ಆಕರ್ಷಕ ಶೀರ್ಷಿಕೆ ಚಿತ್ರದತ್ತ ಪ್ರೇಕ್ಷಕರ ಗಮನ ಸೆಳೆಯುವ ಪ್ರಥಮ ಅಂಶ. ಅಂಥದೊಂದು ಶೀರ್ಷಿಕೆಯ ಅನಾವರಣ ಸೋಮವಾರ ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನೆರವೇರಿತು. ‘ಮಿಸ್ಟರ್ ಡಿ’ ಹೆಸರಿನ ಚಿತ್ರಕ್ಕೆ ಮುಹೂರ್ತ ನಡೆಯಿತು.
ಚಿತ್ರದ ನಿರ್ಮಾಪಕ ಸಿ.ಸಿ ರಮೇಶ್ ಅವರೇ ನಾಯಕರಾಗಿ ನಟಿಸುತ್ತಿರುವ ‘ಮಿಸ್ಟರ್ ಡಿ’ ಚಿತ್ರಕ್ಕೆ ನಿರ್ದೇಶಕರೂ ಅವರೇ. ಡಿ ಎಂದರೆ ಡಿಟೆಕ್ಟಿವ್, ಡ್ಯಾಡಿ, ಡಾಟರ್, ಡಿವೈನ್ ಹೀಗೆ ಏನು ಬೇಕಾದರೂ ಅಂದುಕೊಳ್ಳಬಹುದು. ಅದುವೇ ಚಿತ್ರದ ಸಸ್ಪೆನ್ಸ್ ಎಂದರು ರಮೇಶ್. ಎಲ್ಲರ ಜೀವನದಲ್ಲಿಯೂ ಕತ್ತಲು ಇರುತ್ತದೆ. ಆ ಕತ್ತಲಿನ ಕೊನೆಯಲ್ಲಿ ಕೂಡ ಒಂದು ಬೆಳಕಿರುತ್ತದೆ. ತನ್ನ 25 ವರ್ಷಗಳ ಜೀವನಾನುಭವದ ಹಿನ್ನೆಲೆ ಇರಿಸಿಕೊಂಡು ಆ ಬೆಳಕನ್ನು ಪತ್ತೆ ಮಾಡುವ ನಾಯಕನ ಪಾತ್ರ ತಮ್ಮದು ಎಂದು ಅವರು ಹೇಳಿದರು.
ಇಂಥದೊಂದು ಚಿತ್ರವನ್ನು ಕೈಗೆತ್ತಿಕೊಳ್ಳಲು ಛಾಯಾಗ್ರಾಹಕ ಅಣಜಿ ನಾಗರಾಜ್ ಮತ್ತು ಸಂಭಾಷಣೆಕಾರ ಬಿ. ಎ ಮಧು ಕಾರಣ ಎಂದರು ರಮೇಶ್. ಅಂದಹಾಗೆ ತಮ್ಮ ಸಹೋದರ ಕಲಾ ನಿರ್ದೇಶಕರಾದ ಪ್ರಕಾಶ್ ಕೂಡ ಜೊತೆಗೆ ಕೈ ಜೋಡಿಸಿರುವುದನ್ನು ಕೂಡ ರಮೇಶ್ ಖುಷಿಯಿಂದ ಹೇಳಿಕೊಂಡರು. ಜೊತೆಗೆ ಪತ್ನಿ ಪೂರ್ಣಿಮಾ ನಿರಂತರ ಸ್ಫೂರ್ತಿಯಾಗಿ ಜೊತೆಗಿದ್ದಾರೆ ಎಂದರು.
ಬಳಿಕ ಮಾತನಾಡಿದ ಸಂಭಾಷಣೆಕಾರ ಬಿ ಎ ಮಧು ಅವರು “ರಮೇಶ್ ಅವರು ನನಗೆ ಆತ್ಮೀಯರು. ಅವರ ಸಹೋದರ ಪ್ರಕಾಶ್ ಚಿಕ್ಕಪಾಳ್ಯ ಅವರಂತೂ ನನಗೆ ಎರಡು ದಶಕಗಳ ಸ್ನೇಹಿತ. ರಮೇಶ್ ಅವರ ಸಿನಿಮಾಸಕ್ತಿಗೆ ಪತ್ನಿ ಪೂರ್ಣಿಮಾ ಅವರು ನೀಡುವ ಪ್ರೋತ್ಸಾಹವನ್ನು ಕಣ್ಣಾರೆ ಕಂಡಿದ್ದೇನೆ. ಈ ಕುಟುಂಬದ ಒಗ್ಗಟ್ಟು, ಸಿನಿಮಾ ಕುರಿತಾದ ಪ್ಯಾಷನ್ ಮೆಚ್ಚಲೇಬೇಕು. ಚಿತ್ರದಲ್ಲಿ ‘ಡಿ’ ಎನ್ನುವುದು ಒಂದು ಪಾತ್ರ. ಎಲ್ಲ ಭಾವಗಳು ಎಲ್ಲರಲ್ಲೂ ಇರುತ್ತದೆ. ಅದನ್ನು ಎಕ್ಸ್ ಪ್ಲೋಸ್ ಮಾಡುವುದೇ ಡಿಯ ಕೆಲಸ. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದ್ದು ಮುಂದಿನ ಮಾಧ್ಯಮಗೋಷ್ಠಿಯಲ್ಲಿ ಚಿತ್ರದ ಎಲ್ಲ ಕಲಾವಿದರು ಮತ್ತು ತಂತ್ರಜ್ಞರ ಕುರಿತಾದ ಪಟ್ಟಿಯನ್ನು ನೀಡಬಹುದು” ಎಂದರು.
ಛಾಯಾಗ್ರಾಹಕ ಅಣಜಿ ನಾಗರಾಜ್ ಅವರು “ರಮೇಶ್ ಅವರು ಒಬ್ಬ ಪ್ರತಿಭಾವಂತ. ಅದನ್ನು ಚಿತ್ರದ ಮೂಲಕ ಸಾಬೀತುಪಡಿಸಲಿದ್ದಾರೆ” ಎಂದರು. ಪ್ರಕಾಶ್ ಚಿಕ್ಕಪಾಳ್ಯ “ನಾನೊಬ್ಬ ಕಲಾನಿರ್ದೇಶಕ. ವಾಗ್ಮಿಯಲ್ಲ. ಹಾಗಾಗಿ ಹೆಚ್ಚೇನು ಹೇಳುವುದಿಲ್ಲ” ಎಂದರು. ಮತ್ತೋರ್ವ ನಿರ್ಮಾಪಕರೂ, ಕರ್ನಾಟಕ ರಾಜ್ಯ ಮಾನವ ಹಕ್ಕು ಮತ್ತು ಭ್ರಷ್ಟಾಚಾರ ತಡೆ ವೇದಿಕೆ ದೆಹಲಿ ಇದರ ಉಪಾಧ್ಯಕ್ಷರಾದ ಕೆ. ಆರ್ ಆನಂದಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನವರಾತ್ರಿಯ ಐದನೇ ದಿನದ ಪೂಜೆಯ ಸಂದರ್ಭದಲ್ಲಿ ಚಿತ್ರದ ಮುಹೂರ್ತ ನೆರವೇರಿದ್ದು, ನಿರ್ಮಾಪಕ ಎಸ್ ಎ ಗೋವಿಂದರಾಜು ಅವರು ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಕ್ಲ್ಯಾಪ್ ಮಾಡಿದರು.