ಪ್ರಣತಿ ಆರ್ ಗಾಣಿಗ ಸಿನಿಮಾದಲ್ಲಿ ಹೆಸರು ಮಾಡುತ್ತಿದ್ದ ಯುವನಟಿ. ಅಷ್ಟು ಹೊತ್ತಿಗಾಗಲೇ ಮದುವೆಯಾಗಿ ತಾಯಿಯಾಗಿದ್ದಾರೆ, ಮಾತ್ರವಲ್ಲ ಮಗುವಿನ ನಾಮಕರಣ ಶಾಸ್ತ್ರದ ಚಿತ್ರಗಳನ್ನು ಸಿನಿಕನ್ನಡ.ಕಾಮ್ ಜೊತೆಗೆ ಹಂಚಿಕೊಂಡಿದ್ದಾರೆ.
ಪ್ರಣತಿಯವರು ಮದುವೆಯಾಗಿರೋದು ಛಾಯಾಗ್ರಾಹಕ ಗಣೇಶ್ ಕಿಣಿಯವರನ್ನು. ವರ್ಷಗಳ ಹಿಂದೆ ಯಾವುದೋ ಮದುವೆಯೊಂದರಲ್ಲಿ ಆದ ಭೇಟಿಯಿಂದಲೇ ಅವರಿಬ್ಬರ ಪರಿಚಯವಾಗಿತ್ತು. ಬಹುಶಃ ಆ ಮದುವೆಯಲ್ಲಿ ಗಣೇಶ್ ಕಿಣಿಯವರು ಮದುವಣಗಿತ್ತಿಗಿಂತ ಹೆಚ್ಚು ಫೊಟೊ ತೆಗೆದಿದ್ದು ಪ್ರಣತಿಯದ್ದೇ ಇರಬೇಕು. ಹಾಗೆ ಶುರುವಾದ ಸ್ನೇಹ ಪ್ರೇಮವಾಗಿ ಶಿವಮೊಗ್ಗದ ದೇವಾಲಯದಲ್ಲಿ ಮದುವೆಯೂ ಆಯಿತು. ಕಳೆದ ಲಾಕ್ಡೌನ್ ಸಮಯದಲ್ಲಿ ನಡೆದ ಮದುವೆಯಾದ ಕಾರಣ ಹೆಚ್ಚು ಮಂದಿಯನ್ನೇನೂ ಆಹ್ವಾನಿಸಿರಲಿಲ್ಲ. ಹಾಗಾಗಿ ಸೀಮಂತವನ್ನು ಭರ್ಜರಿಯಾಗಿಯೇ ಆಚರಿಸುವ ಕನಸು ಪ್ರಣತಿಗಿತ್ತು. ವಿಪರ್ಯಾಸವೆಂದರೆ ಅದು ನಡೆಯಲಿಲ್ಲ!
ಇತ್ತೀಚೆಗೆ ಫೊಟೋಶೂಟ್ ಎನ್ನುವುದು ಸೆಲೆಬ್ರಿಟಿಗಳಿಗಷ್ಟೇ ಸೀಮಿತವಲ್ಲ, ಆಸಕ್ತಿಯೊಂದಿದ್ದರೆ ಸಾಮಾನ್ಯರೂ ಮಿಂಚುತ್ತಿರುತ್ತಾರೆ. ಹಾಗಿರುವಾಗ ಕ್ಯಾಂಡಿಡ್ ಫೊಟೊಗ್ರಾಫರನ್ನೇ ಮದುವೆಯಾಗಿದ್ರೂ ಸೀಮಂತದ ವೇಳೆ ಫೊಟೊ ಶೂಟ್ ನಡೆಸಿಲ್ಲ.! ಯಾಕೆಂದರೆ ಪ್ರಣತಿಯವರ ಸೀಮಂತವೇ ನಡೆದಿರಲಿಲ್ಲ. ಅದಕ್ಕೊಂದು ಬಲವಾದ ಕಾರಣವಿತ್ತು. ಯಾಕೆಂದರೆ ಏಳುವರೆ ತಿಂಗಳ ಗರ್ಭಿಣಿಯಾಗಿದ್ದಾಗಲೇ ಅವಸರದ ಪ್ರಸವವಾಗಬೇಕೆಂದು ಡಾಕ್ಟರ್ ದಿಢೀರ್ ಒತ್ತಡ ಹಾಕಿದ್ದರು . ಆದರೆ ಅದೃಷ್ಟಕ್ಕೆ ಹುಟ್ಟಿದ ಮಗು ಈಗ ಸಮರ್ಥವಾಗಿ ಬೆಳೆದು ನಿಂತಿದ್ದಾನೆ. ಅದಕ್ಕೆ ಅನ್ವರ್ಥವೆಬಂತೆ ದಂಪತಿ ಮಗುವಿಗೆ ಸಮರ್ಥ್ ಎಂದೇ ನಾಮಕರಣ ಮಾಡಿದ್ದಾರೆ. ಇತ್ತೀಚೆಗೆಷ್ಟೇ ನಡೆದ ನಾಮಕರಣ ಶಾಸ್ತ್ರದಲ್ಲಿ ಪ್ರಣತಿ ತಮ್ಮೆಲ್ಲ ಫೊಟೋಶೂಟ್ ಆಸೆ ಈಡೇರಿಸಿಕೊಂಡಿದ್ದಾರೆ.
ಪ್ರಣತಿಯವರ ಮಾತಿನ ಪ್ರಕಾರ ಆಕೆಯ ಜೀವನದಲ್ಲಿ ನಡೆದಿರುವುದೆಲ್ಲ ಅನಿರೀಕ್ಷಿತಗಳೇ! ಗಾಯಕಿಯಾಗಬೇಕು ಎಂದುಕೊಂಡಿದ್ದವರು ಸಿನಿಮಾದಲ್ಲಿ ನಾಯಕಿಯಾದ್ರು.. ಒಂದಷ್ಟು ಕಿರುಚಿತ್ರಗಳಲ್ಲಿ ನಟಿಸಿದ ಬಳಿಕ ಒಂದ್ ಕಥೆ ಹೇಳ್ಳಾ ಎನ್ನುವ ಚಿತ್ರದ ಮೂಲಕ ಬೆಳ್ಳಿತೆರೆಯಲ್ಲೂ ಕಾಣಿಸಿಕೊಂಡ್ರು.. ಫ್ಯಾನ್ ಎನ್ನುವ ಸಿನಿಮಾದಲ್ಲಿ ನಾಯಕಿಯ ಸ್ನೇಹಿತೆಯಾಗಿದ್ರು.. ಇನ್ನೇನು ಚಿತ್ರರಂಗದಲ್ಲೇ ಮುಂದುವರಿಯಬೇಕು ಅಂದುಕೊಂಡಿದ್ದಾಗ ತಾವೇ ಮೆಚ್ಚಿದ ಹುಡುಗನ ಜೊತೆ ಮದುವೆಯೂ ಆಗ್ಬಿಟ್ರು. ಇದೀಗ ಮುದ್ದಾದ ಮಗುವಿಗೆ ತಾಯಿಯಾಗಿದ್ದಾರೆ. ಇತ್ತೀಚೆಗೆ ವಿವಾಹಿತ ನಟಿಯರು, ಮಕ್ಕಳ ತಾಯಂದಿರು ನಾಯಕಿಯಾಗುವ ಟ್ರೆಂಡ್ ಕನ್ನಡದಲ್ಲಿಯೂ ಶುರುವಾಗಿದೆ. ಅದಕ್ಕೆ ದೊಡ್ಡ ಉದಾಹರಣೆ ದಿಯಾ ಖ್ಯಾತಿಯ ನಟಿ ಖುಷಿ. ಅಂಥದೊಂದು ಮರು ಪ್ರವೇಶ ಪ್ರಣತಿ ಆರ್ ಗಾಣಿಗ ಅವರಿಂದ ನಡೆದರೂ ಅಚ್ಚರಿ ಇಲ್ಲ.