ಈ ವಿಲನ್ ಸುದೀಪ್ ಫ್ಯಾನ್!

ಸಿನಿಮಾ ನೋಡಿದವರೆಲ್ಲ ತಾವು ಕೂಡ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಬೇಕು ಎಂದುಕೊಳ್ಳುವುದು ಸಹಜ. ಆದರೆ ಅದನ್ನೇ ಗಂಭೀರವಾಗಿ ತೆಗೆದುಕೊಂಡು ಆ ನಿಟ್ಟಿನಲ್ಲಿ ಪ್ರಯತ್ನಿಸುವವರು ವಿರಳ. ಆದರೆ ಹಾಗೆ ಚಿತ್ರ‌ರಂಗ ಪ್ರವೇಶಿಸಿ ಗುರುತಿಸಿಕೊಂಡವರ ಪಟ್ಟಿಯಲ್ಲಿ ಈ ಯುವ ನಟ ಕೂಡ ಸೇರುತ್ತಾರೆ. ಹೆಸರು ಶೋಯೆಬ್ ಇಮ್ರಾನ್ ಅಹಮ್ಮದ್. ಆದರೆ ಸಿನಿಮಾದಲ್ಲಿ ಇಮ್ರಾನ್ ತುಮಕೂರು ಎಂದೇ ಗುರುತಿಸಿಕೊಂಡ ಇವರಿಗೆ ನಟನಾಗಲು ಸ್ಫೂರ್ತಿಯಾಗಿದ್ದು ಸುದೀಪ್!

‘ಹುಚ್ಚ’ ಸಿನಿಮಾ ನೋಡಿದಾಗಿನಿಂದಲೇ ಸುದೀಪ್ ಬಗ್ಗೆ ಹುಚ್ಚು ಅಭಿಮಾನ ತುಂಬಿಕೊಂಡ ಈ ಹುಡುಗ ಎಂದಾದರೊಮ್ಮೆ ಅವರನ್ನು ಭೇಟಿಯಾಗಲೇಬೇಕು ಎನ್ನುವ ಅಭಿಮಾನ ಇರಿಸಿಕೊಂಡಿದ್ದ. ಹಾಗಂತ ಆಗಲೇ ಹೊರಡಲಿಲ್ಲ. ತಾಯಿ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕಿ. ಹಾಗಾಗಿ ಮನೆಯವರ ಒತ್ತಡದಿಂದ ಬಿ ಎಸ್ ಸಿ ದ್ವಿತೀಯ ವರ್ಷದ ತನಕ ಕಾಲೇಜು ವಿದ್ಯಾರ್ಥಿಯಾಗಿ ಮುಂದುವರಿದ ಇಮ್ರಾನ್ ಗೆ ಯಾವುದೋ ಆಸಕ್ತಿ ಇರಿಸಿಕೊಂಡು ಈ ಕ್ಷೇತ್ರದಲ್ಲಿ ಮುಂದುವರಿಯಲು ಇಷ್ಟವಾಗಲಿಲ್ಲ. ಕಿಚ್ಚ ಹತ್ತಿಸಿದ ಕಿಚ್ಚಿನಿಂದ ತಾನು ಕೂಡ ನಟನಾಗಲು ಬೆಂಗಳೂರಿಗೆ ಹೊರಟರು.

