ಸಂದೇಶ ನೀಡಲಿರುವ ‘ಯೆಲ್ಲೋ ಬೋರ್ಡ್’

ಯೆಲ್ಲೋ ಬೋರ್ಡ್ ಎಂದೊಡನೆ ಕ್ಯಾಬ್ ಗಳ ನೆನಪಾಗುವುದು ಸಹಜ. ಕ್ಯಾಬ್ ಡ್ರೈವರ್ ವಿಚಾರವನ್ನೇ ಪ್ರಮುಖವಾಗಿಸಿಕೊಂಡು ಮಾಡಿರುವ ‘YELLOW ಬೋರ್ಡ್’ ಚಿತ್ರದ ಸುದ್ದಿಗೋಷ್ಠಿ ಇತ್ತೀಚೆಗೆ ರೇಣುಕಾಂಬ ಪ್ರಿವ್ಯು ಥಿಯೇಟರಲ್ಲಿ ನೆರವೇರಿತು.

ಒಬ್ಬ ಟ್ಯಾಕ್ಸಿ ಡ್ರೈವರ್ ಕನಸು ಮತ್ತು ಅದರ ನಡುವೆ ಅನಿರೀಕ್ಷಿತವಾಗಿ ಪ್ರೀತಿ, ಪ್ರೇಮ ಹಾಗೂ ಅದರ ನಡುವೆ ಸಿಡಿಲಿನಿಂತೆ ಎರಗುವ ಕಷ್ಟ ಎಲ್ಲವನ್ನು ಪ್ರೇಕ್ಷಕರಿಗೆ ಬಹಳ ಆಪ್ತವಾಗುವಂತೆ ಹೇಳುವ ಹೊಸ ಪ್ರಯತ್ನ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ. ನಾಯಕನಾಗಿ ನಟಿಸಿರುವ ಪ್ರದೀಪ್ “ಪಾತ್ರಕ್ಕಾಗಿ ತಿಂಗಳ ಕಾಲ ಕ್ಯಾಬ್ ನಲ್ಲಿ ಓಡಾಡಿ ಅಭ್ಯಾಸ ಮಾಡಿಕೊಂಡಿದ್ದೇನೆ. ಡ್ರೈವರ್ ಗಳು ಚಿತ್ರ ನೋಡಬೇಕಾದರೆ ಅವರಿಗೂ ನಾನೊಬ್ಬ ಡ್ರೈವರ್ ಹಾಗೆ ಕಾಣಿಸಬೇಕು ಎನ್ನುವ ಪ್ರಯತ್ನ ಮಾಡಿದ್ದೇನೆ” ಎಂದಿದ್ದಾರೆ. ‘ಟೈಗರ್’ ಚಿತ್ರದ ಬಳಿಕ ಒಂದಷ್ಟು ಗ್ಯಾಪ್ ತೆಗೆದುಕೊಂಡು ಬರುತ್ತಿರುವ ತಮಗೆ ಚಿತ್ರದ ಬಗ್ಗೆ ಸಾಕಷ್ಟು ಭರವಸೆ ಇದೆ ಎಂದು ಅವರು ಹೇಳಿದ್ದಾರೆ.

ನಿರ್ದೇಶಕ ತ್ರಿಲೋಕ್ ರೆಡ್ಡಿ ಮೊದಲು ಐಟಿಯಲ್ಲಿ ಕೆಲಸ ಮಾಡುತ್ತಿದ್ದವರು. ಅಲ್ಲಿದ್ದಾಗಲೇ ಯೆಲ್ಲೋ ಬೋರ್ಡ್ ಕ್ಯಾಬ್ ಡ್ರೈವರ್ ಗಳ ಕಷ್ಟದ ಬಗ್ಗೆ ಅರಿತುಕೊಂಡಿದ್ದರಂತೆ. “ಸಾಧಾರಣ ಡ್ರೈವರ್ ಒಬ್ಬನನ್ನು ಪರಿಸ್ಥಿತಿ ಹೇಗೆ ಹೀರೋ ಮಾಡುತ್ತದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಸಮಾಜದ ಸುಧಾರಣೆಗೆ ಎಲ್ಲೊಬೋರ್ಡ್ ಡ್ರೈವರ್ ಗಳೇ ಪ್ರಯತ್ನಿಸಿದರೆ ಸುಲಭದಲ್ಲಿ ಪರಿಹಾರ ಕಾಣಬಹುದು ಎನ್ನುವ ಸಂದೇಶ ಚಿತ್ರದಲ್ಲಿದೆ” ಎನ್ನುವುದು ನಿರ್ದೇಶಕರ ಮಾತು.

ಚಿತ್ರದ ನಾಯಕಿ ಅಹಲ್ಯಾ ಸುರೇಶ್ ಅಹಲ್ಯಾ ಸುರೇಶ್ ತಮ್ಮ ಪಾತ್ರದ ಹೆಸರು ಪ್ರಿಯಾ. ತುಂಬ ತರಲೆ ಮಾಡುವ ಪಾತ್ರ. ಪಾತ್ರಕ್ಕಾಗಿ ಹೇರ್ ಸ್ಟೈಲ್ ಕೂಡ ಬದಲಿಸಿದ್ದೇನೆ. ಕಾರ್ ಡ್ರೈವಿಂಗ್ ಎಂದರೇನೇ ಭಯ ಇತ್ತು. ಚಿತ್ರದಲ್ಲಿ ಹೆಚ್ಚಿನ ದೃಶ್ಯಗಳು ಕಾರಲ್ಲೇ ಇದ್ದವು. ಹಾಗಾಗಿ ಹಗಲು ಕಾರಿನ ಶೂಟಿಂಗ್ ಆದರೆ ರಾತ್ರಿ ಮನೆಯಲ್ಲಿ ಹೇರ್ ಸ್ಟೈಲ್ ಬದಲಾವಣೆ.. ಹೀಗೆ ಎರಡೂ ಸೇರಿ ಚಿತ್ರಕ್ಕಾಗಿ ತುಂಬಾನೇ ಸಮಯ ನೀಡಿದ್ದೇನೆ ಎಂದರು. ಮತ್ತೋರ್ವ ನಟಿ ನಟಿ ಸ್ನೇಹಾ ಮೊನಿಶಾ ಪಾತ್ರ ನಿಭಾಯಿಸಿದ್ದು, ಚಿತ್ರವು ಹಲವಾರು ಭಾವಗಳ ಸಂಗಮವಾಗಿ ಮೂಡಿ ಬಂದಿದೆ ಎಂದರು. ‘ರಿವೈಂಡ್’ ಸಿನಿಮಾ ಖ್ಯಾತಿಯ ನಾಯಕಿ ಚಂದನಾ ರಾಘವೇಂದ್ರ ಅವರು ಕೂಡ ಸಿನಿಮಾದಲ್ಲೊಂದು ಪಾತ್ರ ನಿಭಾಯಿಸಿರುವುದಾಗಿ ತಿಳಿಸಿದರು.

ಹಾಸನ, ಮಂಡ್ಯದಲ್ಲಿ ಸಂಚರಿಸುವ ಕ್ಯಾಬ್ ಡ್ರೈವರ್ ಪಾತ್ರ ಮಾಡಿದ್ದೇನೆ ಎಂದು ಯುವನಟ ಅಶ್ವಿನ್ ಹಾಸನ್ ಹೇಳಿದರು. ಮತ್ತೋರ್ವ ನಟ, ಕಿರುತೆರೆ ನಿರೂಪಕ ಅಮಿತ್ ತಾವು ಕೂಡ ಕ್ಯಾಬ್ ಡ್ರೈವರ್ ಪಾತ್ರ ಮಾಡಿದ್ದು ಅದಕ್ಕೆಂದೇ ಕಾರ್ ಕಲಿತುಕೊಂಡೆ ಎಂದರು. ಹುಬ್ಬಳ್ಳಿಯ ಚಾಲಕನೋರ್ವ ಬೆಂಗಳೂರಲ್ಲಿ ಡ್ರೈವರಾಗಿ ಹೇಗಿರುತ್ತಾನೆ, ಆತನ ಸಿನಿಮಾ ಅಭಿಮಾನ, ಕನ್ನಡ ಅಭಿಮಾನ ಹೇಗಿರುತ್ತದೆ ಎನ್ನುವುದನ್ನು ತಮ್ಮ ಪಾತ್ರ ತೋರಿಸಿದೆ ಎಂದು ಅಮಿತ್ ಹೇಳಿದರು.

ನಟಿ ಭವಾನಿ ಪ್ರಕಾಶ್ ಮಾತನಾಡಿ, “ಎಲ್ಲರೂ ಖಳನಾಯಕಿಯ ಪಾತ್ರ ನೀಡುತ್ತಿದ್ದರು. ಆದರೆ ಇದರಲ್ಲಿ ಅವೆಲ್ಲಕ್ಕಿಂತ ವಿಭಿನ್ನವೆನಿಸುವ ಲಾಯರ್ ಪಾತ್ರ ಮಾಡಿದ್ದೇನೆ. ನಾಯಕ ಪ್ರದೀಪ್ ಹಾಲಲ್ಲಿ ಅದ್ದಿದ ಮಗುವಿನಂತೆ ಕಾಣಿಸುತ್ತಿದ್ದಾರೆ ” ಎಂದು ಪ್ರಶಂಸಿಸಿದರು.

Recommended For You

Leave a Reply

error: Content is protected !!
%d bloggers like this: