ನಟ ಸತ್ಯಜಿತ್ ಸಾವು

ಹಿರಿಯ ನಟ ಸತ್ಯಜಿತ್ ಮಧ್ಯರಾತ್ರಿ ಎರಡು ಗಂಟೆಗೆ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರ ನಿಧನದ ಬಗ್ಗೆ ಪುತ್ರ ಆಕಾಶ್ ತಿಳಿಸಿದ್ದಾರೆ.

ಚಿತ್ರರಂಗದಲ್ಲಿನ 40 ವರ್ಷಗಳ ವೃತ್ತಿ ಬದುಕಿನಲ್ಲಿ ಪೋಷಕ ನಟರಾಗಿ 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಕೀರ್ತಿ ಸತ್ಯಜಿತ್ ಅವರದಾಗಿತ್ತು. ಮೊದಲೇ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದ ಅವರು ಕಳೆದ ಶುಕ್ರವಾರ ಮಧ್ಯಾಹ್ನ ಹೃದಯಾಘಾತಕ್ಕೊಳಗಾಗಿದ್ದ ಅವರನ್ನು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅನಾರೋಗ್ಯದಿಂದಾಗಿ ಮೂರು ವರ್ಷಗಳ ಹಿಂದೆ ಅವರ ಒಂದು ಕಾಲನ್ನು ಕತ್ತರಿಸಲಾಗಿತ್ತು. ಕಾಲು ಕಳೆದುಕೊಂಡ ಬಳಿಕ ಕೂಡ ಚೆನ್ನಾಗಿಯೇ ಇದ್ದರು. ಸಿನಿಮಾದಲ್ಲಿಯೂ ನಟಿಸಿದ್ದರು. ವೀಲ್ ಚೇರ್ ಬಳಸಿಕೊಂಡು ಸಕ್ರಿಯರಾಗಿಯೇ ಇದ್ದರು. ಆದರೆ ಮಗಳು ತಮ್ಮ ವಿರುದ್ಧ ಸಾರ್ವಜನಿಕವಾಗಿ ಮಾಡಿದ ಆಪಾದನೆ ಅವರಿಗೆ ತುಂಬ ನೋವು ನೀಡಿತ್ತು ಎಂದು ಮಗ ಆಕಾಶ್ ಮಾಧ್ಯಮಗಳಿಗೆ ತಿಳಿಸಿದ್ದರು. ಹಾಗಾಗಿ ಮೂರು ತಿಂಗಳಿನಿಂದ ಅವರ ಪರಿಸ್ಥಿತಿ ಗಂಭೀರವಾಗಿತ್ತು. ಈಗ ಕೂಡ ಆಸ್ಪತ್ರೆಯಲ್ಲಿರುವ ತಂದೆಯನ್ನು ಸಹೋದರಿಯನ್ನು ನೋಡಲು ಬಂದಿಲ್ಲ ಎಂದು ಅಲವತ್ತುಗೊಂಡಿದ್ದರು.

ಅದಕ್ಕೂ ಮೊದಲು ಸತ್ಯಜಿತ್ ತಾವು ಮಗಳಿಗೋಸ್ಕರ ಮನೆ ಮಾರಿ ಕಷ್ಟಪಟ್ಟಿದ್ದೇನೆ. ಓದಿಸಿದ್ದೇನೆ. ಈಗ ಆಕೆ ತನ್ನ ಮದುವೆಯ ಬಳಿಕ ನನಗೆ ಯಾವುದೇ ಸಹಾಯ ನೀಡುತ್ತಿಲ್ಲ ಎಂದು ಆಪಾದಿಸಿದ್ದರು. ಆದರೆ ತಂದೆಗೆ ನೀಡಿದ ಸಹಾಯದ ಬಗ್ಗೆ ದಾಖಲೆಗಳನ್ನು ನೀಡಿದ ಪುತ್ರಿ ಅಖ್ತರ್ ಸ್ವಲೇಹಾ ಮೂರು ವರ್ಷಗಳಿಂದ ತಂದೆಗೆ ದುಡ್ಡು ನೀಡುತ್ತಿರುವುದಾಗಿಯೂ ಆದರೆ ತಂದೆ ಯಾವುದೋ ಯೂಟ್ಯೂಬ್ ಸಂದರ್ಶನದಲ್ಲಿ ತನ್ನ ಬಗ್ಗೆ ಸುಳ್ಳನ್ನು ಹೇಳಿರುವುದಕ್ಕೆ ನೊಂದಿರುವುದಾಗಿಯೂ ಹೇಳಿಕೊಂಡಿದ್ದರು. ಸುಳ್ಳು ಆಪಾದನೆ ಮಾಡಿರುವುದಕ್ಕೆ, ಆ ಆಪಾದನೆಗಳಿಂದಾಗಿ ಬೆದರಿಕೆ ಕರೆ ಬಂದಿರುವುದಕ್ಕೆ ತಂದೆಯ ವಿರುದ್ಧ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು.

