಬ್ ಡ್ರೈವರ್ ಗಳ ಕೈಲಿ ಉಗಿಸಿಕೊಳ್ಳೋ ಸಮಸ್ಯೆ ಬಗೆಹರೀತು.
ಉಫ್ ಈ ರಂಕಲು ಮಕ್ಕಳ ಸವಾಸಲ್ಲ ಮಾರ್ರೆ..