
ರಮೇಶ್ ಅರವಿಂದ್ ಅವರನ್ನು ಕೌಟುಂಬಿಕ ಚಿತ್ರದಲ್ಲಿ ನೋಡಿದ್ದೇವೆ. ಪತ್ತೇದಾರಿ ಸಿನಿಮಾದಲ್ಲಿ ಕೂಡ ನೋಡಿದ್ದೇವೆ. ಆದರೆ ಇದೀಗ ಫ್ಯಾಮಿಲಿ ಥ್ರಿಲ್ಲರ್ ಮೂಲಕ ಬರುತ್ತಿದ್ದಾರೆ ಎನ್ನುವುದನ್ನು 100 ಚಿತ್ರದ ಟ್ರೇಲರ್ ಸಾಬೀತು ಮಾಡಿದೆ.
“ಹಂಡ್ರೆಡ್ ಎಂದ ಕೂಡಲೇ ಪೊಲೀಸ್ ನೆನಪಾಗುತ್ತದೆ. ಇದು ಕೂಡ ಪೊಲೀಸ್ ಚಿತ್ರವೇ. ಪೊಲೀಸ್ ಆಫೀಸರ್ ಕತೆ. ಫ್ಯಾಮಿಲಿ ಒಳಗೆ ನಡೆಯುವ ಥ್ರಿಲ್ಲರ್. ಹಿಂದೆ ಎಲ್ಲ ಅಪರಿಚಿತರಿಂದ ಚಾಕಲೇಟ್ ತಗೋಬೇಡಿ ಅಂತಿದ್ರು. ಈಗ ಅಂಥ ಅಪರಿಚಿತರು ನಮ್ಮ ಮನೆಯೊಳಗೆ ನೇರವಾಗಿ ಬರುತ್ತಿದ್ದಾರೆ; ಅದು ಮೊಬೈಲ್ ಮೂಲಕ. ಚಾಕಲೇಟ್ ಬದಲು ಬೇರೇನೋ ಆಮಿಷ ತೋರಿಸುತ್ತಾರೆ. ಹೊರಗಡೆ ಸೆಕ್ಯುರಿಟಿ ಗಾರ್ಡ್ ಇದ್ದರೂ ಉಪಯೋಗವಿಲ್ಲ. ನಾವು ಮಕ್ಕಳಿಗೆ ನೀಡಿದ ಮೌಲ್ಯವನ್ನು ಒಡೆಯುವಂಥ ಪ್ರಯತ್ನ ನಡೆಯುತ್ತಿದೆ. ಹೀಗೆ ಆನ್ಲೈನ್ ಮೂಲಕ ಹೇಗೆ ಮೋಸ ನಡೆಯಬಹುದು ಮತ್ತು ಅದರಿಂದ ಹೇಗೆ ಫ್ಯಾಮಿಲಿ ಒಡೆಯುತ್ತದೆ ಎಂದು ತೋರಿಸಿದ್ದೇವೆ” ಎಂದರು ರಮೇಶ್ ಅರವಿಂದ್.
ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿಯವರ ಬಗ್ಗೆ ಮಾತನಾಡಿದ ರಮೇಶ್ “ಸುಧಾ ಮೂರ್ತಿಯವರ ಜೊತೆಗೆ ಬಂದಿರುವ ಕಾರಣ ಇರಬೇಕು, ಇವರು ಕೂಡ ವಿಶಾಲ ಹೃದಯಿ. ಅದನ್ನು ಚಿತ್ರ ನಿರ್ಮಾಣದ ವಿಚಾರದಲ್ಲಿ ತೋರಿಸಿದ್ದಾರೆ. ಯಾಕೆಂದರೆ ಸಿನಿಮಾ ಬಿಡುಗಡೆ ಮತ್ತು ಪ್ರಚಾರದಲ್ಲಿ ಕೂಡ ಆಸಕ್ತಿ ವಹಿಸಿ ಭಾಗಿಯಾಗಿರುವ ಅಪರೂಪದ ನಿರ್ಮಾಪಕ ಎಂದರು. ಛಾಯಾಗ್ರಾಹಕ ಸತ್ಯ ಹೆಗಡೆ ‘ಪ್ಯಾರಿಸ್ ಪ್ಯಾರಿಸ್’ನಲ್ಲಿಯೂ ಜೊತೆಗಿದ್ದರು. ಅವರು ಅದ್ಭುತ ಕ್ಯಾಮೆರಾಮ್ಯಾನ್. ಅದೇ ರೀತಿ ಚಿತ್ರಕ್ಕೆ ಮೋಹನ್ ಪಂಡಿತ್ ಆರ್ಟ್ ಡೈರೆಕ್ಟರ್. ಚಿತ್ರ ಮಂದಿರದಲ್ಲಿ ತೆಗೆಯಬೇಕಾದ ಒಂದು ಶಾಟ್ ಅನ್ನು ಆಫೀಸ್ ಮೇಲೆಯೇ ಸೆಟ್ ಹಾಕಿ ತೆಗೆಯಲು ವ್ಯವಸ್ಥೆ ಮಾಡಿಕೊಟ್ಟರು.
