ಕನ್ನಡದಲ್ಲಿ ಸಂಭಾಷಣಾಕಾರರಿಗೆ ಕೊರತೆ ಇದೆ ಎನ್ನಲಾಗುತ್ತದೆ. ಆ ನಿಟ್ಟಿನಲ್ಲಿ ನೋಡಿದರೆ ಸಿನಿಮಾ ಕ್ಷೇತ್ರದ ಸಂಬಂಧವೇ ಇರದಿದ್ದರೂ ಬೆಂಗಳೂರಿಗೆ ಬಂದು ತಮ್ಮ ಪುಸ್ತಕ ಓದುವ, ಬರೆಯುವ ಹವ್ಯಾಸಗಳಿಂದ ಸಂಭಾಷಣಾಕಾರಾಗಿ ಭಡ್ತಿ ಪಡೆಯುತ್ತಿರುವ ಹೊಸ ಪ್ರತಿಭೆಗಳು ಆಶಾದಾಯಕವೆನಿಸುತ್ತವೆ. ಅಂಥದೊಂದು ಪ್ರತಿಭೆ ಎನ್ನಬಹುದಾದ ಗುರುಪ್ರಸಾದ್ ಚಂದ್ರಶೇಖರ್ ಅವರ ಕುರಿತು ಇಲ್ಲಿ ನೀಡಿರುವ ಮಾಹಿತಿ ಇನ್ನಷ್ಟು ಹೊಸಬರಿಗೆ ಸ್ಫೂರ್ತಿ ಆದೀತು ಎನ್ನುವುದು ನಮ್ಮ ನಂಬಿಕೆ.
ಗುರುಪ್ರಸಾದ್ ಚಂದ್ರಶೇಖರ್ ಹುಟ್ಟಿದ್ದು ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನಲ್ಲಿ. ರಾಜ್ಯದ ಗಡಿಭಾಗ ಬಸವಕಲ್ಯಾಣದ ಕೊನೆಯ ಹಳ್ಳಿ ಚಿತ್ತಕೋಟಾ ಇವರ ಊರು. ಚಿಕ್ಕಂದಿನಿಂದಲೇ ಬೇಸಿಗೆ ರಜೆಯಲ್ಲಿ ಹಳ್ಳಿಗಳಲ್ಲಿ ರಾತ್ರಿ ಇಡೀ ಕಣ್ಣುಬಿಟ್ಟುಕೊಂಡು ನೋಡುತ್ತಿದ್ದ ಕಂಪನಿ ನಾಟಕ ಮತ್ತು ಅಪ್ಪನ ಜೊತೆ ಕಲಬುರ್ಗಿಯ ‘ತ್ರಿವೇಣಿ ಸಂಗಮ’ ಥಿಯೇಟರ್ ಮುಂದಿನ ನಾಟಕದ ಕ್ಯಾಂಪಿನಲ್ಲಿ ವೀಕ್ಷಿಸುತ್ತಿದ್ದ ನಾಟಕಗಳೇ ಇವತ್ತು ಸಿನಿಮಾದಲ್ಲಿ ಕೆಲಸ ಮಾಡುವುದಕ್ಕೆ ಕಾರಣ ಇರಬಹುದೇನೋ ಅನ್ನುತ್ತಾರೆ.
ಪ್ರಾಥಮಿಕ ಶಿಕ್ಷಣ ಮುಗಿಸಿದ್ದು ಭಾಲ್ಕಿಯಲ್ಲಿ, ತಂದೆ ಚಂದ್ರಶೇಖರ್ ಬಿರಾದಾರ್ ಇತಿಹಾಸ ಉಪನ್ಯಾಸಕರು, ತಾಯಿ ದೇವಕಿ ಗೃಹಿಣಿ.
ಶಾಲೆಗೆ ಬಂಕ್ ಮಾಡಿ ಓಡೋಡಿ ಹೋಗಿ ಭಾಲ್ಕಿಯ ಅಮರ್ ಟಾಕೀಸಿನ ಗಾಂಧಿ ಕ್ಲಾಸ್ ಲ್ಲಿ ಕುಳಿತು ನೋಡಿದ ಮೊದಲ ಸಿನೆಮಾ ನಲ್ಲ. ವಿ ನಾಗೇಂದ್ರಪ್ರಸಾದ್ ನಿರ್ದೇಶನದಲ್ಲಿ ಸುದೀಪ್ ಅವರ ಅಭಿನಯ ನೋಡಿದ ಮೇಲೆ ನಲ್ಮೆಯ ಹವ್ಯಾಸಗಳಲ್ಲಿ ಒಂದಾಯಿತು ಸಿನಿಮಾ.
ಓದಿನಲ್ಲಿ ಮುಂದೆ ಇದ್ದುದ್ದರಿಂದ ಸಿನೆಮಾ ಮತ್ತು ಕ್ರಿಕೆಟ್ ಖಯಾಲಿ ಶಿಕ್ಷಣಕ್ಕೆ ಜಾಸ್ತಿ ಡ್ಯಾಮೇಜ್ ಮಾಡಿಲ್ಲ ಎನ್ನಬಹುದು. ಪದವಿ ಶಿಕ್ಷಣದಲ್ಲಿ ನಾಟಕ ನಿರ್ದೇಶನ, ಏಕ ಪಾತ್ರಾಭಿನಯ ಮಾಡಿ ಮನೆಗೆ ಕಪ್ ಗೆದ್ದು ತಂದಿದ್ದು ಉಂಟು.
ಬೆಂಗಳೂರಿನ ಪ್ರತಿಷ್ಠಿತ ರಾಷ್ಟ್ರೀಯ ವಿದ್ಯಾಲಯ ಅರ್ ವಿ ಕಾಲೇಜಿನಲ್ಲಿ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ ಸ್ನಾತಕೋತ್ತರ ವಿದ್ಯಾಭ್ಯಾಸದಲ್ಲಿ “ಮಾರ್ಕೆಟಿಂಗ್ ಟೆಕ್ನಿಕ್ಸ್ ಆಫ್ ಡ್ರಾಮಾ ಥಿಯೇಟರ್ ಇನ್ ಕರ್ನಾಟಕ” ಎನ್ನುವ ವಿಷಯದ ಮೇಲೆ ನೀನಾಸಂ ,ರಂಗಶಂಕರ ಹಾಗೂ ವಿವಿಧ ರಂಗ ಶಾಲೆ ನಾಟಕ ಕಂಪನಿ ಸುತ್ತಾಡಿ ಪ್ರಾಜೆಕ್ಟ್ ವರ್ಕ್ ಮಾಡಿದ್ದಾರೆ.
ಓದು ಮುಗಿಯುತ್ತಿದ್ದಂತೆ 2013 ರಲ್ಲಿ ಆದರ್ಶ ಫಿಲ್ಮ್ ಇನ್ಸ್ಟಿಟ್ಯೂಷನ್ ಲ್ಲಿ ಒಂದು ವರ್ಷದ ಸಿನಿಮಾ ತರಬೇತಿಗೆ ಸೇರಿಕೊಂಡು ಸಿನೆಮಾ ಕಲಿಕೆಯಲ್ಲಿ ತೊಡಗಿಸಿಕೊಂಡಾಗ ಪ್ರಾಯೋಗಿಕ ಚಿತ್ರೀಕರಣದ ಅನುಭವ ಮತ್ತು ಕಲಿಕೆಗೆಂದು ಟೆಲಿಫಿಲ್ಮ್ಸ್ ನಿರ್ದೇಶಿಸಲು ಬಂದಿರುವ ನವೀನ್ ಸೋಮನಹಳ್ಳಿ ಹುಡುಗನ ಪ್ರತಿಭೆಯನ್ನು ಗುರುತಿಸಿ ತಮ್ಮೊಟ್ಟಿಗೆ ಕೆಲ್ಸ ಕಲಿಯಲು ಸೇರಿಸಿಕೊಂಡಿದ್ದು ಎಂ ಬಿ ಎ ಅಲ್ಲಿ ಕ್ಯಾಂಪಸ್ ಸೆಲೆಕ್ಷನ್ ಆದಷ್ಟೇ ಖುಷಿ ನೀಡಿತೆನ್ನುತ್ತಾರೆ, ಮುಂದೆ ಅವರೊಟ್ಟಿಗೆ ಉದಯ ಟಿವಿಯ ‘ರಾಗ ಅನುರಾಗ’ ಧಾರಾವಾಹಿಯಲ್ಲಿ ಸಹಾಯಕ ನಿರ್ದೇಶಕನಾಗಿ ಹಾಗೂ ಕಲರ್ಸ್ ಕನ್ನಡದ ‘ಶಾಂತಂ ಪಾಪಂ’ನಲ್ಲಿ ನಟನೆ ಸಹ ಮಾಡಿದ್ದಾರೆ. ಇಂತಿಪ್ಪ ಗುರುಪ್ರಸಾದ್ ಚಂದ್ರಶೇಖರ್ ರಚಿಸಿ ನಿರ್ದೇಶಿಸಿದ ‘ಗಾಂಧೀ ನೋಟು’ ಕಿರುಚಿತ್ರ ಆಯುಷ್ ಟಿವಿ ಶಾರ್ಟ್ ಫಿಲ್ಮ್ ಫೆಸ್ಟಿವಲ್ ನ ಅತ್ಯುತ್ತಮ ವಿಮರ್ಶಾತ್ಮಕ ಚಿತ್ರ ವಿಭಾಗದ ನಾಮಿನೇಷನ್ ಲ್ಲಿ ಒಂದಾಗಿರುತ್ತದೆ.
ಸಿ ಬಸವಲಿಂಗಯ್ಯ ಅವರ ನಿರ್ದೇಶನದ ‘ಮಲೆಗಳಲ್ಲಿ ಮದುಮಗಳು’ ನಾಟಕದ ಬ್ಯಾಕ್ ಸ್ಟೇಜ್ ಕೆಲಸಗಳಲ್ಲಿ ರಾತ್ರಿಯಡೀ ತೊಡಗಿಸಿಕೊಂಡಿದ್ದು, ಬ್ಯಾಟರಿ ಬಿಟ್ಟಿದ್ದು, ಟಿಕೇಟು ಕೊಟ್ಟಿದ್ದು ಮರೆಯಲಾಗದ ಅನುಭವಗಳೆನ್ನುತ್ತಾರೆ.
ಆನಂತರದಲ್ಲಿ ಪ್ರಿಯಾಂಕ ಉಪೇಂದ್ರ ಅಭಿನಯದ ಯೋಗಿ ದೇವಗಂಗೆ ನಿರ್ದೇಶನದ ಮಹಿಳಾ ಪ್ರಧಾನ ಚಿತ್ರ ‘ಸೆಕೆಂಡ್ ಹಾಫ್’ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರು. ಅಂದರೆ ಅವರು ಸಂಭಾಷಣೆ ಬರೆಯುವುದರೊಂದಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಮೊದಲ ಸಿನಿಮಾ ಅದಾಗಿತ್ತು.
ಕಳೆದ ಎರಡು ವರ್ಷ ಗಳಿಂದ ಖ್ಯಾತ ಚಿತ್ರ ಸಾಹಿತಿ ವಿ ನಾಗೇಂದ್ರ ಪ್ರಸಾದ್ ರವರ ಒಡನಾಟದಲ್ಲಿದ್ದು ಕಥೆ ಮತ್ತು ಸಿನೆಮಾ ಚರ್ಚೆಯಲ್ಲಿ ಭಾಗಿಯಾಗಿರುವುದು, ತಮ್ಮ ಕಥೆಗೆ ವಿ ನಾಗೇಂದ್ರ ಪ್ರಸಾದ್ ಮೆಚ್ಚುಗೆ ವ್ಯಕ್ತಪಡಿಸಿರುವುದು ಆತ್ಮ ವಿಶ್ವಾಸ ಹೆಚ್ಚಿಸಿದೆ ಎನ್ನುತ್ತಾರೆ ಗುರುಪ್ರಸಾದ್ ಚಂದ್ರಶೇಖರ್.
ಏಳು ವರುಷಗಳ ಸಿನಿಮಾ ಪ್ರಯಾಣದ ಏಳುಬೀಳುಗಳ ನಡುವೆ ಛೋಟು, ಗಾಂಧೀ ನೋಟು,ವೋಟ್ ಹಾಕ್ರೋ ವೋಟ್ ಹಾಕ್ರಿ,ಕನ್ನಡ ಕನ್ನಡಿ ಎನ್ನುವ ನಾಲ್ಕು ಸದಭಿರುಚಿಯ ಕಿರುಚಿತ್ರ ರಚಿಸಿ ನಿರ್ದೇಶಿಸಿದ್ದಾರೆ. ನಿಧಾನವಾಗಿ ಚಲಿಸಿ, 14th ಫೆಬ್ , ಪರಂವ ಚಿತ್ರಕ್ಕೆ ಸಂಭಾಷಣೆ,ಸಾಹಿತ್ಯ ಬರೆದು ಮುಗಿಸಿದ್ದಾರೆ.
ಯೋಗಿ ದೇವಗಂಗೆ ನಿರ್ದೇಶನದ ಗಾಂಧೀ ಮತ್ತು ನೋಟು ಚಿತ್ರಕ್ಕೆ ಸಂಭಾಷಣೆ ಬರೆದು ಪೂರ್ಣ ಪ್ರಮಾಣದ ಸಂಭಾಷಣೆಕಾರರಾಗಿ ಬಡ್ತಿ ಪಡೆದಿದ್ದಾರೆ.
ನಿಧಾನವಾಗಿ ಚಲಿಸಿ, ಗಾಂಧೀ ಮತ್ತು ನೋಟು ಚಿತ್ರಗಳು ತೆರೆಗೆ ಬರಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು ಕೋವಿಡ್ ಕಾರಣದಿಂದಾಗಿ ಸರಿಯಾದ ಸಮಯಕ್ಕೆ ಬಿಡುಗಡೆ ಮಾಡಲು ಕಾಯುತ್ತಿದ್ದಾರೆ ಚಿತ್ರ ತಂಡದವರು.
ಮನೆಯವರ ಮತ್ತು ಸ್ನೇಹಿತರು ಹಾಗೂ
ಸೆಕೆಂಡ್ ಹಾಫ್ , ಗಾಂಧೀ ಮತ್ತು ನೋಟು ಚಿತ್ರಕ್ಕೆ ಸಂಭಾಷಣೆ ಬರೆಯುದಕ್ಕೆ ಪ್ರೋತ್ಸಾಹ ನೀಡಿದ ಯೋಗಿ ದೇವಗಂಗೆಯವರನ್ನು ನೆನಪಿಸಿಕೊಳ್ಳಲು ಮರೆಯುದಿಲ್ಲ.
ಸಧ್ಯಕ್ಕೆ ರಾಘವ್ ಚಂದ್ರ ಪ್ರೊಡಕ್ಷನ್ಸ್ ಅಡಿಯಲ್ಲಿ ರಾಘವಚಂದ್ರರವರು ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಕಥೆ ಚಿತ್ರಕಥೆ ಸಂಭಾಷಣೆ ಬರೆಯಲು ತನ್ನ ತಂಡದೊಂದಿಗೆ ತಮ್ಮ ಮೊದಲ ಚಿತ್ರ ನಿರ್ದೇಶನದ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.