ಕೆಜಿಎಫ್ ಚಿತ್ರ ನಿರ್ಮಿಸಿ ಜಗತ್ಪ್ರಸಿದ್ಧಗೊಂಡ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ಒಂದಷ್ಟು ಹೊಸ ಸಿನಿಮಾಗಳನ್ನು ಘೋಷಿಸುತ್ತಿದೆ. ಅವುಗಳಲ್ಲಿ ಇಂದು ಸುದ್ದಿಯಾಗಿರುವ ಚಿತ್ರರಾಘವೇಂದ್ರ ಸ್ಟೋರ್ಸ್’. ಚಿತ್ರದ ಮೂಲಕ ಹೊಂಬಾಳೆ ಬ್ಯಾನರ್‌ನಲ್ಲಿ ಜಗ್ಗೇಶ್ ಪ್ರಥಮ ಬಾರಿಗೆ ನಟಿಸುತ್ತಿದ್ದಾರೆ ಎನ್ನುವುದು ವಿಶೇಷ.
ರಾಘವೇಂದ್ರ ಸ್ಟೋರ್ಸ್’ ಎನ್ನುವುದು ಒಂದು ಕೌಟುಂಬಿಕ ಮನರಂಜನೆ ತುಂಬಿರುವ ಚಿತ್ರವಾದರೂ ರಾಜಕೀಯ ಹಾಸ್ಯ, ಸಾಮಾಜಿಕ ಸಂದೇಶ ಕೂಡ ಇರುವುದಾಗಿ ನಿರ್ಮಾಣ ಸಂಸ್ಥೆಯ ವಿಜಯ ಕಿರಗಂದೂರು ಅವರು ಪತ್ರಿಕಾ ಸಂದೇಶ ನೀಡಿದ್ದಾರೆ. ಈ ಹಿಂದೆ ಇದೇ ಬ್ಯಾನರ್‌ನಲ್ಲಿ ಪುನೀತ್ ರಾಜ್ ಕುಮಾರ್ ಅವರನ್ನುಯುವರತ್ನ’ರನ್ನಾಗಿಸಿದ ಸಂತೋಷ್ ಆನಂದ್ ರಾಮ್ ಈ ಚಿತ್ರವನ್ನೂ ನಿರ್ದೇಶಿಸುತ್ತಿದ್ದಾರೆ. ಸರಿಯಾಗಿ ಎರಡು ತಿಂಗಳ ಬಳಿಕ ಅಂದರೆ ನವೆಂಬರ್ 22ರಿಂದ ಈ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಜಗ್ಗೇಶ್ ಅವರು ಇದುವರೆಗೆ ಮಾಡಿರದ ಮಾದರಿಯ ಪಾತ್ರದ ಮೂಲಕ ಚಿತ್ರದಲ್ಲಿ ಕಾಣಿಸಲಿರುವುದಾಗಿ ನಿರ್ದೇಶಕ ಸಂತೋಷ್ ಆನಂದರಾಮ್ ಹೇಳಿರುವುದು ಕುತೂಹಲ ಮೂಡಿಸಿದೆ.

