
ರಾಜ್ ಕುಮಾರ್ ಕುಟುಂಬದ ಕುಡಿಯ ಸಿನಿಮಾ ಪ್ರವೇಶ ಎನ್ನುವ ಕಾರಣದಿಂದಲೇ ಸುದ್ದಿಯಾದ ಚಿತ್ರ ‘ನಿನ್ನ ಸನಿಹಕೆ’. ಚಿತ್ರದಲ್ಲಿ ಪೂರ್ಣಿಮಾ – ರಾಮ್ ಕುಮಾರ್ ದಂಪತಿಯ ಪುತ್ರಿ ಧನ್ಯಾ ನಾಯಕಿ. ಮಹೂರ್ತದಿಂದ ಹಿಡಿದು ಇಲ್ಲಿಯವರೆಗೆ ಚಿತ್ರದ ಟ್ರೇಲರ್ ಮತ್ತು ಹಾಡುಗಳು ಚಿತ್ರ ರಸಿಕರ ಗಮನ ಸೆಳೆದಿವೆ. ಇದೀಗ ಬಿಡುಗಡೆ ಪೂರ್ವ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಒಂದಷ್ಟು ವಿಚಾರಗಳನ್ನು ಮಾಧ್ಯಮದ ಜೊತೆಗೆ ಹಂಚಿಕೊಂಡಿದೆ.
ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಕೊಟ್ಟಿರದ ಧನ್ಯಾ ಇದೀಗ ” ಸಿನಿಮಾದಲ್ಲಿ ನನ್ನ ಹೆಸರು ಅಮೃತಾ. ಡೆಂಟಿಸ್ಟ್ ಪಾತ್ರ ಮಾಡಿದ್ದೀನಿ” ಎಂದು ಒಂದೊಂದೇ ಅಂಶಗಳನ್ನು ಹಂಚಿಕೊಂಡರು. “ಸ್ಟ್ರಾಂಗ್ ಆಂಡ್ ಇಂಡಿಪೆಂಡೆಂಟ್ ಹುಡುಗಿಯ ಪಾತ್ರ ನನ್ನದು. ಏನೇ ಇದ್ದರೂ ನೇರವಾದ ಮಾತುಕತೆ. ಅದು ನನ್ನ ಗುಣವೂ ಹೌದು. ಹಾಗಾಗಿ ಪಾತ್ರವನ್ನು ನಾನು ಮೆಚ್ಚಿಕೊಂಡಿದ್ದೇನೆ. ಪರದೆಯ ಮೇಲೆ ನಮ್ಮ ಜೋಡಿ ಚೆನ್ನಾಗಿ ಕಾಣಿಸುವುದಾಗಿ ತುಂಬ ಮಂದಿ ಹೇಳುತ್ತಾರೆ. ಅದಕ್ಕೆ ಕಾರಣ ಸೂರಜ್. ಸೂರಜ್ ಜೊತೆಗೆ ನನಗೆ ಕಂಫರ್ಟ್ ಇರುವ ಕಾರಣ, ಕ್ಯೂಟ್ ಕಪಲ್ ಆಗಿ ಕಾಣಲು ಸಾಧ್ಯವಾಗಿದೆ” ಎಂದರು ಧನ್ಯಾ ರಾಮ್ ಕುಮಾರ್.
ನಿನ್ನ ಸನಿಹಕೆ ಎನ್ನುವ ಕತೆ ಬರೆದು, ನಿರ್ದೇಶಿಸಿ, ನಾಯಕನಾಗಿಯೂ ನಟಿಸಿರುವ ಸೂರಜ್ ಎಲ್ಲ ವಿಭಾಗದ ಅನುಭವಗಳನ್ನು ಸೇರಿಸಿ ಮಾತನಾಡಿದರು. “ಈಗಿನ ಕಾಲದಲ್ಲಿ ಪ್ರೀತಿ ಹೊಸ ಮಜಲುಗಳನ್ನು ಪಡೆದುಕೊಂಡಿದೆ. ಲಿವಿಂಗ್ ರಿಲೇಶನ್ ಹೇಗಿರುತ್ತದೆ.ಕಾನೂನು ಒಪ್ಪಿದರೂ ಸಮಾಜ ಪೂರ್ತಿಯಾಗಿ ಒಪ್ಪಿಲ್ಲ. ಅದನ್ನು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಇದನ್ನು ಮ್ಯೂಸಿಕಲ್ ಆಗಿ ಮಾಡಿರುವುದರಲ್ಲಿ ರಘು ದೀಕ್ಷಿತ್ ಪಾತ್ರ ದೊಡ್ಡದು. ಅವರು ಸಂಗೀತ ನೀಡಿರುವುದಷ್ಟೇ ಅಲ್ಲ ಚಿತ್ರದ ಪ್ರಮೋಶನ್ ವಿಚಾರಗಳಲ್ಲಿಯೂ ಬೆನ್ನೆಲುಬಾಗಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದರು.