ಆಸೆಯಿಂದ ಬಂದೊಡನೆ ಸಿನಿಮಾರಂಗದಲ್ಲಿ ಅವಕಾಶ ಸಿಗಬೇಕಲ್ಲ? ಆರಂಭದಲ್ಲೇ ದೊಡ್ಡಬಾಗಿಲು ತೆರೆಯದಿದ್ದರೇನು, ಚಿಕ್ಕ ಬಾಗಿಲೇ ಸಾಕು ಎಂದು ಕಿರುತೆರೆಯ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶ ಪಡೆದರು ಇಮ್ರಾನ್. ಎಲ್ಲ ಹೊಸಬರಂತೆ ಅವರಿಗೂ ಕೂಡ ಹಲವಾರು ಪ್ರಯತ್ನಗಳ ಬಳಿಕ ಸಣ್ಣಪುಟ್ಟ ಅವಕಾಶಗಳು ದೊರಕತೊಡಗಿತು. ಮೊದಲು ಬಣ್ಣಹಚ್ಚಿದ್ದು ಉದಯ ಟಿವಿಯ ‘ಬ್ರಹ್ಮಾಸ್ತ್ರ’ ಧಾರಾವಾಹಿಯಲ್ಲಿ.
ಬಳಿಕ ಉದಯ ವಾಹಿನಿಯದ್ದೇ ‘ಕಣ್ಮಣಿ’ ಧಾರಾವಾಹಿ, ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿಯಾದ ‘ಅಗ್ನಿಸಾಕ್ಷಿ’, ಉದಯದಲ್ಲಿ ‘ಜೋ ಜೋ‌ಲಾಲಿ’ ಮತ್ತು ಸ್ಟಾರ್ ಸುವರ್ಣ ವಾಹಿನಿಯ ಸೂಪರ್ ಹಿಟ್ ‘ಅಮೃತವರ್ಷಿಣಿ’ ಸೇರಿದಂತೆ
ಸುಮಾರು ಹದಿನೆಂಟು ಧಾರಾವಾಹಿಗಳಲ್ಲಿ ವಿವಿಧ ರೀತಿಯ ಪಾತ್ರಗಳನ್ನು ಮಾಡಿದ್ದಾರೆ ಇಮ್ರಾನ್. ಇವುಗಳೊಂದಿಗೆ ನಾಲ್ಕೈದು ಸಿನಿಮಾಗಳಲ್ಲಿಯೂ‌ ನಟಿಸಿದ್ದಾರೆ. ಅಶೋಕ್ ಅವರ ನಿರ್ದೇಶನದ ‘ಆತಂಕ’ ದಲ್ಲಿ‌ ನಟಿಸಿರುವುದಾಗಿ ತಿಳಿಸುವ ಇಮ್ರಾನ್ ಅದರಲ್ಲಿ ಸುರೇಶ್ ರೈಯವರು ನಾಯಕರಾಗಿರುವುದಾಗಿ ಹೇಳುತ್ತಾರೆ. ಇದರ ನಡುವೆ ಅಶೋಕ್ ಅವರದೇ ನಿರ್ದೇಶನದ ಬಹುಭಾಷಾ ಚಿತ್ರವೊಂದರಲ್ಲಿಯೂ ಅವಕಾಶ ಪಡೆದುಕೊಂಡಿರುವ ಖುಷಿ ಅವರಿಗಿದೆ. ‘ಸತ್ಯಂ’ ಹೆಸರಿನ ಆ ಸಿನಿಮಾ ತೆಲುಗು, ಕನ್ನಡ ಮತ್ತು ಭಾಷೆಗಳಲ್ಲಿ ತಯಾರಾಗುತ್ತಿದ್ದು ಅದರಲ್ಲಿ ರೌಡಿ ತಂಡದಲ್ಲೊಬ್ಬನಾಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಹೆಮ್ಮೆಯಿಂದಲೇ ಹೇಳಿಕೊಳ್ಳುತ್ತಾರೆ. ಇದರೊಂದಿಗೆ ‘ಕಾಂಚಿ’ ಎನ್ನುವ ಚಿತ್ರದಲ್ಲಿಯೂ ಪ್ರಮುಖ ಪಾತ್ರವೊಂದನ್ನು ಮಾಡುತ್ತಿದ್ದು, ಅದರಲ್ಲೂ ಸುರೇಶ್ ರೈಯವರೊಂದಿಗೆ ಸಸ್ಪೆನ್ಸ್ ಪಾತ್ರವನ್ನು ನಿಭಾಯಿಸುವ ಅವಕಾಶ ದೊರಕಿದೆ ಎಂದು ಸಂಭ್ರಮಿಸುತ್ತಾರೆ.

“ನನಗೆ ಇದುವರೆಗೆ ಹೆಚ್ಚಾಗಿ ದೊರಕಿರುವುದೆಲ್ಲ ರೌಡಿ ಪಾತ್ರ‌. ಆ ಬಗ್ಗೆ ನನಗೆ ಬೇಸರವಿಲ್ಲ. ವಿಲನ್ ಆದರೂ ಜನ ಗುರುತಿಸುವಂಥ ಪಾತ್ರಗಳು ಹೆಚ್ಚು ಸಿಕ್ಕರೆ ಸಾಕು” ಎನ್ನುವುದು ಇಮ್ರಾನ್ ಆಶಯ. ತಮ್ಮೆಲ್ಲ ಪ್ರಯತ್ನಗಳಿಗೆ ತಾಯಿಯವರ ಆಶೀರ್ವಾದ ಇದೆ‌ ಎನ್ನುವ ಇಮ್ರಾನ್ ಅವರು ದಶಕದ ಹಿಂದೆಯೇ ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ.

ಪ್ರಸ್ತುತ ‘ಜೈಕರ್ನಾಟಕ ಜನಪರ ವೇದಿಕೆ’ಯಲ್ಲಿಯೂ ಸಕ್ರಿಯರಾಗಿರುವುದಾಗಿ ಹೇಳುವ ಇಮ್ರಾನ್ ಅದರ ಸಂಸ್ಥಾಪಕ ಅಧ್ಯಕ್ಷ ಅನುಷ್ಕಾ ಶೆಟ್ಟಿ ಸಹೋದರ ಎನ್ನುವ ಮಾತು ಹೇಳುವಾಗ ಪುಳಕಿತರಾಗುತ್ತಾರೆ! ಬಣ್ಣದ ನಂಟು ಅವರ ಉಸಿರಲ್ಲೇ ಸೇರಿಕೊಂಡಿರುವುದಕ್ಕೆ ಅದೇ ಸಾಕ್ಷಿ! ಇದರೊಂದಿಗೆ ತುಮಕೂರು ಬಿಜೆಪಿ ಅಲ್ಪ ಸಂಖ್ಯಾತರ ಘಟಕದಲ್ಲಿ ನಗರ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿರುವ ಇಮ್ರಾನ್ ತುಮಕೂರು ಕಲಾರಂಗದಲ್ಲಿ ಹೆಚ್ಚು ಗುರುತಿಸುವಂತಾಗಲಿ ಎನ್ನುವುದೇ ನಮ್ಮ ಆಶಯ.

Recommended For You

Leave a Reply

error: Content is protected !!
%d bloggers like this: