
ಬರ್ಕ್ಲಿ ಚಿತ್ರಕ್ಕಾಗಿ ಬಹದೂರ್ ಚೇತನ್ ಬರೆದಿರುವ ಹಾಡಿನ ಲಿರಿಕಲ್ ವರ್ಶನ್ ಬಿಡುಗಡೆಯಾಗಿದೆ. ಸಂತೋಷ್ ಬಾಲರಾಜ್ ನಾಯಕನಾಗಿರುವ ಬರ್ಕ್ಲಿ ಚಿತ್ರಕ್ಕೆ ನಿರ್ದೇಶಕರು ಸುಮಂತ್ ಕ್ರಾಂತಿ.
ಸಂಜಿತ್ ಹೆಗ್ಡೆಯ ಕಂಠದಲ್ಲಿನ ಒಂದು ಹಾಡು ನಿನ್ನೆಯಿಂದ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ. ಜ್ಯೂಡಾ ಸ್ಯಾಂಡಿ ಸಂಗೀತದಲ್ಲಿ ಮೂಡಿಬಂದ ಈ ಗೀತೆಯನ್ನು ಗಣೇಶೋತ್ಸವದ ಪ್ರಯುಕ್ತ ಬಿಡುಗಡೆ ಮಾಡಲಾಗಿದೆ. ಸಂತೋಷ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆನೇಕಲ್ ಬಾಲರಾಜ್ ನಿರ್ಮಿಸಿರುವ ಬರ್ಕ್ಲಿ ಚಿತ್ರದ ಪ್ರಥಮಪ್ರತಿ ಸದ್ಯದಲ್ಲೇ ತಯಾರಾಗಲಿರುವ ಮಾಹಿತಿ ದೊರಕಿದೆ.
‘ಕರಿಯ’, ‘ಗಣಪ’, ‘ಕರಿಯ 2’ ಸಿನಿಮಾಗಳನ್ನು ನಿರ್ಮಿಸಿರುವ ಆನೇಕಲ್ ಬಾಲರಾಜ್ ಅವರ ನಿರ್ಮಾಣದ ಮತ್ತೊಂದು ಅದ್ದೂರಿ ಚಿತ್ರವಾಗಿ ‘ಬರ್ಕ್ಲಿ’ ಮೂಡಿ ಬರುವ ನಿರೀಕ್ಷೆ ಇದೆ
ಪ್ರಥಮ ಚಿತ್ರ ‘ನಾನಿ’ಯ ಮೂಲಕ ಸುದ್ದಿ ಮಾಡಿದ್ದ ನಿರ್ದೇಶಕ ಸುಮಂತ್ ಕ್ರಾಂತಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಗಣಪ, ಕರಿಯ 2 ಚಿತ್ರಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ ಸಂತೋಷ್ ಬಾಲರಾಜ್ ಚಿತ್ರದ ನಾಯಕರಾಗಿದ್ದಾರೆ.
ಬಾಲ್ಯದಲ್ಲಿ ಕೇಂದ್ರ ಸರ್ಕಾರದ ನೋ ಸ್ಮೋಕಿಂಗ್ ಜಾಹೀರಾತಿನ ಮೂಲಕ ಬಾಲನಟಿಯಾಗಿ ಖ್ಯಾತರಾಗಿದ್ದ, ಸಿಮ್ರಾನ್ ನಾಟೇಕರ್ ಈ ಚಿತ್ರದ ನಾಯಕಿ. ಬಹುಭಾಷ ನಟ ಚರಣರಾಜ್, ಖ್ಯಾತ ನಟಿ ಶ್ರುತಿ, ಬಲ ರಾಜವಾಡಿ , ಬುಲೆಟ್ ಪ್ರಕಾಶ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ.
