ಒಂದೇ ಟೇಕ್ ನಲ್ಲಿ ಸಿನಿಮಾವೊಂದನ್ನು ಚಿತ್ರೀಕರಿಸಿ ದಾಖಲೆ ಮಾಡಿರುವ ನಿರ್ದೇಶಕ ಡಾ.ಸಂಪತ್ ಕುಮಾರ್ ಸಿನಿಮಾವನ್ನು ಈ ವಾರ ತೆರೆಗೆ ತರುತ್ತಿದ್ದಾರೆ.
ರಾಜೇಂದ್ರ ಸಿಂಗ್ ಬಾಬು, ಪಿ ಎಚ್ ವಿಶ್ವನಾಥ್ ಅವರ ಬಳಿ ಅಸೋಸಿಯೇಟಾಗಿ ಕೆಲಸ ಮಾಡಿರುವ ಡಾ.ಸಂಪತ್ ಕುಮಾರ್ ಅವರು ಪ್ರಥಮ ಬಾರಿ ನಿರ್ದೇಶಿಸಿರುವ ಸಿನಿಮಾ ‘ಸಹಿಷ್ಣು’. “ಚಿತ್ರಕ್ಕೆ ಎರಡು ವರ್ಷಗಳ ಹಿಂದೆಯೇ ಸೆನ್ಸಾರ್ ‘ಯು’ ಸರ್ಟಿಫಿಕೇಟ್ ನೀಡಿದ್ದರೂ ಕೊರೊನಾ ಕಾರಣ ಚಿತ್ರವನ್ನು ತಡವಾಗಿ ಬಿಡುಗಡೆ ಮಾಡಲಾಗುತ್ತಿದೆ. ಇದೊಂದು ಪ್ರಯೋಗಾತ್ಮಕ ಚಿತ್ರವಾಗಿದ್ದು ನಾನೇ ನಾಯಕನಾಗಿ ನಟಿಸಿದ್ದೇನೆ. ಐ ಫೋನ್ ನಲ್ಲಿ ಒಂದೇ ಶಾಟ್ ಮೂಲಕ ಎರಡು ಗಂಟೆಗಳ ಕಾಲ ಚಿತ್ರೀಕರಿಸಿರುವ ಸಿನಿಮಾ ಎನ್ನುವ ಕಾರಣದಿಂದಾಗಿ ಇದು ಇಂದು ವಿಶ್ವದ ಗಮನವನ್ನೇ ಸೆಳೆದಿದೆ. ಕನ್ನಡದ ಸಿನಿಮಾವೊಂದು ಹೀಗೆ
‘ಗೋಲ್ಡನ್ ಬುಕ್ ಆಫ್ ರೆಕಾರ್ಡ್’ ಸೇರಿರುವುದು ಇದೇ ಪ್ರಥಮ” ಎಂದರು ಸಂಪತ್ ಕುಮಾರ್.
ಚಿತ್ರದಲ್ಲಿ ಮತ್ತೊಂದು ಪ್ರಧಾನ ಪಾತ್ರವಾದ ಕಿಡ್ನಾಪರ್ ಆಗಿ ನಟಿಸಿರುವ ಹಿರಿಯ ನಟ ವಿಶ್ವನಾಥ್ ಅವರು ಕೂಡ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದು ನಿರ್ದೇಶಕರ ಪ್ರಯತ್ನವನ್ನು ಮೆಚ್ಚಿ ಮಾತನಾಡಿದರು.
ಒಂದೇ ಶಾಟ್ ಆದರೂ ಮಡಿಕೇರಿಯ ನಾನಾ ಭಾಗಗಳಲ್ಲಿ ಚಿತ್ರಿಸಲಾಗಿದೆ. ಸಿನಿಮಾದಲ್ಲಿ ಪ್ಲಾಶ್ ಬ್ಯಾಕ್ ಒಳಗೊಂಡಿರುವ ಹೊಡೆದಾಟದ ದೃಶ್ಯಕೂಡ ಇರುವುದು ವಿಶೇಷ. ಚಿತ್ರವು ಇಂಡಿಯಾ ಬುಕ್ ಆಫ್ ರೆಕಾರ್ಡನಲ್ಲಿಯೂ ಆಲ್ ಟೈಮ್ ದಾಖಲೆ ಮಾಡಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿ ಹಾಗೂ ಮೆಚ್ಚುಗೆಗೆ ಪಾತ್ರವಾಗಿದೆ. ಸಿನಿಮಾದಲ್ಲಿ ಮಾನವೀಯತೆ ಮನುಷ್ಯತ್ವವನ್ನ ಪ್ರತಿಪಾದಿಸುವ ಕಥಾ ಹಂದರ ಹೊಂದಿದ್ದು ಸಿನಿಮಾ ವೀಕ್ಷಿಸಿದ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮೆಚ್ಚುಗೆ ಸೂಚಿಸಿದ್ದಾರೆ. ನಿರ್ದೇಶನದ ಜೊತೆಗೆ ಚಿತ್ರದ ನಿರ್ಮಾಣವನ್ನು ಕೂಡ ಸಿಲ್ವರ್ ಸ್ಕ್ರೀನ್ ಸಿನಿಮಾಸ್ ಬ್ಯಾನರ್ ಮೂಲಕ ಮಾಡಿರುವ ಚಿತ್ರಕ್ಕೆ ಪ್ರೇಕ್ಷಕರು ನೀಡುವ ಪ್ರತಿಕ್ರಿಯೆ ಬಗ್ಗೆ ಕುತೂಹಲ ಹೊಂದಿದ್ದಾರೆ.