ಜನಪ್ರಿಯ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದಂಥ ‘ಎದೆ ತುಂಬಿ ಹಾಡುವೆನು’ ರಿಯಾಲಿಟಿ ಶೋ ಮರಳಿ ಬರುತ್ತಿರುವ ವಿಚಾರ ‘ಕಲರ್ಸ್’ ವಾಹಿನಿಯ ಪ್ರೊಮೊ ಮೂಲಕ ಎಲ್ಲರೂ ತಿಳಿದಿರುತ್ತೀರಿ. ಅದರ ವಿಶೇಷ ಮಾಧ್ಯಮಗೋಷ್ಠಿ ಇಂದು ಸಂಜೆ ನೆರವೇರಿತು.
ಹದಿನಾರು ವರ್ಷಗಳ ಕಾಲ ಎಸ್ಪಿಬಿಯವರ ನೇತೃತ್ವದಲ್ಲಿ ನಿರಂತರವಾಗಿ ಸಾಗಿ ಬಂದ ಕಾರ್ಯಕ್ರಮ ‘ಎದೆ ತುಂಬಿ ಹಾಡುವೆನು’. ಒಂಬತ್ತು ವರ್ಷಗಳ ಹಿಂದೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ ಕಾರ್ಯಕ್ರಮ ಮತ್ತೆ ಶುರು ಮಾಡುವಾಗ ಅವರಿಲ್ಲ. ಆದರೆ ಆ ಅನುಬಂಧವನ್ನು ಈ ಸರಣಿಯಲ್ಲಿ ಕಾಯ್ದುಕೊಳ್ಳುವಂತೆ ಅವರ ಪುತ್ರ ಗಾಯಕ ಎಸ್ ಪಿ ಚರಣ್ ಅವರು ಬಂದು ಮೊದಲ ಸಂಚಿಕೆಯಲ್ಲಿ ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು.
ಆಗಸ್ಟ್ 14ನೇ ತಾರೀಖಿನಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಶೋ ನೋಡಬಹುದಾಗಿದೆ.
ಈ ಸೀಸನ್ನಿನ ತೀರ್ಪುಗಾರರಾಗಿ ಹೆಸರಾಂತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್, ಜನಪ್ರಿಯ ಸಂಗೀತ ಹರಿಕೃಷ್ಣ ಹಾಗೂ ಖ್ಯಾತ ಗಾಯಕ ರಘು ದೀಕ್ಷಿತ್ ಇರುತ್ತಾರೆ. ಹಿಂದಿನ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದಲ್ಲಿ ಎಸ್ಪಿಬಿ ಎದುರು ಹಾಡಿದ 60 ಹಳೆಯ ಗಾಯಕರು ಜ್ಯೂರಿ ರೂಪದಲ್ಲಿ ಆಡಿಷನ್ನಿನ ಭಾಗವಾಗಿರುವುದು ವಿಶೇಷ. ಮೆಗಾ ಅಡಿಷನ್ನಿನಲ್ಲಿ 30 ಸ್ಪರ್ಧಿಗಳು ಪಾಲ್ಗೊಳ್ಳಲಿದ್ದು, ಅದರಲ್ಲಿ ಹದಿನಾರು ಅತ್ಯುತ್ತಮ ಗಾಯಕರು ಆಯ್ಕೆಯಾಗಲಿದ್ದಾರೆ.
”ಎಸ್ಪಿಬಿ ಇಲ್ಲದೆ ‘ಎದೆ ತುಂಬಿ ಹಾಡುವೆನು ನಡೆಸುವುದು ಒಂದು ಭಾವಪೂರ್ಣ ಸವಾಲು. ಅವರ ಆಶೀರ್ವಾದದೊಂದಿಗೆ ನಾವಿದನ್ನು ಸಂಗೀತ ಸಂಸ್ಕೃತಿಗಳ ಸಂಗಮವಾಗುವಂತೆ ರೂಪಿಸಲು ಯತ್ನಿಸುವುದಾಗಿ” ವಯಾಕಾಮ್ 18 ಕಲರ್ಸ್ ಕನ್ನಡ ಕ್ಲಸ್ಟರ್ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಹೇಳಿದ್ದಾರೆ.