ವಿಆರ್ಎಲ್ ಸಂಸ್ಥೆಯು ‘ವಿಆರ್ಎಲ್ ಫಿಲಂ ಪ್ರೊಡಕ್ಷನ್ಸ್’ ಮೂಲಕ ಮೊದಲ ಸಲ ನಿರ್ಮಿಸುತ್ತಿರುವ ಚಿತ್ರ ‘ವಿಜಯಾನಂದ’. ಚಿತ್ರದ ಅದ್ಧೂರಿ ಮುಹೂರ್ತ ಸಮಾರಂಭ ಸದ್ಯದಲ್ಲೇ ಹುಬ್ಬಳ್ಳಿಯಲ್ಲಿ ನೆರವೇರಲಿದೆ ಎಂದು ತಿಳಿದು ಬಂದಿದೆ.
ಪದ್ಮಶ್ರೀ ಪುರಸ್ಕೃತ ಮತ್ತು ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಜೀವನ ಆಧಾರಿತ ಬಯೋಪಿಕ್ ‘ವಿಜಯಾನಂದ’ ಸಿದ್ಧವಾಗುತ್ತಿದೆ. ಚಿತ್ರಕ್ಕೆ ಪ್ರತಿಭಾನ್ವಿತ ಕಲಾವಿದರ ಆಯ್ಕೆಯನ್ನೂ ಮಾಡಲಾಗುತ್ತಿದೆ. ಆ ಪ್ರಯುಕ್ತ ಶನಿವಾರ ಬೆಂಗಳೂರಿನಲ್ಲಿ ಮೆಗಾ ಆಡಿಷನ್ ನಡೆಸಲಾಯಿತು. ಹೈಗ್ರೌಂಡ್ಸ್ ಕ್ರೆಸ್ಸೆಂಟ್ ರಸ್ತೆಯಲ್ಲಿನ ಶ್ರೀ ಗುರುರಾಜ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಆಡಿಷನ್ನಲ್ಲಿ ಸಾವಿರಾರು ಕಲಾವಿದರು ಆಗಮಿಸಿ ಪ್ರತಿಭೆ ಪ್ರದರ್ಶಿಸಿದರು.
ಬೆಳಗ್ಗೆ 10ರಿಂದ ಆರಂಭವಾದ ಆಡಿಷನ್ ಪ್ರಕ್ರಿಯೆ ಸಂಜೆ 6 ಗಂಟೆ ವರೆಗೂ ನಡೆಯಿತು. ಬರೋಬ್ಬರಿ 3ಸಾವಿರದಷ್ಟು ಅಭ್ಯರ್ಥಿಗಳು ಆಡಿಷನ್ ಎದುರಿಸಿದ್ದಾರೆ. ಕೇವಲ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆ ಮಾತ್ರವಲ್ಲದೆ, ಸುತ್ತಲಿನ ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಹಾಸನ ಜಿಲ್ಲೆಗಳಿಂದಲೂ ನಟನಾ ಆಕಾಂಕ್ಷಿಗಳು ಆಗಮಿಸಿ ತಮ್ಮ ಅಭಿನಯ ಚಾತುರ್ಯವನ್ನು ಪ್ರದರ್ಶಿಸಿದ್ದಾರೆ.
ವಿಆರ್ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ‘ವಿಜಯಾನಂದ’ ಚಿತ್ರದ ನಿರ್ಮಾಪಕರಾದ ಆನಂದ ಸಂಕೇಶ್ವರ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ, ಮಂಡಳಿಯ ಪದಾಧಿಕಾರಿಗಳ ಜತೆಗೆ ಉಭಯಕುಶಲೋಪರಿ ವಿಚಾರಿಸಿದರು. ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾರಾ ಗೋವಿಂದು, ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ಮಾಪಕ ಎನ್.ಎಮ್ ಸುರೇಶ್ ಆನಂದ ಸಂಕೇಶ್ವರ ಅವರನ್ನು ವಾಣಿಜ್ಯ ಮಂಡಳಿಗೆ ಮತ್ತು ಚಿತ್ರೋದ್ಯಮಕ್ಕೆ ಸ್ವಾಗತಿಸಿ, ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಸಾರಾ ಗೋವಿಂದು, ‘ಚಿತ್ರ ನಿರ್ಮಾಣ ಕ್ಷೇತ್ರಕ್ಕೆ ವಿಆರ್ಎಲ್ ಸಂಸ್ಥೆ ಅಡಿ ಇಟ್ಟಿರುವುದು ನಿಜಕ್ಕೂ ಖುಷಿಯ ವಿಚಾರ. ಈ ಸಂಸ್ಥೆಯಿಂದ ಮತ್ತಷ್ಟು, ಮಗದಷ್ಟು ಸಿನಿಮಾಗಳು ಬರಲಿ. ಕನ್ನಡ ಚಿತ್ರೋದ್ಯಮಕ್ಕೆ ಈ ಸಂಸ್ಥೆಯಿಂದ ಅಪಾರ ಕೊಡುಗೆ ಸಿಗಲಿ’ ಎಂದರು.
ಪ್ರಸ್ತುತ ಚಿತ್ರೀಕರಣ ಪೂರ್ವ ಕೆಲಸಗಳನ್ನು ಮುಗಿಸಿಕೊಂಡಿರುವ ‘ವಿಜಯಾನಂದ’ ತಂಡ ಕಲಾವಿದರ ಆಯ್ಕೆಯ ಕೊನೇ ಹಂತದಲ್ಲಿದೆ. ಇದು ಮುಗಿಯುತ್ತಿದ್ದಂತೆ ಇದೇ ಅಕ್ಟೋಬರ್ 24ರಂದು ಹುಬ್ಬಳ್ಳಿಯಲ್ಲಿ ಚಿತ್ರದ ಅದ್ದೂರಿ ಮುಹೂರ್ತ ಸಮಾರಂಭ ನಡೆಯಲಿದೆ. ಚಿತ್ರವನ್ನು ರಿಶಿಕಾ ಶರ್ಮಾ ನಿರ್ದೇಶನ ಮಾಡುತ್ತಿದ್ದು, ನಿಹಾಲ್ ರಜಪೂತ್ ನಾಯಕರಾಗಿ ನಟಿಸುತ್ತಿದ್ದಾರೆ. ಅನಂತ್ ನಾಗ್ ಚಿತ್ರದಲ್ಲಿ ವಿಜಯ್ ಸಂಕೇಶ್ವರ ಅವರ ತಂದೆಯ ಪಾತ್ರದಲ್ಲಿ ನಟಿಸಲಿದ್ದಾರೆ.