ತೆಲುಗು ಚಿತ್ರರಂಗದಿಂದ ಬಂದ ತಂತ್ರಜ್ಞರು ಸೇರಿಕೊಂಡು ಕನ್ನಡದ ಕಲಾವಿದರನ್ನು ಬಳಸಿಕೊಂಡು ಒಂದು ದ್ವಿಭಾಷಾ ಚಿತ್ರ ಮಾಡಿದ್ದಾರೆ. ಅದುವೇ ‘ಇಲ್ಲಿಂದ ಆರಂಭವಾಗಿದೆ’. ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಹಂಚಿಕೊಂಡ ಮಾಹಿತಿಗಳು ಇಲ್ಲಿವೆ.
ಚಿತ್ರದ ನಿರ್ದೇಶಕ ಲಕ್ಷ್ಮಣ ಚಾಪರ್ಲ ಅವರ ಪ್ರಕಾರ ಇದು ಎರಡು ಕುಟುಂಬಗಳ ನಡುವೆ ನಡೆಯುವ ಘರ್ಷಣೆಯ ಕತೆ. ಚಿತ್ರದಲ್ಲಿ ಲವ್ ಸ್ಟೋರಿ, ಡ್ರಾಮ, ಫೈಟು ಎಲ್ಲವೂ ತುಂಬಿರುವ ಒಂದು ಕಮರ್ಷಿಯಲ್ ಮಸಾಲ ಅನುಭವ ನೀಡಲಿದೆ ಎಂದು ಅವರು ಹೇಳಿದರು. ಚಿತ್ರದ ನಾಯಕ ಕೀರ್ತಿಕೃಷ್ಣ ಈ ಹಿಂದೆ ‘ಚಿನ್ನದ ಗೊಂಬೆ’ ಎನ್ನುವ ಚಿತ್ರದಲ್ಲಿ ನಟಿಸಿದ್ದರು. “ಈ ಚಿತ್ರದಲ್ಲಿ ಐದು ಫೈಟ್, ಒಂದು ಲವ್ ಜೊತೆಗೆ ಹಾರರ್ ಟಚ್ ಎಲ್ಲವೂ ಇದೆ. ತಂದೆಯ ಬಗ್ಗೆ ಗೊತ್ತಿಲ್ಲದ ನಾಯಕನ ಪರಿತಾಪವನ್ನು ಕೂಡ ತೋರಿಸಲಾಗಿದೆ. ಕೊರೊನಾ ಕಾರಣ ಚಿತ್ರ ಬಿಡುಗಡೆ ಹಂತಕ್ಕೆ ತರಲು ತಡವಾಯಿತು” ಎಂದರು.
ನಾಯಕಿ ನಿಖಿತಾ ಸ್ವಾಮಿ ನಟನೆಯ ‘ಇದು ಆಕಾಶವಾಣಿ ಬೆಂಗಳೂರು ನಿಲಯ’ ಚಿತ್ರ ಇತ್ತೀಚೆಗಷ್ಟೇ ತೆರೆಕಂಡಿತ್ತು. ಈ ಚಿತ್ರದಲ್ಲಿ ಕೂಡ ಪ್ರಧಾನ ಪಾತ್ರದಲ್ಲಿ ನಟಿಸಿರುವ ನಿಖಿತಾ “ಚಿತ್ರದಲ್ಲಿ ತಮ್ಮದು ಕಾಲೇಜ್ ಹುಡುಗಿಯ ಪಾತ್ರ. ಕತೆಯಲ್ಲಿ
ತಾಯಿ ಮಗಳ ಸಂಬಂಧವನ್ನು ಕೂಡ ತುಂಬ ಚೆನ್ನಾಗಿ ತೋರಿಸಿದ್ದಾರೆ. ಅನಾಥೆಯಾಗಿದ್ದು ಸಂಬಂಧಿಕರ ಮನೆಯಲ್ಲಿ ಬೆಳೆಯುವ ಹುಡುಗಿಯ ಪರಿಸ್ಥಿತಿ ಹೇಗಿರುತ್ತದೆ ಎನ್ನುವುದರ ಅನಾವರಣ ಕೂಡ ಚಿತ್ರದಲ್ಲಿದೆ ಎಂದರು. ಅಂದಹಾಗೆ ಕುಟುಂಬದಲ್ಲಿ ಪರಂಪರೆಯಿಂದ ಕಾಪಾಡಿಕೊಂಡು ಬಂದಿರುವ ಹಾರದ ಮಹಿಮೆಯನ್ನು ಕೂಡ ಚಿತ್ರ ತಿಳಿಸುತ್ತದೆ ಎಂದು ಕತೆಯ ಬಗ್ಗೆ ಕುತೂಹಲ ಮೂಡಿಸಿದರು ನಿಖಿತಾ.
ಜಯಕರ್ನಾಟಕ ಸಂಘಟನೆಯ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿರುವ ಕೃಷ್ಣಪ್ಪ ಅವರು ನಾಯಕ ಕೀರ್ತಿಕೃಷ್ಣ ಅವರ ತಂದೆ. ಚಿತ್ರದಲ್ಲೊಂದು ಪಾತ್ರ ಮಾಡಿರುವ ಅವರು ಕತೆ, ಚಿತ್ರಕತೆ ಬರೆದು ಚಿತ್ರ ನಿರ್ಮಿಸಿರುವ ಬಿ ನರಸಿಂಹ ರೆಡ್ಡಿಯವರ ಪರವಾಗಿ ಮಾತನಾಡಿದರು. ರೆಡ್ಡಿಯವರು ಕೊರೊನಾ ಸಂದರ್ಭದಲ್ಲಿ ತಮ್ಮ ಪತ್ನಿಯನ್ನು ಕಳೆದುಕೊಂಡವರು. ಅವರನ್ನು ಉಳಿಸಲು ಸಾಕಷ್ಟು ಖರ್ಚು ಮಾಡಿದವರು. ಆದರೆ ದುರದೃಷ್ಟವಶಾತ್ ಅವರ ಪತ್ನಿ ಬದುಕಲಿಲ್ಲ. ಇದೀಗ ತಮ್ಮ ಪೂರ್ತಿ ಗಮನವನ್ನು ಸಿನಿಮಾದತ್ತ ಮೀಸಲಾಗಿರಿಸಿದ್ದಾರೆ ಎಂದರು. ಬಳಿಕ ಮಾತನಾಡಿದ ನರಸಿಂಹ ರೆಡ್ಡಿಯವರು “ನಾನೊಬ್ಬ ರಾಜ್ ಕುಮಾರ್ ಅಭಿಮಾನಿ. ಹಾಗಾಗಿ ಚಿತ್ರವನ್ನು ಕನ್ನಡದಲ್ಲಿಯೇ ತೆಗೆಯಲು ತೀರ್ಮಾನಿಸಿದೆ. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಕೂಡ ರಾಜ್ ಕುಮಾರ್ ಎಂದೇ ಆಗಿರುತ್ತದೆ. ಇದರಲ್ಲಿ ಉತ್ತರ ಭಾರತದ ಖ್ಯಾತ ನಟರಾದ ಶಾಹುರಾಜ್ ಶಿಂಧೆ, ಪ್ರದೀಪ್ ರಾವುತ್ ಮತ್ತು ದೇವಗಿಲ್ ಕೂಡ ನಟಿಸಿದ್ದಾರೆ. ಮಾತ್ರವಲ್ಲ, ಕನಕಪುರದ 25ರಷ್ಟು ಮಂದಿ ಸ್ಥಳೀಯರನ್ನು ಕೂಡ ಬಳಸಿಕೊಳ್ಳಲಾಗಿದೆ” ಎಂದರು.
‘ಸಿರಿ ಮ್ಯೂಸಿಕ್’ ಮೂಲಕ ಹಾಡುಗಳನ್ನು ಹೊರತಂದಿರುವ ಮಾಲೀಕ ಚಿಕ್ಕಣ್ಣ, ವಿತರಕ ಚೇತನ್, ನೃತ್ಯ ನಿರ್ದೇಶಕ ಬಾಲಕೃಷ್ಣ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.