ಕನ್ನಡ ಚಿತ್ರರಂಗದ ಜನಪ್ರಿಯ ತಾರೆ ಪುನೀತ್ ರಾಜ್ ಕುಮಾರ್ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಹೃದಯಾಘಾತಕ್ಕೆ ಒಳಗಾದ ಅವರನ್ನು ಚಿಂತಾಜನಕ ಪರಿಸ್ಥಿತಿಯಲ್ಲಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರ ಜೀವ ಬೆಳಿಗ್ಗೆ ಹನ್ನೊಂದುವರೆ ಹೊತ್ತಿಗೆ ಇಹಲೋಕ ತ್ಯಜಿಸಿತು.
ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿದ್ದ ಪುನೀತ್ ಅವರು ನಾಯಕರಾಗಿ ಕೂಡ ತುಂಬ ಸಕ್ರಿಯರಾಗಿದ್ದವರು. 2002ರಲ್ಲಿ ತೆರೆಕಂಡ ಪೂರಿ ಜಗನ್ನಾಥ್ ನಿರ್ದೇಶನದ ‘ಅಪ್ಪು’ ಚಿತ್ರದ ಮೂಲಕ ನಾಯಕರಾಗಿ ಎಂಟ್ರಿ ನೀಡಿದ ಅವರು ಬಳಿಕ ಅಭಿ, ವೀರ ಕನ್ನಡಿಗ, ಮೌರ್ಯ, ಆಕಾಶ್, ನಮ್ಮ ಬಸವ, ಅಜಯ್ ಮುಂತಾದ ಚಿತ್ರಗಳ ಮೂಲಕ ಜನಪ್ರಿಯ ತಾರೆಯಾದವರು. ನಾಯಕನಾಗಿ ನಟಿಸಿದ ಮೊದಲ ಹತ್ತು ಸಿನಿಮಾಗಳು ಕೂಡ ಶತದಿನಾಚರಣೆ ಕಂಡ ದಾಖಲೆ ಅವರ ಹೆಸರಿನಲ್ಲಿದೆ.
ಪುನೀತ್ ರಾಜ್ ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ನಾಳೆ (ಶನಿವಾರ) ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯಾದ್ಯಂತ ರುಪ್ಸಾ ಅಡಿಯಲ್ಲಿ ಬರುವ ಖಾಸಗಿ ಶಾಲೆಗಳಿಗೆ ರಜೆ ನೀಡಿರುವುದಾಗಿ ಘೋಷಿಸಲಾಗಿದೆ.
ಬಾಲನಟನಾಗಿ ನಟಿಸಿದಾಗಲೇ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಪುನೀತ್ ರಾಜ್ ಕುಮಾರ್ ಅವರ ಅಂತ್ಯಸಂಸ್ಕಾರವನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಿರುವುದಾಗಿ ತಿಳಿದು ಬಂದಿದೆ. ಪುನೀತ್ ರಾಜ್ ಕುಮಾರ್ ಅವರ ಹಿರಿಯ ಪುತ್ರಿ ಜರ್ಮನಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕಾರಣ, ಅವರ ಆಗಮನದ ಬಳಿಕ ಭಾನುವಾರದಂದು ಅಂತ್ಯಕ್ರಿಯೆ ನೆರವೇರಲಿದೆ ಎನ್ನಲಾಗಿದೆ. ಇಂದು ಸಂಜೆಯಿಂದ ಪಾರ್ಥಿವ ಶರೀರವನ್ನು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯೆಯು ಕಂಠೀರವ ಸ್ಟುಡಿಯೋದ ಡಾ.ರಾಜ್ ಮತ್ತು ಪಾರ್ವತಮ್ಮ ಅವರ ಸಮಾಧಿಯ ಸಮೀಪದಲ್ಲೇ ನೆರವೇರಲಿದೆ.
ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೇರಿದಂತೆ ಪ್ರಮುಖ ವ್ಯಕ್ತಿಗಳೆಲ್ಲರೂ ಪುನೀತ್ ಅವರ ದುರಂತ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಅಂತ್ಯಕ್ರಿಯೆಯಲ್ಲಿ ಕೂಡ ಸಹಸ್ರಾರು ಅಭಿಮಾನಿಗಳ ಜೊತೆಗೆ ಸಾಕಷ್ಟು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ.