ಕೊರೊನಾ ವೈರಸ್ ಜಗತ್ತಿನಾದ್ಯಂತ ವ್ಯಾಪಿಸಿದ ಸಂದರ್ಭದಲ್ಲಿ ಸಾವಿರಾರು ಜನರು ಸಂಕಷ್ಟಕ್ಕೊಳಗಾಗಿದ್ದಾರೆ. ಈ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಆಗಿ ಹೋರಾಟಕ್ಕೆ ನಿಂತವರಲ್ಲಿ ಕನ್ನಡ ಚಿತ್ರರಂಗದ ಪ್ರಮುಖರು ಕೂಡ ಇದ್ದರು. ಅವರನ್ನು ಛಾಯಾಗ್ರಾಹಕರ ವತಿಯಿಂದ ಸನ್ಮಾನಿಸಲಾಯಿತು.
ಚಲನಚಿತ್ರ ವಾಣಿಜ್ಯ ಮಂಡಳಿಯ ಜೊತೆಗೆ ಒಂದಷ್ಟು ಚಿತ್ರೋದ್ಯಮದ ಪ್ರಮುಖರು ಕೈ ಜೋಡಿಸಿ ಫುಡ್‌ಕಿಟ್ ವಿತರಣೆ, ವ್ಯಾಕ್ಸಿನ್ ಕೊಡಿಸುವಂಥ ಕೆಲಸಗಳನ್ನು ಮಾಡಿದ್ದಾರೆ. ಅಂಥವರನ್ನು ಗುರುತಿಸಿ, ಆಹ್ವಾನಿಸಿ ಸತ್ಕರಿಸುವ ಕೆಲಸವನ್ನು ಕರ್ನಾಟಕ ಚಲನಚಿತ್ರ ಛಾಯಾಗ್ರಾಹಕರ ಸಂಘವು ಮಾಡಿದೆ. ಇದಕ್ಕಾಗಿಯೇ ಸಂಘದ ಸದಸ್ಯರು ಭಾನುವಾರ ರೇಣುಕಾಂಬ ಪ್ರಿವ್ಯೂ ಥೇಟರಿನಲ್ಲಿ ಒಂದು ಪುಟ್ಟ ಸಮಾರಂಭವನ್ನು ಸಹ ಏರ್ಪಡಿಸಿದ್ದರು.
ಸಭೆಯಲ್ಲಿ ನಿನ್ನೆಯಷ್ಟೇ ನಿಧನರಾದ ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ ಅವರಿಗೆ ಸಂತಾಪ ಸೂಚಿಸಲಾಯಿತು. ಕನ್ನಡ ಚಿತ್ರರಂಗದಲ್ಲಿ 600ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿವಿಧ ಪಾತ್ರಗಳ ಮೂಲಕ ಜನಮನದಲ್ಲಿ ನಿಂತಿರುವ ಅವರ ಸೇವೆಯನ್ನು ಸ್ಮರಿಸಲಾಯಿತು. ನಂತರ ಕೊರೋನಾ ಯೋಧರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಶ್ರೀಮತಿ ರೂಪಾ ಅಯ್ಯರ್, ಗಣೇಶರಾವ್ ಕೇಸರಕರ್, ನಟ, ನಿರ್ದೇಶಕ ಉಪೇಂದ್ರ ಪರವಾಗಿ ಆಗಮಿಸಿದ್ದ ನಿರಂಜನ್ ಸುಧೀಂದ್ರ ಅವರಿಗೆ ಸ್ಮರಣಫಲಕ ನೀಡಿ ಗೌರವಿಸಲಾಯಿತು. ಕೋವಿಡ್‌ನಿಂದಾಗಿ ಸಂಕಷ್ಟ ಎದುರಿಸುತ್ತಿದ್ದ ಚಿತ್ರರಂಗದ ಸಾಕಷ್ಟು ಜನರಿಗೆ ಇವರುಗಳು ನೆರವಾಗುವ ಮೂಲಕ ಆಸರೆಯಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದನ್ನು ವೇದಿಕೆಯಲ್ಲಿದ್ದ ಅತಿಥಿಗಳು ಸ್ಮರಿಸಿಕೊಂಡರು.
ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್, ಮಾಜಿ ಅಧ್ಯಕ್ಷ ಸಾರಾ.ಗೋವಿಂದು, ನಿರ್ದೇಶಕಿ ರೂಪಾ ಅಯ್ಯರ್, ನವ ನಟ ನಿರಂಜನ್, ನಟ ಗಣೇಶ್ ರಾವ್ ಕೇಸರಕರ್, ಕಲಾವಿದ ರವೀಂದ್ರನಾಥ್, ಛಾಯಾಗ್ರಾಹಕರ ಸಂಘದ ಜೆಜಿ ಕೃಷ್ಣ ಹಾಗೂ ಸಂಘದ ಇತರೆ ಸದಸ್ಯರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.