ಅಸಿಸ್ಟೆಂಟ್ ಎಡಿಟರ್ ಆಗಿದ್ದ ಶ್ರೀನಿವಾಸ್ ಅವರನ್ನು ಈ ಚಿತ್ರದ ಮೂಲಕ ಎಡಿಟರ್ ಮಾಡಲಾಗಿದೆ. ಇವತ್ತು ಬಿಡುಗಡೆಯಾದ ಟ್ರೇಲರ್ ಅವರ ಕಾರ್ಯವೈಖರಿಗೆ ಸಾಕ್ಷಿ” ಎಂದರು ರಮೇಶ್. ಪ್ರತಾಪ್ ಮತ್ತು ಜಂಬೆ ಎನ್ನುವ ತಮ್ಮ ಇಬ್ಬರು ಅಸೋಸಿಯೇಟ್ ಗಳನ್ನು ಕೂಡ ರಮೇಶ್ ಈ ಸಂದರ್ಭದಲ್ಲಿ ಪರಿಚಯಿಸಿದರು.
ಚಿತ್ರದಲ್ಲಿ ರಚಿತಾ ರಾಮ್ ಒಂದು ಒಳ್ಳೆಯ ಪಾತ್ರ ಮಾಡಿದ್ದಾರೆ. ಆಕೆಯನ್ನು ನಾನು ‘ಬಬ್ಲಿ ಹುಡುಗಿ’ ಎಂದು ಕರೆಯುತ್ತೇನೆ. ಯಾಕೆಂದರೆ ಅಷ್ಟೊಂದು ಉತ್ಸಾಹದ ಚಿಲುಮೆ ಆಕೆ. ಜೊತೆಗೆ ನಟಿ ಪೂರ್ಣ ಅವರು ಕೂಡ ಒಂದು ಪ್ರಧಾನ ಪಾತ್ರ ಮಾಡಿದ್ದಾರೆ. ಪ್ರಕಾಶ್ ಬೆಳವಾಡಿ, ಶೋಭರಾಜ್ ಮೊದಲಾವರು ಚಿತ್ರದಲ್ಲಿರುವುದಾಗಿ ರಮೇಶ್ ಹೇಳಿದರು.
ಅಂದಹಾಗೆ “ಸಾಮಾಜಿಕ ಜಾಲತಾಣ ಎನ್ನುವುದು ವರ. ಅದನ್ನು ಶಾಪವಾಗಿಸಬೇಡಿ” ಎನ್ನುವುದು ಈ ಸಿನಿಮಾ ನೀಡುವ ಸಂದೇಶವಾಗಿದ್ದು, ಚಿತ್ರ ತೆಲುಗುವಲ್ಲಿಯೂ ತಯಾರಾಗಿದೆ. ‘ತಮಿಳಿನ ತಿರುಟು ಪಯಲೇ 2’ ಚಿತ್ರದ ರಿಮೇಕ್ ಇದು. ಆದರೆ ನಾನು ಚಿತ್ರಕತೆಯ ಬಹುಭಾಗವನ್ನು ಬದಲಾಯಿಸಿದ್ದೀನಿ. ರಚಿತಾ ರಾಮ್ ಪಾತ್ರ ಸೇರಿಸಿದ್ದೀನಿ.
ರವಿ ಬಸ್ರೂರು ಅದ್ಭುತವಾಗಿ ಸಂಗೀತ ನೀಡಿದ್ದಾರೆ. ಅವರ ಸ್ಟುಡಿಯೋದಲ್ಲಿ ಹೋಗಿ ಜೊತೆಗೆ ಕೆಲಸ ಮಾಡಿದ್ದೇನೆ” ಎಂದು ತಮ್ಮ ಹಂಡ್ರೆಡ್ ಅನುಭವಗಳನ್ನು ರಮೇಶ್ ಅರವಿಂದ್ ಮಾಧ್ಯಮದ ಮುಂದೆ ಹಂಚಿಕೊಂಡರು.
ನಿರ್ಮಾಪಕ ರಮೇಶ್ ರೆಡ್ಡಿ ಮಾತನಾಡಿ, “ನಾನು ಇದುವರೆಗೆ ಮೂರು ಚಿತ್ರ ಮಾಡಿದ್ದೇನೆ. ಆ ಮೂರು ಚಿತ್ರಗಳಿಗಿಂತ ನನಗೆ ಈ ಸಿನಿಮಾದ ಮೇಲೆ, ರಮೇಶ್ ಅರವಿಂದ್ ಮೇಲೆ ಪ್ರೀತಿ ಹೆಚ್ಚು. ಸಿನಿಮಾ ಶುರು ಮಾಡಿ ಹೇಗೆ ಮುಗಿಯಿತು ಅಂತಾನೇ ಗೊತ್ತಾಗದಷ್ಟು ಸ್ಮೂತ್ ಆಗಿ ಚಿತ್ರೀಕರಣ ಪೂರ್ತಿಯಾಗಿದೆ. ಈ ಕಾರಣಕ್ಕಾಗಿ ರಮೇಶ್ ಅವರಿಗೆ ಧನ್ಯವಾದ ಹೇಳಬೇಕಿದೆ” ಎಂದರು.

ವೇದಿಕೆಯಲ್ಲಿ ಛಾಯಾಗ್ರಾಹಕ ಸತ್ಯ ಹೆಗ್ಡೆ ಉಪಸ್ಥಿತರಿದ್ದರು. ಸುದ್ದಿ ಗೋಷ್ಠಿಯ ಆರಂಭದಲ್ಲಿ ಮೂವರು ಸೇರಿ ಇತ್ತೀಚೆಗೆ ತಾನೇ ನಮ್ಮನ್ನು ಅಗಲಿದ ಪುನೀತ್ ರಾಜ್ ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.