ಜಿಮ್ ರವಿಯವರು ದೇಹದಾರ್ಢ್ಯತೆಗೆ ಹೆಸರು. ಆದರೆ ನಾಯಕನಾಗಿರುವ ಸಿನಿಮಾದಲ್ಲಿ ಅವರ ಕಲಾರಾಧನೆ ಕಂಡು ‘ಕಲಾಂಜನೇಯ’ ಎನ್ನುವ ಬಿರುದು ನೀಡಿದವರು ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್.
‘ಪುರುಷೋತ್ತಮ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ನಾಯಕ ಜಿಮ್ ರವಿಯವರ ಬಗ್ಗೆ ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಅವರಿಗೆ ಹೇಳಲು ಹಲವಾರು ವಿಚಾರಗಳಿತ್ತು. ಚಿತ್ರದ ಶೀರ್ಷಿಕೆಗೆ ನಿಜದಲ್ಲಿಯೂ ಹೊಂದುವ ವ್ಯಕ್ತಿ ಜಿಮ್ ರವಿಯವರು. ಯಾಕೆಂದರೆ ಗಂಡಹೆಂಡತಿಯ ವಿಚಾರ ಬಂದಾಗ ತಾವು ಇದುವರೆಗೆ ಒಂದು ಬಾರಿಯೂ ಪತ್ನಿಯಲ್ಲಿ ಜಗಳಮಾಡಿಲ್ಲ. ನನ್ನ ತಪ್ಪಾಗಿದ್ದಾಗಲೆಲ್ಲ ನಾನೇ ‘ಸಾರಿ’ ಕೇಳಿದ್ದೇನೆ. ಹಾಗಾಗಿ ವಾದ ವಿವಾದಗಳೂ ನಡೆದಿಲ್ಲ ಎಂದರಂತೆ. ಅದರಿಂದ ಸ್ಫೂರ್ತಿಗೊಂಡ ಶ್ರೀಧರ್ ಅವರು ತಾವು ಕೂಡ ತಪ್ಪಾದಾಗ ಪತ್ನಿಯಲ್ಲಿ ಕ್ಷಮೆ ಕೇಳುವ ಅಭ್ಯಾಸ ಬೆಳೆಸಿಕೊಂಡಿದ್ದಾಗಿ ಹೇಳಿದರು. ಹಾಗಾಗಿ ಚಿತ್ರದಲ್ಲಿನ ಗಂಡಹಂಡತಿಯ ನಡುವಿನ ರಸಮಯ ಗೀತೆಗೆ ಸಂಗೀತ ನೀಡಲು ರವಿಯವರೇ ಸ್ಫೂರ್ತಿ ಎಂದರು.
ಶೀರ್ಷಿಕೆ ಗೀತೆಯ ಮಾದರಿಯಲ್ಲಿ ಸಿದ್ಧವಾಗಿರುವ “ಉತ್ತಮರಲ್ಲಿ ಉತ್ತಮನಿವನು..” ಎನ್ನುವ ಹಾಡು ಖಂಡಿತವಾಗಿ ನಿಮಗೆಲ್ಲ ಇಷ್ಟವಾಗಬಹುದು ಎಂದುಕೊಂಡಿದ್ದೇನೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಎರಡನ್ನು ನಿರ್ದೇಶಕರಾದ ಅಮರನಾಥ್ ಅವರೇ ಬರೆದಿದ್ದಾರೆ. ಇನ್ನೆರಡು ಹಾಡುಗಳನ್ನು ಆನಂದಪ್ರಿಯ ಮತ್ತು ಪ್ರಮೋದ್ ಮರವಂತೆ ಬರೆದಿದ್ದಾರೆ. ಅರುಂಧತಿ ವಸಿಷ್ಠ, ಚೇತನ್ ನಾಯಕ್, ವಿಹಾನ್ ಆರ್ಯ ಮೊದಲಾದವರು ಧ್ವನಿಯಾಗಿದ್ದಾರೆ ಎಂದು ತಂಡವನ್ನು ವೇದಿಕೆಗೆ ಕರೆದು ಪರಿಚಯಿಸಿದರು ಶ್ರೀಧರ್ ಸಂಭ್ರಮ್.
ಆಡಿಯೋ ಬಿಡುಗಡೆ ಮಾಡಲು ಅತಿಥಿಯಾಗಿ ಆಗಮಿಸಿದ ಶರಣ್ ಅವರು ಮಾತನಾಡಿ, “ರವಿಯವರ ಜಿಮ್ ನಲ್ಲೇ ನಾನು ತರಬೇತಿ ಪಡೆದಿದ್ದೆ. ಅವರು ತುಂಬ ಶಿಸ್ತಿನ ಶಿಕ್ಷಕ. ಹಾಗಾಗಿಯೇ ನಾನು ಭಯಪಟ್ಟು ಅವರಿಲ್ಲದ ದಿನಗಳಲ್ಲೇ ತರಬೇತಿಗೆ ಹಾಜರಾಗುತ್ತಿದ್ದೆ. ನೂರು ಚಿತ್ರಗಳ ಬಳಿಕ ನಾಯಕನಾಗಿ ನಟಿಸಿದ ನನ್ನ ದಾಖಲೆಯನ್ನು ಮುರಿದು ತಮ್ಮ 150ನೇ ಚಿತ್ರದ ಬಳಿಕ ಅವರು ನಾಯಕರಾಗಿದ್ದಾರೆ. ಆದರೂ ಇದೇ ನನ್ನ ಮೊದಲ ಚಿತ್ರ ಎನ್ನುವ ವಿನಯವಂತಿಕೆ ಅವರಲ್ಲಿದೆ. ಶ್ರೀಧರ್ ಬೈಯ್ಯ ಸಂಗೀತವಂತೂ ಯಾವಾಗಲೂ ಚೆನ್ನಾಗಿಯೇ ಇರುತ್ತದೆ. ‘ವಿಕ್ಟರಿ’ ಪಾರ್ಟ್ ಸೆಕೆಂಡಲ್ಲಿ ನನ್ನೊಂದಿಗೆ ನಟಿಸಿದ್ದ ‘ಅಪೂರ್ವ’ ಅವರ ಡೆಡಿಕೇಶನ್ ಬಗ್ಗೆ ಗೊತ್ತು. ಈ ಕಾಂಬಿನೇಶನ್ ಗೆ ಶುಭಾಶಯಗಳು” ಎಂದರು. ಬಳಿಕ ಮಾತನಾಡಿದ ಅಪೂರ್ವ ಅವರು
“ಕತೆ ಕೇಳಿದ ಕೂಡಲೇ ಈ ಚಿತ್ರ ಮಾಡಬೇಕು ಎಂದುಕೊಂಡೆ. ಪಾತ್ರದ ಮೂಲಕ, ಚಿತ್ರದ ಮೂಲಕ ಉತ್ತಮ ಸಂದೇಶ ನೀಡಲಾಗಿದೆ. ಜೊತೆಗೆ ರವಿ ಸರ್, ಅವರ ಪತ್ನಿ ಜ್ಯೋತಿ ಮೇಡಂ ಕೂಡ ನನಗೆ ಈ ಪಾತ್ರ ಹೆಸರು ತಂದುಕೊಡಬಹುದು ಎನ್ನುವ ಭರವಸೆ ತುಂಬಿದ್ದಾರೆ. ಶ್ರೀಧರ್ ಸರ್ ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ನಿರ್ಮಾಪಕರು ಚಿತ್ರಕ್ಕೆ ಯಾವುದೇ ಕೊರತೆಯಾಗದಂತೆ ಚಿತ್ರೀಕರಿಸಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದರು.
ಮೂಲತಃ ಮೈಸೂರಿನಲ್ಲಿ ಉದ್ಯಮಿಯಾಗಿರುವ ತಮಗೆ ರವಿಯವರು ನಾಲ್ಕೈದು ವರ್ಷಗಳಿಂದ ಆತ್ಮೀಯರು. ಅವರು ನಟ ಎನ್ನುವುದಕ್ಕಿಂತಲೂ ದೇಶವನ್ನು ಪ್ರತಿನಿಧಿಸಿದ ಕ್ರೀಡಾಪಟು. ಹಾಗಾಗಿ ಅವರಾಸೆಯಂತೆ ಒಂದೊಳ್ಳೆಯ ಕತೆ ಸಿಕ್ಕಾಗ ಅವರನ್ನು ನಾಯಕರನ್ನಾಗಿ ಮಾಡುವ ಬಗ್ಗೆ ನಾನು ಹೆಚ್ಚು ಯೋಚಿಸಲಿಲ್ಲ ಎಂದು ನಿರ್ಮಾಪಕ ಬೂಕನಕೆರೆ ವಿಜಯರಾಮೇಗೌಡ ಹೇಳಿದರು. ಮೈಸೂರಿನಿಂದ ಬಂದಿದ್ದ ಯುವ ನಟಿ ನಿವೇದಿತಾ ಮಾತನಾಡಿ ಚಿತ್ರದಲ್ಲಿ ತಾವು ಪತ್ರಕರ್ತೆಯ ಪಾತ್ರ ಮಾಡಿರುವುದಾಗಿ ತಿಳಿಸಿದರು.
ನೃತ್ಯ ನಿರ್ದೇಶಕ ಕಲೈ ಮಾಸ್ಟರ್ ಮಾತನಾಡಿ, “ನನ್ನನ್ನು ಮೊದಲು ಡ್ಯಾನ್ಸ್ ಮಾಸ್ಟರ್ ಮಾಡಿದ್ದೇ ಈ ಚಿತ್ರದ ನಿರ್ದೇಶಕರು. ಚಿತ್ರದ ನಾಯಕ ರವಿಯವರದು ಜಿಮ್ ದೇಹ ಎನ್ನುವುದು ಚಾಲೆಂಜಿಂಗ್ ಆಗಿತ್ತು. ಆದರೆ ಅವರದು ನಾಟಿ ಬಾಡಿ. ಹಾಡು ಹಾಕಿದಾಗಲೇ ಡ್ಯಾನ್ಸ್ ಗೆ ರೆಡಿಯಾಗ್ತಿದ್ರು. ಹಾಡುಗಳು ಚೆನ್ನಾಗಿ ಬಂದಿವೆ” ಎಂದರು. ನಿರ್ದೇಶಕ ಅಮರನಾಥ್ ಎಸ್ ವಿಯವರಿಗೆ ಇದು ಮೂರನೇ ಚಿತ್ರ. “ಇದೊಂದು ಸಾಂಸಾರಿಕ ಕತೆ. ಫೆಬ್ರವರಿಯಲ್ಲಿ ಮುಹೂರ್ತ ಮಾಡಿದ್ದೆವು. ಇದೀಗ ಚಿತ್ರ ಡಬ್ಬಿಂಗ್ ಹಂತದಲ್ಲಿದೆ. ಇದೇ ವೇಗದಲ್ಲಿ ಮುಂದುವರಿದರೆ ಎರಡು ತಿಂಗಳೊಳಗೆ ಚಿತ್ರ ಬಿಡುಗಡೆ ಮಾಡಬಹುದು” ಎನ್ನುವುದು ಅಮರನಾಥ್ ಅನಿಸಿಕೆಯಾಗಿದೆ.