
ಹಾರರ್, ರೊಮ್ಯಾಂಟಿಕ್ ಕತೆ ಹೊಂದಿರುವ ‘ಟೆಡ್ಡಿ ಬೇರ್’ ಚಿತ್ರದ ಧ್ವನಿಸಾಂದ್ರಿಕೆ ಅನಾವರಣವಾಗಿದೆ. ಕಾರ್ಯಕ್ರಮವು ರೇಣುಕಾಂಬ ಸ್ಟುಡಿಯೋದಲ್ಲಿ ಸರಳವಾಗಿ ನಡೆಯಿತು.
ಭರತ್‌ಕುಮಾರ್ ಮತ್ತು ನವೀನ್ ರೇಗಟ್ಟಿ ಜಂಟಿಯಾಗಿ ಆದ್ಯಲಕ್ಷೀ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರ ಇದು. ಸಿಡಿ ಬಿಡುಗಡೆ ಮಾಡಿದ ಚಿತ್ರ ಸಾಹಿತಿ ಡಾ.ನಾಗೇಂದ್ರಪ್ರಸಾದ್ ಮಾತನಾಡಿ “ಒಂದು ಗ್ಯಾಪ್ ನಂತರ ಚಿತ್ರರಂಗದ ಚಟುವಟಿಕೆಗಳು ಶುರುವಾಗುತ್ತಿವೆ. ಬಿಡುಗಡೆಯಾಗಬೇಕಾದ ಸಿನಿಮಾಗಳು ಸಾಕಷ್ಟು ಇವೆ. ಯಾವ ಚಿತ್ರಗಳು ಬಲಿಯಾಗಬಾರದು. ನಿರ್ಮಾಪಕರು ತಾಳ್ಮೆಯಿಂದ ನಿಧಾನವಾಗಿ ತೆರೆಗೆ ತರುವುದು ಶ್ರೇಯ. ಹೊಸ ತಂಡದವರಿಗೆ ಒಳ್ಳೆಯದಾಗಲಿ. ಬಂಡವಾಳ ವಾಪಸ್ಸು ಬರಲಿ” ಎಂದು ಶುಭಹಾರೈಸಿದರು. ಬಾ.ಮ.ಹರೀಶ್ ಮತ್ತು ಉಮೇಶ್‌ಬಣಕಾರ್ ಇವರ ಮಾತಿಗೆ ಧ್ವನಿಗೂಡಿಸಿದರು.
ನವ ದಂಪತಿಗಳು ಮದುವೆಯಾದ ಸಂದರ್ಭದಲ್ಲಿ ಅದ್ಭುತವಾದ ಹೊಸ ಮನೆಗೆ ಹೋದಾಗ, ವಿಶಿಷ್ಟ, ವಿಚಿತ್ರ, ವಿನೋದ ಹಾಗೂ ಭಯಾನಕವಾದ ಸನ್ನಿವೇಶಗಳು ಎದುರಾಗುತ್ತದೆ. ಅಲ್ಲಿ ನಡೆಯುವಂಥ ಘಟನೆಗಳು ಯಾವ ರೀತಿ ಇರುತ್ತವೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕೆಂದು ಮೂರು ಹಾಡುಗಳಿಗೆ ಸಾಹಿತ್ಯ, ಸಂಗೀತ ಮತ್ತು ಸಹ ನಿರ್ಮಾಪಕರಾಗಿರುವ ಆರೋನ್ ಕಾರ್ತಿಕ್ ತಿಳಿಸಿದರು.
ಟಾಲಿವುಡ್‌ದಲ್ಲಿ ಸ್ಟಾರ್ ನಿರ್ದೇಶಕ ಪೂರಿಜಗನ್ನಾಥ್ ಅವರೊಡನೆ ಕೆಲಸ ಮಾಡಿ ಅನುಭವ ಪಡೆದುಕೊಂಡಿರುವ ಲೋಕೇಶ್.ಬಿ ರಚಿಸಿ, ಆಕ್ಷನ್ ಕಟ್ ಹೇಳಿದ್ದು, ಚಿತ್ರದ 80% ಚಿತ್ರೀಕರಣವು ಬೆಂಗಳೂರು, ಮಂಗಳೂರು ಮತ್ತು ಕುಶಾಲನಗರಗಳಲ್ಲಿ ನಡೆದಿದೆ ಎಂದು ನಿರ್ದೇಶಕರು ತಿಳಿಸಿದರು.
ಚಿತ್ರದ ನಾಯಕ ಭಾರ್ಗವ ಅವರಿಗೆ ಇದು ಮೂರನೆಯ ಚಿತ್ರ. ‘ ಸೈಕಾಲಜಿ ಕೌನ್ಸಿಲರ್’ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಕ್ರೈಂ ಪತ್ರಕರ್ತೆಯಾಗಿ ಲಿಖಿತಾ, ಪತ್ನಿಯಾಗಿ ಶೈಲಜಾಸಿಂಹ ನಾಯಕಿಯರು. ತಾರಾಗಣದಲ್ಲಿ ನಿಖಿಲ್, ವಿಘ್ನೇಶ್, ನವೀನ್ ಪಾಟೀಲ್, ಅಂಜಲಿ, ಅರವಿಂದ್ ಮುಂತಾದವರು ನಟಿಸಿದ್ದಾರೆ. ಛಾಯಾಗ್ರಹಣ ಕೃಷ್ಣಸಾರಥಿ-ನಿಖಿಲ್, ಸಂಕಲನ ಕುಮಾರ್-ನಾಗರಾಜ್, ಸಂಭಾಷಣೆ ಲೋಕೇಶ್-ಅಜಿತ್-ಭಾರ್ಗವ, ಸಾಹಸ ಅಲ್ಟಿಮೇಟ್ ಶಿವು, ಚಿತ್ರಕತೆ ನಿಖಿಲ್-ಮಂಜುಕಿರಣ್ ಅವರದಾಗಿದೆ. ಸಿರಿ ಮ್ಯೂಸಿಕ್ ಸಂಸ್ಥೆಯು ಆಡಿಯೋ ಸಿಡಿಯನ್ನು ಹೊರ ತಂದಿದೆ. ಆಡಿಯೋ ಸಿಡಿ ಬಿಡುಗಡೆ ಮತ್ತು ಮಾಧ್ಯಮಗೋಷ್ಠಿಗೂ ಮೊದಲು ಅನುರಾಧಭಟ್ ಗಾಯನದ ಲಿರಿಕಲ್ ವಿಡಿಯೋ ಹಾಡು ಮತ್ತು ಮೋಷನ್ ಪೋಸ್ಟರ್ ತೆರೆ ಮೇಲೆ ಪ್ರದರ್ಶಿಸಲಾಗಿತ್ತು.