ಕಳೆದ ಒಂದಷ್ಟು ಸಮಯದಿಂದ ಕಳೆಮೂಡಿಸಿದ್ದ ದೃಶ್ಯ ವೈವಿಧ್ಯತೆಗಳೊಂದಿಗೆ ‘ಕಲಿವೀರ’ ಗುರುತಿಸಿಕೊಂಡಿತ್ತು. ಇದೀಗ ಕೋವಿಡ್ ಗೆ ಚಾಲೆಂಜ್ ಹಾಕಿ ತೆರೆಗೆ ಸಿದ್ಧವಾಗಿದೆ.
“ಸಾಲು ಸಾಲು ಚಿತ್ರಗಳ ನಡುವೆ ತಡವಾಗಿ ಬಂದರೆ ಕುರಿಯಂತೆ ಕಳೆದು ಹೋಗುವ ಸಾಧ್ಯತೆ ಇದೆ. ಹಾಗಾಗಿ ಅನಿಶ್ಚಿತತೆಯ ನಡುವೆ ಮೊದಲು ರಂಗಕ್ಕೆ ಇಳಿಯುವವನೇ ಧೈರ್ಯವಂತ. ಆ ಧೈರ್ಯವನ್ನು ನಾವು ಮಾಡಿದ್ದೇವೆ” ಎಂದರು ಚಿತ್ರದ ನಿರ್ದೇಶಕ ಅವಿರಾಮ್. ಚಿತ್ರವನ್ನು ಅವಿ ಎನ್ನುವ ಹೆಸರಿನಲ್ಲಿ ರಚಿಸಿ, ನಿರ್ದೇಶಿಸಿದ್ದು ಅವರು ಮಾಧ್ಯಮ ಗೋಷ್ಠಿಯಲ್ಲಿ ಚಿತ್ರತಂಡದೊಂದಿಗೆ ಮಾತನಾಡುತ್ತಿದ್ದರು.
“ಇದು ನನ್ನ ಮೊದಲ ಸಿನಿಮಾ. ಇಂಥ ದೊಡ್ಡ ಕ್ಷೇತ್ರ, ಸಿನಿಮಾ ನಾಯಕನ ಪಾತ್ರ ನನಗೆ ಸಿಗಬಹುದೆನ್ನುವ ನಿರೀಕ್ಷೆ ನಮಗೆ ಇರಲಿಲ್ಲ. ಆದರೆ ಎಲ್ಲವೂ ದೊರಕಿದೆ. ಚಿತ್ರ ನೋಡಿ ಪ್ರೇಕ್ಷಕರೂ ಮೆಚ್ಚುವಂತಾದರೆ ತುಂಬಾನೇ ಖುಷಿಯಾಗುತ್ತದೆ. ಪ್ರಸ್ತುತ ಪರಿಸ್ಥಿತಿ ಗಮನಿಸಿದರೆ ಇದೊಂದು ಪ್ರಯೋಗದ ಹಾಗೆ ಅನಿಸುತ್ತಿದೆ. ಈ ಪ್ರಯೋಗ ಯಶಸ್ವಿಯಾಗಲು ಕರ್ನಾಟಕದ ಜನರ ಪ್ರೀತಿ ಬೇಕಾಗಿದೆ” ಎಂದರು ಚಿತ್ರದ ನಾಯಕ ಏಕಲವ್ಯ. ಚಿತ್ರದಲ್ಲಿ ಏಕಲವ್ಯ ಅವರು ಆದಿವಾಸಿ ಜನಾಂಗದ ಯುವಕನ ಪಾತ್ರ ಮಾಡಿದ್ದಾರೆ. ತನ್ನ ಸಮುದಾಯಕ್ಕೆ ಆಗುವ ಅನ್ಯಾಯದ ವಿರುದ್ಧ ತಿರುಗಿ ನಿಂತು ಹೋರಾಡುವ ಯುವಕನ ಕತೆ ಈ ಚಿತ್ರದ್ದು. ಆ ಯುವಕನ ವರ್ತನೆ, ಸಾಹಸ ಮತ್ತು ಚಿತ್ರೀಕರಿಸಿರುವ ರೀತಿಗಳೇ ‘ಕಲಿವೀರ’ದ ಹೈಲೈಟ್.