ಸತ್ಯಜಿತ್ ಅವರ ಮೂಲ ಹೆಸರು ಸೈಯ್ಯದ್ ನಿಜಾಮುದ್ದೀನ್. ಸಿನಿಮಾಗಾಗಿ ಸತ್ಯಜಿತ್ ಎಂದು ಹೆಸರು ಬದಲಾಯಿಸಲಾಗಿತ್ತು. ಬಸ್‌ ಚಾಲಕರಾಗಿ ವೃತ್ತಿಯಲ್ಲಿದ್ದ ಅವರು ಚಿತ್ರರಂಗದಲ್ಲಿ ಮೊದಲ ಅವಕಾಶ ಪಡೆದುಕೊಂಡಿದ್ದು ಹಿಂದಿ ಸಿನಿಮಾ ಅಂಕುಶ್‌ ಮೂಲಕ. 1986ರಲ್ಲಿ ತೆರೆಗೆ ಬಂದ ಆ ಚಿತ್ರದ ನಾಯಕ ನಾನಾ ಪಾಟೇಕರ್ ಆಗಿದ್ದರು. ಬಳಿಕ ಕನ್ನಡ ಚಿತ್ರರಂಗದಲ್ಲಿ ಅರುಣರಾಗ’ ಸಿನಿಮಾದ ಮೂಲಕ ವೃತ್ತಿ ಬದುಕು ಶುರು ಮಾಡಿದರು. ನಾಲ್ಕು ವರ್ಷಗಳ ಹಿಂದೆ ತೆರೆಕಂಡ ಪ್ರಿಯಾಂಕಾ ಅವರ ನಟನೆಯಸೆಕೆಂಡ್ ಹಾಫ್’ ಅವರ ಕೊನೆಯ ಚಿತ್ರವಾಗಿತ್ತು. ಅದಕ್ಕೂ ಮೊದಲು ಅವರು ದರ್ಶನ್ ನಟನೆಯ `ವಿರಾಟ್’ ಸಿನಿಮಾದಲ್ಲಿಯೂ ನಟಿಸಿದ್ದರು. ಪುತ್ರ ಆಕಾಶ್ ಕೂಡ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದಾರೆ.

‘ಅಪ್ಪು’ ಮೊದಲಾದ ಸಿನಿಮಾಗಳಲ್ಲಿನ ನಟನೆಯಿಂದ ಪ್ರೇಕ್ಷಕರ ಮನದಲ್ಲಿ ನೆನಪಾಗಿರುವ ಸತ್ಯಜಿತ್ ನೋವಿನ ಸಾವು ಕಾಣುವಂತಾಗಿದ್ದು ದುರಂತವೆಂದೇ ಹೇಳಬಹುದು. ಅವರ ಮೃತದೇಹವನ್ನು ಹೆಗಡೆ ನಗರದ ನಿವಾಸದಲ್ಲಿ ಇರಿಸಲಾಗಿದ್ದು ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆದಿವೆ.

Recommended For You

Leave a Reply

error: Content is protected !!