
ಸಿನಿಮಾ ನಿರ್ದೇಶಕನಾಗಲು ಬಯಸುವ ಸಹಾಯಕ ನಿರ್ದೇಶಕನ ಕತೆ ಹೇಳುವ ಸಿನಿಮಾ ‘ಓಶೋ’. ಚಿತ್ರದ ಹೆಸರು ಮತ್ತು ಕತೆಗಿರುವ ಸಂಬಂಧ ಮತ್ತಿತರ ವಿಷಯಗಳ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಚಿತ್ರ ತಂಡ ನೀಡಿದ ಮಾಹಿತಿಗಳು ಇಲ್ಲಿವೆ.
“ಓಶೋ ಚಿತ್ರದ ಮೂಲಕ ನಾನು ಒಂದಷ್ಟು ಫಿಲಾಸಫಿ ಹೇಳಲು ಹೊರಟಿದ್ದೇನೆ. ಹಾಗಾಗಿ ಕ್ಯಾಚಿಯಾಗಿರುತ್ತದೆ ಎಂದು ಈ ಶೀರ್ಷಿಕೆ ಇರಿಸಿದೆ” ಎಂದರು ನಿರ್ದೇಶಕ ಜಿಯಾ ಉಲ್ಲಾ ಖಾನ್. ಅವರು ಈ ಹಿಂದೆ ಜೋಗಿ ಪ್ರೇಮ್ ಅವರ ಸಹಾಯಕರಾಗಿ ವೃತ್ತಿಯಲ್ಲಿದ್ದವರು. ಇದೀಗ ಸ್ವತಂತ್ರ ನಿರ್ದೇಶಕರಾಗಿದ್ದು ಸಹಾಯಕ ನಿರ್ದೇಶಕನೋರ್ವ ನಿರ್ದೇಶನಕ್ಕೆ ಹೋದಾಗ ಎದುರಿಸಬೇಕಾದ ಪ್ರತಿಯೊಂದು ವಿಚಾರಗಳನ್ನು ಇರಿಸಿಕೊಂಡು ಚಿತ್ರ ಮಾಡಿರುವುದಾಗಿ ತಿಳಿಸಿದರು.
ಚಿತ್ರದಲ್ಲಿ ನಿರ್ದೇಶಕನ ಪಾತ್ರ ಮಾಡುವ ಮೂಲಕ ನಾಯಕರಾಗಿ ಪದಾರ್ಪಣೆ ಮಾಡಿರುವ ಆನಂದ್ ಇಟಗಿ ಮೂಲತಃ ರಂಗಭೂಮಿಯಿಂದ ಬಂದವರು. ನಾಯಕಿಯಾಗಿ ನವನಟಿ ದೀಪಾ ಶ್ರೀ ಗೌಡ ಅಭಿನಯಿಸಿದ್ದು “ಪಾತ್ರಕ್ಕಾಗಿ ಸ್ಮೋಕಿಂಗ್ ಕಲಿತಿದ್ದೇನೆ. ಸಿಗರೇಟ್, ಹುಕ್ಕಾ ಸೇದಿ ಅಭ್ಯಾಸ ಮಾಡಿಕೊಂಡೆ. ಆದರೆ ಆನಂತರ ಬಿಟ್ಟುಬಿಟ್ಟಿದ್ದೇನೆ” ಎಂದು ನಕ್ಕರು. ಅಂದಹಾಗೆ ಸ್ಮೋಕ್ ಮಾಡುವ ದೃಶ್ಯಗಳು ಚಿತ್ರದ ಒಂದಷ್ಟು ಭಾಗದಲ್ಲಿ ಮಾತ್ರ ಇದ್ದು ಉಳಿದಂತೆ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುವ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ ಎಂದರು. ಚಿತ್ರದಲ್ಲಿ ನಾಯಕನಿಗೆ ಬೆಂಬಲವಾಗಿ ನಿಲ್ಲುವ ಏಕೈಕ ಪಾತ್ರ ತಮ್ಮದು ಎನ್ನುವುದು ದೀಪಾ ಶ್ರೀಯ ಹೆಮ್ಮೆ.
ಚಿತ್ರದಲ್ಲಿ ಬರುವ ಸೆನ್ಸಾರ್ ಅಧಿಕಾರಿಯ ಪಾತ್ರವನ್ನು ನಿರ್ದೇಶಕ ಗಿರಿರಾಜ್ ನಿರ್ವಹಿಸಿರುವುದು ವಿಶೇಷ. ನಿರ್ದೇಶಕರಿಂದ ಬೈಸಿಕೊಳ್ಳುವ ಪಾತ್ರ ತಮ್ಮದು ಎಂದು ಅವರು ಹೇಳಿದರು. ಆದರೆ ಚಿತ್ರದ ಟ್ರೇಲರ್ ಪ್ರದರ್ಶಿಸಿದಾಗ ಗಿರಿರಾಜ್ ಅವರೇ ಬೈಯ್ಯುವ ಸನ್ನಿವೇಶ ಇತ್ತು ಎನ್ನುವುದು ವಿಶೇಷ.
ಚಿತ್ರದ ನಿರ್ಮಾಪಕ ರಮೇಶ್ ಗ್ಯಾನಗೌಡರ್, ಅನಂತ್ ಇಟಗಿ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.