
ಈ ವಾರ ತೆರೆಕಾಣುವುದಾಗಿ ನಿರ್ಧಾರವಾಗಿದ್ದ ‘ಪ್ರೇಮಂ ಪೂಜ್ಯಂ’ ಚಿತ್ರವನ್ನು ಮುಂದಿನ ತಿಂಗಳು ಎರಡನೇ ವಾರಕ್ಕೆ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಈ ವಾರ ಡಾ. ಶಿವರಾಜ್ ಕುಮಾರ್ ಅವರ ಸಿನಿಮಾ ಬರುತ್ತಿರುವುದರಿಂದ ಅದರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳಲು ಪ್ರೇಮಂ ಪೂಜ್ಯಂ ನಿರ್ಧರಿಸಿದೆ.
ನಾಯಕಿಯ ಬಟ್ಟೆ ಕೂಡ ಸೋಕಬಾರದು..!
ಸಾಮಾನ್ಯವಾಗಿ ಪ್ರೇಮಚಿತ್ರದ ನಾಯಕ, ನಾಯಕಿ ಪರಸ್ಪರ ತಬ್ಬಿ ಮುತ್ತಿಟ್ಟರೂ ಅದನ್ನು ಪ್ರೇಮಿಗಳೆನ್ನುವ ಕಾರಣಕ್ಕೆ ಸಹಿಸಲಾಗುತ್ತದೆ. ಆದರೆ ಈ ಚಿತ್ರದಲ್ಲಿ ನಾಯಕ ನಾಯಕಿಯನ್ನು ಮುಟ್ಟುವುದು ಬಿಡಿ, ಹಾಡಿನಲ್ಲಿ ನಾಯಕಿಯ ಬಟ್ಟೆ ಸೋಕಿದರೂ ಆ ದೃಶ್ಯವನ್ನು ಬಳಸುತ್ತಿರಲಿಲ್ಲವಂತೆ ನಿರ್ದೇಶಕರು! ಯಾಕೆಂದರೆ ಇದು ಪರಸ್ಪರ ತಾಗಲೇಬಾರದ, ಪೂಜ್ಯ ಭಾವನೆಯ ಪ್ರೀತಿಯುಳ್ಳ ಕತೆ ಎನ್ನುವುದು ನಿರ್ದೇಶಕರ ಮಾತು. ನಾಯಕ ಪ್ರೇಮ್ ಪ್ರಕಾರ ತಮ್ಮ ಇದುವರೆಗಿನ 25 ಚಿತ್ರಗಳಲ್ಲಿ ಸಿಗದಂಥ ಅನುಭವ ಈ ರೀತಿ ಪ್ರೇಮಂ ಪೂಜ್ಯಂ ನೀಡಿದೆಯಂತೆ. “ಆದರೂ ಚಿತ್ರಕ್ಕೆ ಯು.ಎ ಸರ್ಟಿಫಿಕೇಟ್ ದೊರಕಿದೆ. ನಿಜವಾಗಿ ನೋಡಿದರೆ ಯು ನೀಡಬಹುದಿತ್ತು” ಎನ್ನುತ್ತಾರೆ ನಿರ್ದೇಶಕ ಡಾ.ರಾಘವೇಂದ್ರ.
ಸಿಂಗಲ್ ಥಿಯೇಟರ್ ನನ್ನ ಕುಟುಂಬ
ಪ್ರೇಮ್ ಸಾಮಾನ್ಯವಾಗಿ ಒಂದು ವಿಚಾರಕ್ಕೆ ಕಮಿಟ್ ಆದರೆ ಆ ಮಾತನ್ನು ಉಳಿಸಲು ಸಾಕಷ್ಟು ಪ್ರಯತ್ನ ಪಡುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಬಾರಿ ತಮ್ಮ ಚಿತ್ರ ಸಾಧ್ಯವಾದಷ್ಟು ಸಿಂಗಲ್ ಥಿಯೇಟರ್ ಗಳನ್ನು ಕೂಡ ತಲುಪಬೇಕು ಎನ್ನುವ ನಿರ್ಧಾರವನ್ನು ಪ್ರೇಮ್ ತೆಗೆದುಕೊಂಡಿದ್ದಾರೆ. ಯಾಕೆಂದರೆ ತಮ್ಮ ಇದುವರೆಗಿನ ಬೆಳವಣಿಗೆಯಲ್ಲಿ ಅವರ ಪಾತ್ರ ಪ್ರಮುಖವಾಗಿದ್ದು, ಅವರು ನನ್ನ ಕುಟುಂಬದಂತೆ ಆತ್ಮೀಯರು. ಹಾಗಾಗಿ ಮಲ್ಟಿಪ್ಲೆಕ್ಸ್ ಮಾತ್ರ ಫೋಕಸ್ ಮಾಡಿ ಬಿಡುಗಡೆ ಮಾಡುವ ಯೋಜನೆ ಇಲ್ಲ. ಸಾಧ್ಯವಾದಷ್ಟು ಎಲ್ಲ ಊರುಗಳನ್ನು ತಲುಪುವಂತೆ ಮಾಡಲಿದ್ದೇವೆ ಎಂದರು. ಇದಕ್ಕೆ ಧ್ವನಿಗೂಡಿಸಿದ ವಿತರಕ ಜಗದೀಶ್ ಅವರು, ಚಿತ್ರ ಮೊದಲ ವಾರ 1200 ಶೋಸ್ ಕಾಣುವ ಬಗ್ಗೆ ಈಗಾಗಲೇ ಲೆಕ್ಕಾಚಾರ ಹಾಕಲಾಗಿದೆ. ಮುಂದಿನ ದಿನಗಳಲ್ಲಿ ಶೋಗಳ ಸಂಖ್ಯೆ ಇನ್ನಷ್ಟು ಹೆಚ್ಚಬಹುದು. ಆದರೂ ಚಿತ್ರ ತೆರೆಕಂಡ ಎರಡನೇ ವಾರದಿಂದ ಪ್ರೇಕ್ಷಕರ ಪ್ರತಿಕ್ರಿಯೆಗೆ ಅನುಸಾರವಾಗಿ ಇನ್ನಷ್ಟು ಥಿಯೇಟರ್ ಹೆಚ್ಚಿಸುವ ಯೋಜನೆ ಇದೆ ಎಂದರು.
ಎರಡು ಮುಕ್ಕಾಲು ಗಂಟೆಯ ಸಿನಿಮಾ
ಚಿತ್ರ ಕನ್ನಡ ಭಾಷೆಯಲ್ಲಿ ಮಾತ್ರ ತೆರೆಕಾಣುತ್ತಿದ್ದರೂ ಕೇರಳದಲ್ಲಿ ಮಲಯಾಳಂ ಸಬ್ ಟೈಟಲ್ ಹಾಕಿ ಪ್ರದರ್ಶಿಸುವ ಯೋಜನೆ ಹಾಕಲಾಗಿದೆ. ಚಿತ್ರದ ಕಾಲಾವಧಿ ಸುಮಾರು ಎರಡೂ ಮುಕ್ಕಾಲು ಗಂಟೆ ಇರುತ್ತದೆ. ಆದರೆ ಇದು ದೀರ್ಘವಾಗಿದೆ ಎನ್ನುವ ಭಾವನೆಯನ್ನು ಪ್ರೇಕ್ಷಕರಲ್ಲಿ ಮೂಡಿಸದೇ ಮುಂದೆ ಸಾಗುತ್ತದೆ. ಉದಾಹರಣೆಗೆ ಮೂರು ಗಂಟೆಗೂ ಮೀರಿದ ಲಗಾನ್ ಸಿನಿಮಾ ಸೂಪರ್ ಹಿಟ್ ಆಗಿಲ್ಲವೇ? ಅದೇ ರೀತಿ ಈ ಚಿತ್ರ ಕೂಡ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲಿದೆ ಎನ್ನುವ ಭರವಸೆಯನ್ನು ನಿರ್ದೇಶಕ ಡಾ. ರಾಘವೇಂದ್ರ ಅವರು ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ನಾಯಕಿ ಬೃಂದಾ ಆಚಾರ್ಯ ಚಿತ್ರದ ಬಗ್ಗೆ ತುಂಬ ನಿರೀಕ್ಷೆ ಇರಿಸಿಕೊಂಡಿರುವುದಾಗಿ ಹೇಳಿದರು.