ಹಳತಲ್ಲ! ಇದು ಹೊಸ ಬೆಲ್ ಬಾಟಮ್

ವಾವ್! “ಇಟ್ಸ್ ರಿಯಲಿ ನಾಟ್ ಓವರ್ ಅನ್ ಟಿಲ್ ಇಟ್ಸ್ ಓವರ್..!” ಒಬ್ಬ ರಾ(ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್) ಏಜೆಂಟ್ ಆಡುವ ಮಾತಿದು. ರಹಸ್ಯ ಕಾರ್ಯಾಚರಣೆ ನಡೆಸುವ ರಾ ಏಜೆಂಟ್‌ನ ಕಥೆಯೇ ಹೊಸತಾಗಿ, ಬಹಳ ಸಮಯದ ನಂತರ ಥಿಯೇಟರಿನಲ್ಲಿ ಬಿಡುಗಡೆಗೊಂಡ ಚಿತ್ರ ಬೆಲ್‌ ಬಾಟಮ್. ಸಿನಿಮಾದ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅಕ್ಷಯ್‌ ಒಬ್ಬ ರಾ ಏಜೆಂಟ್. ಅವನ ಕೋಡ್‌ನೇಮ್‌ ಚಿತ್ರದ ಶೀರ್ಷಿಕೆ; ಬೆಲ್ ಬಾಟಮ್.

ಇಂದಿರಾ ಗಾಂಧಿ ಪ್ರಧಾನಮಂತ್ರಿಯಾದಾಗ ಏಳು ವರ್ಷಗಳಲ್ಲಿ ಸತತ ಏಳನೇ ಬಾರಿಗೆ ಒಂದು ವಿಮಾನ ಅಪಹರಣವಾಗಿರುತ್ತದೆ. ಪಾಕಿಸ್ತಾನದ ಭಯೋತ್ಪಾದಕರ ಗುಂಪು ಈ ಕೆಲಸ ಮಾಡುತ್ತಿರುವುದೆಂದು ರಾ ಅವರಿಗೆ ತಿಳಿದುರುತ್ತದೆ. ಅದೇ ಕಾರಣದಿಂದ ಅವರಿಗೆ ಅಪಹರಣವಾದ ವಿಮಾನವನ್ನು ಮತ್ತು ಎಲ್ಲಾ ಜನರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಜವಾಬ್ದಾರಿ ಬರುತ್ತದೆ.

ಸುಮಾರು 210 ಪ್ರಯಾಣಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿರುತ್ತಾರೆ ಭಯೋತ್ಪಾದಕರು. ಅವರನ್ನು ರಕ್ಷಣೆ ಮಾಡುವ, ಭಯೋತ್ಪಾದಕರನ್ನು ಸೆರೆ ಹಿಡಿಯುವ ಸಾಹಸದ ಕಾರ್ಯವನ್ನು ಇಡೀ ಸಿನಮಾ ಕೇಂದ್ರೀಕರಿಸಿದೆ. ಕೋವಿಡ್ ಪ್ಯಾಂಡಮಿಕ್ ಸಮಯದಲ್ಲಿ ಭಾರತದ ಹಲವಾರು ಸ್ಥಳಗಳಲ್ಲಿ ಮತ್ತು ಸ್ಕಾಟ್‌ಲಾಂಡಿನಲ್ಲಿ ಕೂಡ ಸಿನಿಮಾದ ಚಿತ್ರೀಕರಣ ಮಾಡಲಾಗಿದ್ದು ಇದು ನೈಜ ಘಟನೆಯ ಆಧಾರಿತ ಎಂದು ನಿರ್ದೇಶಕರಾದ ರಂಜಿತ್ ತಿವಾರಿ ಹೇಳಿದ್ದಾರೆ.

