ಕರ್ನಾಟಕ ಮಾಧ್ಯಮ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಸದಾಶಿವ ಶೆಣೈ ಅಧಿಕಾರ ಸ್ವೀಕರಿಸಿದ್ದಾರೆ. ಸಿನಿಮಾ ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಶೆಣೈ ಅವರು ಪ್ರಸ್ತುತ ಉನ್ನತ ಹುದ್ದೆಗೇರಿರುವುದಕ್ಕೆ ‘ciniಕನ್ನಡ’ದ ಅಭಿನಂದನೆಗಳು.
ಸದಾಶಿವ ಶೆಣೈ ಅವರು ಮೂಲತಃ ದಕ್ಷಿಣ ಕನ್ನಡದ ಬೆಳ್ತಂಗಡಿಯವರು. ಅವರ ವೃತ್ತಿಜೀವನ ಆರಂಭವಾಗಿದ್ದು, ಮುಂಜಾನೆ ದೈನಿಕದ ಮೂಲಕ. ಜಯಶೀಲ ರಾವ್ ಮಾರ್ಗದರ್ಶನದಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಇವರು ಪಿ ಲಂಕೇಶ್ ಅವರ ಗರಡಿಗೆ ಸೇರಿಕೊಂಡು ಅಲ್ಲಿ ಸುಮಾರು ಎರಡು ದಶಕಗಳ ಕಾಲ ವೃತ್ತಿಯಲ್ಲಿದ್ದರು. ಇದರ ನಡುವೆ ಅರಗಿಣಿ, ಮಾರ್ದನಿ, ಪಿಬಿಐ, ಎಐಆರ್ , ಬ್ಯಾಂಗಲೂರ್ ಬಯಾಸ್, ದೂರದರ್ಶನ ಮೊದಲಾದೆಡೆ ಅರೆಕಾಲಿಕ ವೃತ್ತಿ ಮಾಡಿದ್ದಾರೆ. ಚಿತ್ತಾರ ಸಿನಿಮಾ ಮಾಸಿಕದ ಸಂಪಾದಕರಾಗಿಯೂ ಕೆಲಸ ಮಾಡಿದ ಅನುಭವ ಇವರದಾಗಿದೆ.
‘ಪ್ರಾರ್ಥನೆ’ ಎನ್ನುವ ಸಿನಿಮಾ ನಿರ್ದೇಶನವನ್ನು ಮಾಡಿದ್ದಾರೆ. ‘ಮನೆಯೊಂದು ಮೂರು ಬಾಗಿಲು’ ಧಾರವಾಹಿಯಲ್ಲಿ ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ‘ಪ್ರೆಸ್ ಕ್ಲಬ್ ಆಫ್ ಬೆಂಗಳೂರು’ ಇದರ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ‘ಅಕ್ಕ’ ಸಮ್ಮೇಳನದ ಅತಿಥಿಯಾಗಿ ಅಮೆರಿಕ ಪ್ರವಾಸ ಮಾಡಿದ್ದಾರೆ. ಕರ್ನಾಟಕ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಶಿವರಾಜ್ ಕುಮಾರ್ ಅವರ ಆತ್ಮಚರಿತ್ರೆ ‘ಮುತ್ತುರಾಜನ ಮುತ್ತು’, ಅಮೃತ ಮಹೋತ್ಸವದ ಪುಸ್ತಕ ಮಾಲಿಕೆ ‘ಶಂಕರ್ ನಾಗ್’, ವಿಷ್ಣುವರ್ಧನ್ ಅವರ ‘ನೂರೊಂದು ನೆನಪು’, ‘ಮುಗಿಯದಿರಲಿ ಬಂಧನ’, ಉಪೇಂದ್ರ ಅವರ ‘ಉಪ್ಪಿ ಅನ್ ಲಿಮಿಟೆಡ್’ ಮೊದಲಾದವು ಇವರ ಪ್ರಕಟಿತ ಕೃತಿಗಳು. ರವಿಚಂದ್ರನ್, ಜಯಂತಿ ಮೊದಲಾದವರ ಆತ್ಮಕಥೆಗಳನ್ನು ಲಂಕೇಶ್ ಪತ್ರಿಕೆಯಲ್ಲಿ ನಿರೂಪಿಸಿದ ಕೀರ್ತಿ ಇವರದು.
ಪ್ರಸ್ತುತ ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷರಾಗಿ
ಸದಾಶಿವ ಶೆಣೈಯವರು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ
ಸದಸ್ಯರುಗಳಾದ ಶಿವಾನಂದ ತಗಡೂರು, ಕೆ ಕೆ ಮೂರ್ತಿ, ಶಿವಕುಮಾರ್ ಬೆಳ್ಳಿತಟ್ಟೆ ಹಾಗೂ ಕಾರ್ಯದರ್ಶಿಯಾದ
ರೂಪಾ ಅವರು ಉಪಸ್ಥಿತರಿದ್ದರು.