ಅದೇ ಸಂದರ್ಭದಲ್ಲಿ ಸಿನಿಮಾ ಬಿಡುಗಡೆ ಯಾಗುತ್ತಿರುವ ಎರಡನೇ ವಾರದಲ್ಲೇ ಎರಡು ಸ್ಟಾರ್ ಸಿನಿಮಾಗಳು ಬರುತ್ತಿರುವುದು ಆತಂಕ ತಂದಿದೆ ಎಂದರು. “ಹೀಗೆ ಆಗಬಹುದು ಎಂದು ನಿರೀಕ್ಷೆ ಮಾಡಿರಲಿಲ್ಲ. ಒಂದೇ ವಾರದಲ್ಲಿ ನಮ್ಮ ಯೋಗ್ಯತೆ ಪ್ರೂವ್ ಮಾಡಬೇಕಾದ ಸಂದರ್ಭ ಬಂದಿದೆ. ಇಬ್ಬರು ಸ್ಟಾರ್ ಸಿನಿಮಾ ಒಂದೇ ವಾರ ಬಂದಿರುವ ಕಾರಣ ಥಿಯೇಟರ್ ನಲ್ಲಿ ಕಷ್ಟವಾಗುವುದು ಖಚಿತ. ನಿರ್ಮಾಪಕರಲ್ಲಿ ವಿನಂತಿ ಮಾಡಲಿದ್ದೇನೆ..” ಎಂದರು.
ಚಿತ್ರದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರು “ಈಗಾಗಲೇ ಬಿಡುಗಡೆಯಾಗಿರುವ ಪ್ರತಿಯೊಂದು ಹಾಡು ಜನಪ್ರಿಯತೆ ಪಡೆದಿದೆ. ಒಳ್ಳೆಯ ಹಾಡುಗಳನ್ನು ಅಚ್ಚಗನ್ನಡದಲ್ಲಿ ಬರೆದ ವಾಸುಕಿ ವೈಭವ್ ಮತ್ತು ನನ್ನ ತಂಡದ ಪ್ರಯತ್ನ ಸಫಲವಾಗಿದೆ. ಸಂಜಿತ್ ಹೆಗ್ಡೆ, ಬಿನ್ನಿ ದಯಾಳ್, ರಕ್ಷಿತಾ ಸುರೇಶ್ ಮೊದಲಾದ ಗಾಯಕರು ಅದ್ಭುತವಾಗಿ ಹಾಡಿದ್ದಾರೆ” ಎಂದರು. ವೇದಿಕೆಯಲ್ಲಿ ತಮ್ಮ ಜೊತೆಗಿದ್ದ ಗಾಯನ ಪ್ರತಿಭೆಗಳನ್ನು ಪರಿಚಯಿಸಿದರು. ಗಾಯಕಿ ಐಶ್ವರ್ಯಾ ರಂಗರಾಜನ್ ಮಾತನಾಡಿ “ರಘು ದೀಕ್ಷಿತ್ ಅವರ ಸಂಗೀತದ ಹಾಡನ್ನು ಹಾಡಬೇಕು ಎನ್ನುವ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಈಡೇರಿತು” ಎಂದರು.
ಲವ್ ಮಾಕ್ಟೇಲ್ ನ ‘ಲವ್ ಯು ಚಿನ್ನಾ..’ ಹಾಡಿನ ಮೂಲಕ ಗುರುತಿಸಿಕೊಂಡ ಶ್ರುತಿ ವಿ ಎಸ್ ಅವರು ತಾವು ಸಂಜಿತ್ ಹೆಗ್ಡೆ ಜೊತೆಗೆ ಚಿತ್ರದ ಕವರ್ ಸಾಂಗ್ ಹಾಡಿರುವುದಾಗಿ ತಿಳಿಸಿ, ತುಂಬ ಕಂಫರ್ಟಬಲ್ ಫೀಲ್ ಮಾಡಿಸುವ ಸಂಗೀತ ನಿರ್ದೇಶಕರು ರಘು ದೀಕ್ಷಿತ್ ಎಂದು ತೃಪ್ತಿ ವ್ಯಕ್ತಪಡಿಸಿದರು. ಹಿಂದೂಸ್ಥಾನಿ ಸಂಗೀತ ಕ್ಷೇತ್ರದ ಯುವ ಗಾಯಕ ಸಿದ್ದಾರ್ಥ್ ಬೆಳ್ಮಣ್ಣು ನನ್ನಿಂದ ‘ನೀ ಪರಿಚಯ’ ಎನ್ನುವ ಗೀತೆ ಅದ್ಭುತ ಗೀತೆ ಹಾಡಿಸಿದ್ದಾರೆ ಎಂದರು.
‘ವೈಟ್ ಆ್ಯಂಡ್ ಗ್ರೇ ಪಿಕ್ಚರ್ಸ್’ ಬ್ಯಾನರ್ ನಲ್ಲಿ ‘ನಿನ್ನ ಸನಿಹಕೆ’ ಚಿತ್ರ ನಿರ್ಮಿಸಿರುವ ಅಕ್ಷಯ್ ರಾಜಶೇಖರ್ ಮತ್ತು ರಂಗನಾಥ್ ಕೂಡ್ಲಿಯವರು ಮಾತನಾಡಿ, “ಚಿತ್ರ ಬಿಡುಗಡೆ ಮುಂದೆ ಹೋದಾಗ ಮುಂಬೈನಿಂದ ಒಟಿಟಿಯವರು ಅವರಾಗಿಯೇ ಆಫರ್ ನೀಡಿದರೂ ನಾವು ಒಪ್ಪಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ನಮ್ಮ ಕಂಟೆಂಟ್ ಮೇಲಿರುವ ನಂಬಿಕೆ ಮತ್ತು ಧನ್ಯಾ ಅವರ ಪ್ರಥಮ ಸಿನಿಮಾ ಥಿಯೇಟರಲ್ಲೇ ಬರಬೇಕು ಎನ್ನುವ ನಮ್ಮ ಆಕಾಂಕ್ಷೆ” ಎಂದರು.