ಅಭಿಮಾನಿಗಳ ಅತೀವ ಪ್ರೀತಿಯಿಂದಾಗಿ ಕೆಲವೊಮ್ಮೆ ಕಲಾವಿದರೇ ಫಜೀತಿಗೆ ಒಳಗಾದ ಅನೇಕ ಸಂದರ್ಭಗಳಿರುತ್ತವೆ. ಹಿರಿಯ ನಟ ಉಮೇಶ್ ಅವರ ಜೀವನದಲ್ಲಿ ನಡೆದ ಅಂಥದೊಂದು ಘಟನೆಯ ಬಗ್ಗೆ ನಿಮ್ಮೊಂದಿಗೆ ಹಂಚಿಕೊಳ್ಳಲೇಬೇಕು.
ಹಿರಿಯ ಹಾಸ್ಯ ನಟ ಎಂ.ಎಸ್.ಉಮೇಶ್ ರವರು ಒಮ್ಮೆ ಬೆಂಗಳೂರಿಗೆ ಬರಲು ಹುಬ್ಬಳ್ಳಿಯ ರೈಲ್ವೇ ಸ್ಟೇಷನ್ ನಲ್ಲಿ ಟಿಕೇಟ್ ಗಾಗಿ ಸರತಿ ಸಾಲಿನಲ್ಲಿ ನಿಂತಿರುವದನ್ನು ಬಹಳ ಹೊತ್ತು ಗಮನಿಸಿದ ವ್ಯಕ್ತಿಯೊಬ್ಬರು ಉಮೇಶ್ ರವರ ಬಳಿ ಬಂದು ತನ್ನನ್ನು ಟಿ.ಟಿ.ಆರ್.ಎಂದು ಪರಿಚಯಿಸಿಕೊಂಡರು. ನಾನು ನಿಮ್ಮ ಅಭಿನಯದ ಬಹಳಷ್ಟು ಚಿತ್ರಗಳನ್ನು ನೋಡಿದ್ದೇನೆ. ನಿಮ್ಮನ್ನು ಭೇಟಿಯಾಗಿದ್ದು ನನಗೆ ಬಹಳ ಸಂತೋಷವಾಗುತ್ತಿದೆ. ನೀವು ಟಿಕೆಟ್ ತೆಗೆದುಕೊಳ್ಳಬೇಡಿ. ನನಗೆ ಅದೇ ಟ್ರೈನ್ ನಲ್ಲಿ ಡ್ಯೂಟಿ ಇದೆ. ಬನ್ನಿ ನನ್ನ ಜೊತೆ ಎಂದು ಬಲವಂತಪಡಿಸಿದ ಮೇಲೆ ಇಬ್ಬರೂ ರೈಲನ್ನು ಹತ್ತುತ್ತಾರೆ.
ರೈಲು ಹೊರಡುತ್ತದೆ..
ಇಬ್ಬರೂ ಬಹಳ ಹೊತ್ತು ವೈಯಕ್ತಿಕ ವಿಷಯಗಳನ್ನೂ ಚರ್ಚಿಸುತ್ತ ಪ್ರಯಾಣ ಸಾಗುತ್ತಾ ತುಮಕೂರು ಸ್ಟೇಷನ್ ತಲುಪತ್ತದೆ. ಅಲ್ಲಿ ಟಿ ಟಿ ಆರ್ ರೈಲಿನಿಂದ ಇಳಿದವರು ಮತ್ತೆ ಹತ್ತುವುದಿಲ್ಲ!
ರೈಲು ನಿಧಾನವಾಗಿ ಮುಂದೆ ಚಲಿಸುತ್ತದೆ. ಉಮೇಶ್ ರವರಿಗೆ ಸಣ್ಣದಾಗಿ ಆತಂಕ ಶುರುವಾಗುತ್ತದೆ.
ಕ್ರಮೇಣ ರೈಲಿನ ವೇಗ ಹೆಚ್ಚಿದಂತೆಲ್ಲಾ ಇಲ್ಲಿಂದ ಬೆಂಗಳೂರು ತಲುಪುವುದರೊಳಗೆ ಬೇರೆ ಯಾರಾದರೂ ಟಿಕೆಟ್ ಪರಿಶೋಧಕರು ಬಂದರೆ ಏನು ಗತಿ?! ಎಂಬ ಆತಂಕದಲ್ಲಿ ಹೃದಯದ ಬಡಿತವೂ ಹೆಚ್ಚಾಗುತ್ತದೆ.
ಹಾಗೂ ಹೀಗೂ…
ರೈಲು ಬೆಂಗಳೂರು ನಿಲ್ದಾಣದ ಹತ್ತಿರ ಬರುತ್ತಿರುವಂತೆ ತನ್ನ ವೇಗವನ್ನು ಕಡಿಮೆಗೊಳಿಸುತ್ತಾ ಪ್ಲಾರ್ಟ್ ಪಾರಂ ತಲುಪುವುದರೊಳಗಾಗಿ…
ಧೈರ್ಯ ತಂದುಕೊಳ್ಳುತ್ತಾ ರೈಲಿನಿಂದ ಜಿಗಿದು ರೈಲ್ವೇ ಟ್ರ್ಯಾಕ್ ಮೇಲೆ ಹಿಮ್ಮುಖವಾಗಿ ಓಡುತ್ತಾ ಮುಖ್ಯ ರಸ್ತೆಯನ್ನು ತಲುಪಿದರಂತೆ. ಒಮ್ಮೆ ಅಲ್ಲಿಂದ ಹೊರಬಂದ ಬಳಿಕ ಬದುಕಿದೆಯಾ ಬಡ ಜೀವವೇ ಜೀವವೇ ಎಂದು ನಿಟ್ಟುಸಿರು ಬಿಡುತ್ತಾರೆ ಉಮೇಶ್.