ಚಿತ್ರದಲ್ಲಿ ಕಲಿವೀರನ ಜೋಡಿಯಾಗಿ ಕಾಣಿಸಿರುವ ಚಿರಶ್ರೀ ಅಂಚನ್ ಮಾತನಾಡಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವಂತೆ ಕೇಳಿಕೊಂಡರು.”ಒಳ್ಳೆಯ ಸಿನಿಮಾ ಬಂದಾಗ ಜನ ಖಂಡಿತ ಸ್ವೀಕರಿಸುತ್ತಾರೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ಚಿತ್ರವನ್ನು ಕೂಡ ಮೆಚ್ಚಿ ಬರುತ್ತಾರೆ ಎಂದು ಚಿತ್ರ ಯಶಸ್ವಿಯಾಗುವ ಭರವಸೆಯನ್ನು ಚಿತ್ರದ ನಾಯಕಿ ಪಾವನಾ ಗೌಡ ವ್ಯಕ್ತಪಡಿಸಿದರು.
ಅತಿಥಿಯಾಗಿ ಆಗಮಿಸಿದ್ದ ಚಿತ್ರತಂಡದ ಹಿತೈಷಿ ಹಾಗೂ ವಾಣಿಜ್ಯ ಮಂಡಳಿಯ ಕಾರ್ಯದರ್ಶಿಯೂ ಆಗಿರುವ ಉಮೇಶ್ ಬಣಕಾರ್ ಸೇರಿದಂತೆ ಚಿತ್ರದ ಹಂಚಿಕೆದಾರ ವಿಜಯ್ ಶ್ರೀನಿವಾಸ್ ಕೂಡ ‘ಚಿತ್ರವನ್ನು ಈಗ ಬಿಡುಗಡೆಗೊಳಿಸುವುದು ರಿಸ್ಕ್’ ಎಂದು ಸೂಚಿಸಿದರೂ ನಿರ್ಮಾಪಕ ಶ್ರೀನಿವಾಸ್ ಕೆಎಂಪಿಯವರು ಚಿತ್ರ ಬಿಡುಗಡೆಗೊಳಿಸುವುದೇ ಉತ್ತಮ ಎನ್ನುವ ತೀರ್ಮಾನಕ್ಕೆ ಬಂದಿರುವುದಾಗಿ ತಿಳಿಸಿದರು. ಮಾಧ್ಯಮಗೋಷ್ಠಿಯಲ್ಲಿ ಹಂಚಿಕೆದಾರ ವಿಜಯ್ ಶ್ರೀನಿವಾಸ್,ನಿರ್ಮಾಪಕ ರಾಜು ಪೂಜಾರ್, ಬಸಪ್ಪಣ್ಣ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ಸಾಕಷ್ಟು ಸಾಹಸ ದೃಶ್ಯಗಳನ್ನು ಹೊಂದಿರುವ ಈ ಸಿನಿಮಾದಲ್ಲಿ ಟಿ.ಎಸ್ ನಾಗಾಭರಣ, ನೀನಾಸಂ ಅಶ್ವಥ್, ರಾಕ್ಲೈನ್ ಸುಧಾಕರ್, ರಮೇಶ್ ಪಂಡಿತ್, ಮೋಹನ್ ಜುನೇಜಾ, ಅನಿತಾ ಭಟ್, ಡ್ಯಾನಿ ಕುಟ್ಟಪ್ಪ, ಮುನಿ, ಸುರೇಶ್ ಚಂದ್ರ ಮೊದಲಾದವರು ನಟಿಸಿರುವುದು ಗಮನಾರ್ಹ. ಇದೇ ಶುಕ್ರವಾರ ಆಗಸ್ಟ್ 6ರಂದು ಸಿನಿಮಾ ಬಿಡುಗಡೆಯಾಗುತ್ತಿದೆ.