ಅಕ್ಷಯ್ ಕುಮಾರ್ ತಮ್ಮ ಐವತ್ಮೂರನೇ ವಯಸ್ಸಿನಲ್ಲಿ ಕೂಡ ಒಬ್ಬ ಏಜೆಂಟ್‌ನ ಪಾತ್ರಕ್ಕೆ ಸೂಕ್ತ ವ್ಯಕ್ತಿ ಎನಿಸಿಕೊಂಡಿದ್ದಾರೆ. ಅವರ ಪಾತ್ರದ ಪರಿಚಯವೇ ಆಕರ್ಷಣೀಯವಾಗಿದೆ.
ಇಂದಿರಾ ಗಾಂಧಿ ಪಾತ್ರ ನಿರ್ವಹಿಸಿದ ಲಾರಾ ದತ್ತ ಹೃದಯಸ್ಪರ್ಶಿ ನಟನೆ ನೀಡಿದ್ದಾರೆ. ಅದ್ಭುತ ಮೇಕಪ್ ಮತ್ತು ಅಭಿನಯದಿಂದ ಥೇಟ್ ಇಂದಿರಾ ಗಾಂಧಿಯಂತೆ ಕಾಣಿಸಿಕೊಳ್ಳುವ ಆಕೆಯನ್ನು ನೋಡುತ್ತಿದ್ದರೆ ಲಾರದತ್ತ ಮರೆಯುತ್ತಾರೆ. ಆದಿಲ್ ಹುಸ್ಸೇನ್ ಮತ್ತು ಹುಮಾ ಖುರೇಷಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಅವರಿಂದ ಚಿತ್ರವು ಮತ್ತೊಂದು ಮಟ್ಟಕ್ಕೆ ಏರಿದೆ. ಮುಖ್ಯ ಭಯೋತ್ಪಾದಕನ ಪಾತ್ರ ನಿರ್ವಹಿಸಿದ ಝೈನ್ ಖಾನ್ ದುರ್ರಾನಿ ಕೂಡ ಅಮೋಘವಾಗಿ ಅಭಿನಯಿಸಿದ್ದಾರೆ. ಅಕ್ಷಯ್ ಕುಮಾರ್‌ನ ಪತ್ನಿಯ ಪಾತ್ರದಲ್ಲಿರುವ ವಾಣಿ ಕಪೂರ್ ತೆರೆಯ ಮೇಲೆ ಕಾಣಿಸಿಕೊಳ್ಳುವ ಸಮಯ ಕಡಿಮೆಯಾದರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಚಿತ್ರದಲ್ಲಿ ಅಕ್ಷಯ್ ಕುಮಾರ್ ರಾ ಸೇರಲು ತಮ್ಮ ಜೀವನದಲ್ಲಿ ನಡೆದ ಘಟನೆ, ಸ್ವಂತ ಅನುಭವವೊಂದು ಕಾರಣವಾಗಿರುತ್ತದೆ. ಆ ಅಂಶವನ್ನು ಭಾವನಾತ್ಮಕವಾಗಿ ತೋರಿಸಲಾಗಿದೆ. ಸುಮಾರು ನೂರಿಪ್ಪತ್ಮೂರು ನಿಮಿಷಗಳ ಕಾಲ ಓಡುವ ಸಿನಿಮಾದ ಗತಿ ಒಂದೇ ಲಯ ಕಾಪಾಡಿಕೊಂಡಿದೆ. ಪ್ರತಿ ನಿಮಿಷವನ್ನು ಗಮನವಿಟ್ಟು ನೋಡುವ ಹಾಗೆ ಮಾಡುವುದರಲ್ಲಿ ಚಿತ್ರವು ಯಶಸ್ವಿಯಾಗಿದೆ. ಆದರೆ ಸಣ್ಣ ಕೊರತೆಗಳು ಇದರಲ್ಲಿ ಕೂಡ ಕಾಣಬಹುದು. ಸಾಮಾನ್ಯವಾಗಿ ದೇಶಪ್ರೇಮದಂತಹ ಸಿನಿಮಾಗಳಲ್ಲಿ ಸಾಕಷ್ಟು ಭಾವನಾತ್ಮಕ ವಿಷಯಗಳು ಮನಸ್ಸಿಗೆ ಮುಟ್ಟುವಂತಿರುತ್ತದೆ, ರೋಮಾಂಚನಗೊಳಿಸುವಂತಿರುತ್ತದೆ. ಆದರೆ ಇದರಲ್ಲಿ ಆ ಸಂಗತಿಗಳ ಕೊರತೆ ಕಂಡುಬರುತ್ತದೆ. ಭಯೋತ್ಪಾದಕರ ಯೋಜನೆ, ತಯಾರಿ ಮತ್ತು ಅಪಹರಣವಾದ ಮೇಲೆ ಪ್ರಯಾಣಿಕರ ಸಂಕಟಗಳನ್ನು ತೋರಿಸಬಹುದಿತ್ತು ಎಂಬ ಅನಿಸಿಕೆ ಮೂಡುತ್ತದೆ. ಹಾಗೆ ಚಿತ್ರದ ಕ್ಲೈಮಾಕ್ಸ್ ಕೂಡ, ನೋಡುತ್ತಿದ್ದಂತೆಯೆ ಥಟ್ ಎಂದು ಮುಗಿದುಹೋಯಿತಾ? ಎಂದು ಅನಿಸುತ್ತದೆ. 1970ರ ಕಾಲದ ಕಥೆಯಾದ ಈ ಸಿನಿಮಾ ನಮ್ಮನ್ನು ಆ ಕಾಲಕ್ಕೆ ಕರೆದೊಯ್ಯುವಂತೆ ಮಾಡಿದ್ದಿದ್ದರೆ ಇನ್ನೂ ಉನ್ನತ ಮಟ್ಟಕ್ಕೆ ಚಿತ್ರವು ಏರುತ್ತಿತ್ತು ಅನಿಸುತ್ತದೆ.

ಇದೆಲ್ಲದರ ನಡುವೆ ಮನರಂಜನೆಗೆ ಯಾವುದೇ ಕೊರತೆ ಇಲ್ಲ. ಭಾರತದ ಇತಿಹಾಸದ ಅಪರೂಪದ ಘಟನೆಯೊಂದನ್ನು ಕಥೆಯಾಗಿ ಬರೆದ ಅಸೀಮ್ ಅರೋರ ಮತ್ತು ಪರ್ವೀಝ್ ಶೇಖ್ ಮಾಡಿರುವ ಕಾರ್ಯ ಶ್ಲಾಘನೀಯ. ಸಂಭಾಷಣೆಯಲ್ಲಿ ಕೂಡ ಹಲವಾರು ಆದರ್ಶವೆನಿಸುವ ಮಾತುಗಳನ್ನು ರಚಿಸಲಾಗಿದೆ. ಡಾನಿಯಲ್ ಬಿ ಜಾರ್ಜ್ ನೀಡಿದ ಹಿನ್ನಲೆ ಸಂಗೀತ ಚಿತ್ರದ ಶಕ್ತಿಯಾಗಿದೆ. ಹಲವಾರು ಘಟನೆಗಳಿಂದ ಆಕರ್ಷಿತವಾದ ಬೆಲ್ ಬಾಟಮ್ ಸಿನಿಮಾ ಒಂದು ಸ್ಫೂರ್ತಿದಾಯಕ ಸಿನಿಮಾವಾಗಿ ತನ್ನನ್ನು ತಾನು ರೂಪಿಸಿಕೊಂಡಿದೆ.

Recommended For You

Leave a Reply

error: Content is protected !!
%d bloggers like this: